ಸರ್ಕಾರಿ ಶಾಲೆ, ನಮ್ಮೂರ ಶಾಲೆ- ನಮ್ಮ ಶಾಲೆ ಎಂಬ ಕಲ್ಪನೆ ಮಜಿ ಯಲ್ಲಿ ಸಾಕಾರಗೊಂಡಿದೆ, ದಾನಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಊರವರ ನೆರವಿನೊಂದಿಗೆ ಮುನ್ನಡೆಯುತ್ತಿರುವ ಈ ಶಾಲೆಯ ಚಟುವಟಿಕೆ ಅನುಸರಣೀಯ ಎಂದು ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಹೇಳಿದರು.
ತಾಲೂಕಿನ ವೀರಕಂಬ ಮಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲಾವಾರ್ಷಿಕೋತ್ಸವ ೯೭ರ ಪ್ರತಿಭಾ ಸಂಭ್ರಮ ದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.
ಶಾಲೆಯ ಉನ್ನತಿಗಾಗಿ ಹಳೆವಿದ್ಯಾರ್ಥಿ, ಸಂತೋಷ್ ಕುಮಾರ್ ಶೆಟ್ಟಿಯವರು ನೀಡುತ್ತಿರುವ ಕೊಡುಗೆ ಪ್ರಶಂಸನೀಯ ಎಂದ ಅವರು, ಶಾಲಾ ಏಳಿಗೆಗೆ ಊರವರ ಒಗ್ಗಟ್ಟು ನಿರಂತರವಾಗಿ ಮುನ್ನಡೆಯಲಿ ಎಂದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸಂಜೀವ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ತಾನು ಬಾಲ್ಯದಲ್ಲಿ ಶಾಲೆಗೆ ಬರಲು ಇದ್ದ ಕಷ್ಟದ ದಿನಗಳನ್ನು ಸ್ಮರಿಸಿದರಲ್ಲದೆ, ಮುಂದಿನ ದಿನಗಳಲ್ಲಿಯೂ ಶಾಲೆಗೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.
ಬಂಟ್ವಾಳ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾರಾಯಣ ಗೌಡರು ಮಾತನಾಡಿ, ಸರ್ವರ ಸಹಕಾರ ವಿದ್ದಾಗ ಸರ್ಕಾರದ ಯೋಜನೆಗಳು ಅರ್ಥ ಪೂರ್ಣ. ಅನುಷ್ಠಾನ ವಾಗುತ್ತದೆ ಎಂಬುದಕ್ಕೆ ಮಜಿ ಶಾಲೆ ಅತ್ಯುತ್ತಮ ಉದಾಹರಣೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯೆ ಗೀತಾ ಚಂದ್ರಶೇಖರ್, ವೀರಕಂಬ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲತಾ, ಸದಸ್ಯರಾದ ರಾಮಚಂದ್ರ ಪ್ರಭು, ಜನಾರ್ದನ ಪೂಜಾರಿ, ಜಯಂತಿ, ಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಉಗ್ಗಪ್ಪ ಶೆಟ್ಟಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸದಾಶಿವ ಅಳಿಕೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ, , ಬಂಟ್ವಾಳ ಎಸ್ಕೆಪಿಎ ಯ ಸುಕುಮಾರ್ ಬಂಟ್ವಾಳ, ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್, ಶಿಕ್ಷಣ ಸಂಘದ ಪ್ರತಿನಿಧಿಗಳಾದ ಶಿವಪ್ರಸಾದ್, ಜಯರಾಮ , ಚಿನ್ನ ವೀರಕಂಬ ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕ ನಾರಾಯಣ ಪೂಜಾರಿ, ಹಳೆ ವಸ್ತು ಸಂಗ್ರಹಕಾರ ಯಾಸೀರ್ ಕಲ್ಲಡ್ಕ, ಶಾಲೆಗೆ ಸಹಕಾರ ನೀಡಿದ ಮಹಮ್ಮದ್ ಶರೀಫ್ ಮೆಲ್ಕಾರ್ ಅವರನ್ನು ಸನ್ಮಾನಿಸಲಾಯಿತು.
ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ಸುತ್ತಲಿನ ಆವರಣ ಗೋಡೆಯಲ್ಲಿ ಪರಿಸರ ಸ್ವಚ್ಛತೆ ಬಗ್ಗೆ ಮಹತ್ವ ಕೊಡುವ ಚಿತ್ರಗಳನ್ನು ಬಿಡಿಸಲಾಗಿತ್ತು. ಏಳು ಬಣ್ಣದ ಧ್ವಜಾಗಳನ್ನು ಹಾರಿಸಲಾಗಿದೆ. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿದರು. ಶಿಕ್ಷಕಿ ಸಂಗೀತ ಶರ್ಮ ನಿರೂಪಿಸಿ, ವಂದಿಸಿದರು. ಶಕುಂತಳಾ ಎಂಬಿ ವರದಿ ಮಂಡಿಸಿದರು. ಸಭಾಕಾರ್ಯಕ್ರಮದ ಬಳಿಕ ಪಂಚರಂಗಿ ಫೊಂ ಪೋಂ ತಂಡದಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಬಳಿಕ ಶಾಲಾವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಿತು.