ಸಮಾಜವನ್ನು ತಿದ್ದುವ ಕೆಲಸವನ್ನು ಪುರೋಹಿತ ವರ್ಗದವರು ಮಾಡಬೇಕು. ಗುರು ಅನುಗ್ರಹದಿಂದ ಮಾಡುವ ಕಾರ್ಯದಲ್ಲಿ ಯಶಸ್ಸು ನಿಶ್ಚಿತ. ಪುರೋಹಿತ ವರ್ಗದವರಿಗೆ ಬೆದರಿಕೆ ಹಾಕುವ ಕಾರ್ಯ ಸರಿಯಲ್ಲ ಮತ್ತು ಖಂಡನೀಯ ಎಂದು ವೇದ ಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟ ಹೇಳಿದರು.
ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ಜನಭವನದಲ್ಲಿ ನಡೆದ ಗುರುಭಕ್ತ ವೈದಿಕ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಹವ್ಯಕ ಮಹಾಸಭಾ ನಿರ್ದೇಶಕ ಚೂಂತಾರು ಮಹೇಶ್ ಭಟ್ ಮಾತನಾಡಿ ಯಾರ ಹಂಗಿಗೂ ಒಳಪಡದ ಕಾರ್ಯ ವೈದಿಕರದ್ದಾಗಬೇಕು. ಗುರು ಪೀಠಕ್ಕೆ ನಿಷ್ಠೆಯಿಂದ ಇದ್ದಾಗ ಯಾವ ಸಮಸ್ಯೆಯೂ ಬರುವುದಿಲ್ಲ ಎಂದರು.
ಮಂಗಳೂರು ಮಂಡಲದ ವೈದಿಕ ವಿಭಾಗದ ವೇ. ಮೂ. ಅಮೈ ಶಿವಪ್ರಸಾದ್ ಮಾತನಾಡಿ ಅಸೂಯೆಯೋ, ವಿರೋಧದಿಂದಲೋ ಬೆದರಿಕೆ ಬಂದಿರುವ ಸಾಧ್ಯತೆ ಕಡಿಮೆ. ಬೆದರಿಕೆ ಕರೆ ಮಾಡಿದವರು ಹಲವು ದಿನಗಳಿಂದ ಈ ಪ್ರಯತ್ನ ಮಾಡಿರುವ ಸಾಧ್ಯತೆ ಇದೆ ಎಂದರು.
ಮಂಗಳೂರು ಮಂಡಲ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಸೇರಾಜೆ ಮಾತನಾಡಿ ದೂರವಾಣಿ ಕರೆ ಮಾಡಿದ ವ್ಯಕ್ತಿಯನ್ನು ಹುಡುಕಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ವೈದಿಕರಿಗೆ ಸೂಕ್ತ ರಕ್ಷಣೆ ನೀಡಿಬೆಕೆಂದು ಪೊಲೀಸ್ ಇಲಾಖೆಗೆ ಒತ್ತಡ ಹಾಕುವ ಕಾರ್ಯ ನಮ್ಮೆಲ್ಲರಿಂದ ನಡೆಯಬೇಕಾಗಿದೆ. ಪೂರ್ತಿ ಹವ್ಯಕ ಸಮಾಜ ಇಂತಹ ಘಟನೆಗಳ ಸಮಯದಲ್ಲಿ ಒಟ್ಟಿಗೆ ನಿಲ್ಲುತ್ತದೆ ಎಂದು ಹೇಳಿದರು.
ವೈದಿಕರಾದ ವೆ. ಮೂ. ಅನಂತ ಭಟ್ ಪರಕ್ಕಜೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹವ್ಯಕ ಮಹಾ ಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು ವಹಿಸಿದ್ದರು.
ಹವ್ಯಕ ಮಹಾ ಮಂಡಲ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಅಶೋಕ ಕೆದ್ಲ, ಮುಳ್ಳೇರಿಯ ಮಂಡಲ ಅಧ್ಯಕ್ಷ ಟಿ. ಶ್ರೀಕೃಷ್ಣ ಭಟ್ಟ, ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ಟ ಉಪಸ್ಥಿತರಿದ್ದರು. ಧರ್ಮ ಕರ್ಮ ವಿಭಾಗದ ಸಹ ನಿರ್ದೇಶಕ ಕೂಟೇಲು ಕೇಶವ ಭಟ್ಟ ಕಾರ್ಯಕ್ರಮ ನಿರೂಪಿಸಿದರು.