ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಸರಕಾರ ದ.ಕ.ಜಿಲ್ಲೆಯಲ್ಲಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಸೋಲಿನ ಭೀತಿಯಲ್ಲಿ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ಹಿಂದು ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಮೇಲೆ ಹಾಕಿರುವ ಗಡೀಪಾರು ಆದೇಶವೇ ಇದಕ್ಕೆ ಉದಾಹರಣೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿ.ಸಿ.ರೋಡಿನ ಪಕ್ಷ ಕಚೇರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೇರಳ ಕಮ್ಯೂನಿಷ್ಟರಿಗಿಂತಲೂ ಜಾಸ್ತಿ ಮಟ್ಟದ ರಾಜಕಾರಣ ದ.ಕ.ಜಿಲ್ಲೆಯಲ್ಲಿ ಆರಂಭಗೊಂಡಿದೆ. ಬಹುಸಂಖ್ಯಾತರ ಮೇಲೆ ಕೇಸು ಹಾಕುವುದು, ಅಲ್ಪಸಂಖ್ಯಾತರ ಋಣ ತೀರಿಸುವ ಮಾತನಾಡುವುದು ಇದರ ಒಂದು ಭಾಗ. ಕಾಂಗ್ರೆಸ್ ಗೆ ಸೋಲಿನ ಭೀತಿ ಎದುರಾಗಿದೆ. ಮುಂದೆ ಹಿಂದು ಸಮಾಜ ಇವುಗಳ ವಿರುದ್ಧ ಬೀದಿಗಿಳಿದರೆ ಎಲ್ಲ ಅನಾಹುತಗಳಿಗೆ ಸರಕಾರವೇ ಹೊಣೆಯಾಗುತ್ತದೆ ಎಂದು ನಳಿನ್ ಎಚ್ಚರಿಸಿದರು.
ಪುತ್ತೂರು ತಾಲೂಕಿನಲ್ಲಿ ಸಂಘ ಪರಿವಾರದ ಕಾರ್ಯಕರ್ತರು, ಮುಖಂಡರ ಮೇಲೆ ಪೊಲೀಸರಿಂದಲೇ ಹಲ್ಲೆ ನಡೆದಿದೆ ಎಂದು ಆಪಾದಿಸಿದ ಅವರು, ಕಲ್ಲಡ್ಕದ ರತ್ನಾಕರ ಶೆಟ್ಟಿ ಅವರನ್ನು ಗಡೀಪಾರು ಮಾಡಲು ಯಾವ ಗುರುತರ ಪ್ರಕರಣವಿದೆ ಎಂದು ಪ್ರಶ್ನಿಸಿದರು. ಮೂರು ದಿನಗಳ ಹಿಂದೆ ಕಲ್ಲಡ್ಕದಲ್ಲಿ ವೀರಕಂಭದ ಕೇಶವ ಎಂಬವರ ಮೇಲೆ ಹಲ್ಲೆಯಾಗಿದೆ. ಇನ್ನೂ ಆರೋಪಿಗಳ ಪತ್ತೆಹಚ್ಚುವ ಕೆಲಸವಾಗಿಲ್ಲ. ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ತಿಳಿಸಬೇಕು. ಪತ್ತೆಯಾಗದ ಹಲವು ಕೊಲೆ ಕೇಸು, ಅಪರಾಧಗಳು ದಾಖಲಾಗಿವೆ. ಇವೆಲ್ಲದರ ಹಿಂದೆ ಡ್ರಗ್ ಮಾಫಿಯಾ ಕೆಲಸ ಮಾಡಿದೆ. ಅವರನ್ನು ಯಾಕೆ ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿದ ನಳಿನ್, ಉಸ್ತುವಾರಿ ಸಚಿವರು ಡ್ರಗ್ ಮಾಫಿಯಾ ವಿರುದ್ಧ ಯಾಕೆ ಕ್ರಮ ಕೈಗೊಳ್ಳುವ ಮಾತಾಡುತ್ತಿಲ್ಲ ಎಂದು ಕೇಳಿದರು.
ಚುನಾವಣೆಗೆ ಆರು ತಿಂಗಳು ಇರುವ ಹಿನ್ನೆಲೆಯಲ್ಲಿ ಹಿಂದುಪರ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್, ಬೆದರಿಕೆ, ಸುಳ್ಳು ಕೇಸ್ ಮೂಲಕ ಬಂಧನ, ಅಮಾಯಕ ಕಾರ್ಯಕರ್ತರ ಮೇಲೆ ಸುಳ್ಳು ಕಾರಣ ಹೇಳಿ ದೂರು ನೀಡುವ ಕೆಲಸವಾಗುತ್ತಿದೆ. ಚುನಾವಣೆ ಸಂದರ್ಭ ಕಾರ್ಯಕರ್ತರ ಸ್ಥೈರ್ಯ ಉಡುಗಿಸುವ ಯತ್ನವಿದು ಎಂದು ಆಪಾದಿಸಿದ ನಳಿನ್, ಸಚಿವರು ಭಾಷಣಗಳಲ್ಲೇ ಅಲ್ಪಸಂಖ್ಯಾತರನ್ನು ಓಲೈಸುವ ಹೇಳಿಕೆ ನೀಡುತ್ತಿದ್ದಾರೆ. ಪೊಲೀಸ್ ಇಲಾಖೆಯನ್ನು ಬಳಸಿ ಅಲ್ಪಸಂಖ್ಯಾತರ ಋಣ ತೀರಿಸುವ ಕಾರ್ಯವನ್ನು ಮಾಡುತ್ತಿರುವ ಉಸ್ತುವಾರಿ ಸಚಿವರು ಹಿಂದು ದಮನಕಾರಿ ನೀತಿ ಅನುಸರಿಸುತ್ತಿದ್ದಾರೆ. ರತ್ನಾಕರ ಶೆಟ್ಟಿ ಗಡೀಪಾರು ಆದೇಶದ ಹಿಂದೆ ಅವರ ಹಸ್ತಕ್ಷೇಪವಿದೆ. ಅವರ ಸ್ವಕ್ಷೇತ್ರದಲ್ಲಿರುವ ರತ್ನಾಕರ ಶೆಟ್ಟಿ ಮೊದಲ ಬಲಿ. ಶೆಟ್ಟಿ ಅವರ ಮೇಲೆ ಇರುವ ಎಲ್ಲ ದಾವೆಗಳನ್ನೂ ಕೈಬಿಡಲಾಗಿದೆ. ಅವರು ಅಪರಾಧಿ ಎಂದಾದರೆ ಮೇಲ್ಮನವಿ ಸಲ್ಲಿಸಬೇಕಾಗಿತ್ತು. ಕೇಸ್ ಇರುವ ಹಲವಾರು ಮಂದಿ ತಾಲೂಕಿನಲ್ಲಿದ್ದಾರೆ ಅವರನ್ನು ಗಡೀಪಾರ ಮಾಡಲಾಗುತ್ತದೆಯೇ ಎಂದು ನಳಿನ್ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಸುಲೋಚನಾ ಜಿ.ಕೆ.ಭಟ್, ಜಿ.ಆನಂದ, ಬಿ.ದೇವದಾಸ ಶೆಟ್ಟಿ, ರಾಮದಾಸ ಬಂಟ್ವಾಳ, ವಜ್ರನಾಥ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.