ಕೈಕಟ್ – ಬಾಯ್ಮುಚ್ ಮದ್ವೆ ಆದ್ಮೇಲೆ ಮುಗೀತು. ಸುಮ್ನೆ ಕೂರೋದು ಮಾತ್ರ ಉಳಿಯೋದು ಎಂಬ ಲೇವಡಿಗಳು ಕಾಮನ್.
ಮದುವೆ ಆಗೋದು ಅಂದರೆ ತಮಾಷೆ ವಿಷಯವೇನಲ್ಲ! ಆದರೆ ಮದುವೆ ಆಗುವವರು ಸ್ನೇಹಿತರ ಪಾಲಿಗೆ ಒಂದೆರಡು ತಿಂಗಳು ತಿಳಿಹಾಸ್ಯಕ್ಕೆ ತುತ್ತಾಗುತ್ತಾರೆ. ಮದುಮಗ, ಮದುಮಗಳೆಂದು ಗಮ್ಮತ್ತು ಮಾಡುವ ಸ್ನೇಹಿತರು ಇರುತ್ತಾರೆ. ವರ್ಷವಾಗುತ್ತಿದ್ದಂತೆ ಮದುಮಗ, ಮದುಮಗಳ ಪಟ್ಟ ಜಾರಿಹೋಗುತ್ತದೆ…ಮತ್ತೊಬ್ಬರು ಸಜ್ಜಾಗುತ್ತಾರೆ! ಇದು ಸ್ನೇಹಿತರ ಗುಂಪಿನ ಮಾತಾಯಿತು.. ಆದರೆ ತಮ್ಮ ಮದ್ವೆ ಸದಾ ಕಾಲ ನೆನಪಿನಲ್ಲಿರುವಂತೆ ಆಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ನಾನಾ ರೀತಿಯ ಸಿದ್ಧತೆಗಳನ್ನು ರೂಪಿಸುವವರು ಇದ್ದಾರೆ. ಮದ್ವೆ ಕರೆಯೋಲೆಯೂ ಭಿನ್ನವಾಗಿರುತ್ತದೆ. ಕೆಲವೊಂದು ಇನ್ವಿಟೇಶನ್ ಗಳೇ ಲಕ್ಷದ ಹತ್ತಿರ ಬೆಲೆಬಾಳುವಂತಿರುತ್ತದೆ ಎಂಬ ಸುದ್ದಿ, ಸಮಾಚಾರಗಳನ್ನೆಲ್ಲ ನಾವು ಓದಿರುತ್ತೇವೆ.
ಸಿಂಪಲ್ ಆಗಿಯೂ ವಿಭಿನ್ನ ರೀತಿಯ ರೇಖಾಚಿತ್ರಗಳೊಂದಿಗೆ ಮದ್ವೆ ಹೇಳಿಕೆ ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟವರು ಪಟಪಟನೆ ಬಿಗ್ ಎಫ್ ಎಂ ನಲ್ಲಿ ಮಾತನಾಡುತ್ತಾ ಮನೆಮಾತಾಗಿರುವ ಕರಾವಳಿಯ ಪ್ರಸಿದ್ಧ ಆರ್.ಜೆ. ಎರೊಲ್ ಅವರ ಮದ್ವೆ ಕಾಗದ ವಿನ್ಯಾಸಗೊಳಿಸಿದ ಕರಣ್ ಆಚಾರ್ಯ.
ಹೊಸ ವರ್ಷಕ್ಕೆ ಕಾಲಿಟ್ಟು ಏಳು ದಿನಗಳಲ್ಲಿ ಎರೋಲ್ ಮದ್ವೆ ಆಗ್ತಾರೆ. ಮದ್ವೆ ಆಗೋದ್ರಲ್ಲೇನು ವಿಶೇಷ ಅಂದಿರಾ? ಮಾತಿನ ಮಲ್ಲ ಎರೋಲ್ ಅವರ ನಾಲಿಗೆಗೆ ಕತ್ರಿ ಹಾಕುವ ಚಿತ್ರದೊಂದಿಗೆ ಅವರ ಮದ್ವೆ ಇನ್ವಿಟೇಶನ್ ಅಚ್ಚಾಗಿರುವುದು ವಿಶೇಷ. ಮದ್ವೆ ಕುರಿತು ಪ್ರಚಲಿತವಿರುವ ವಿನೋದಗಳೆಲ್ಲವನ್ನೂ ಒಟ್ಟುಗೂಡಿಸಿ ಮಾಡಿರುವ ಇನ್ವಿಟೇಶನ್ ಈಗ ಸುದ್ದಿಯಲ್ಲಿದೆ.
ಮದುಮಗ ಮತ್ತು ಮದುಮಗಳ ಚಿತ್ರಗಳೊಂದಿಗೆ ಈ ಇನ್ವಿಟೇಶನ್ ಸಿದ್ಧಪಡಿಸಿದವರು ಕಲಾವಿದ ಕರಣ್ ಆಚಾರ್ಯ.ಈಗಾಗಲೇ ತಮ್ಮ ಪ್ರತಿಭೆ ಮೂಲಕ ಗುರುತಿಸಿಕೊಂಡಿರುವ ಕರಣ್ ಮದುಮಕ್ಕಳಿಬ್ಬರ ಉದ್ಯೋಗವನ್ನೇ ಪ್ರಧಾನವಾಗಿರಿಸಿಕೊಂಡು ಈ ಇನ್ವಿಟೇಶನ್ ಸಿದ್ಧಪಡಿಸಿದ್ದಾರೆ.
ಮದುಮಗ ಆರ್.ಜೆ. ಎರೋಲ್ ಮತ್ತು ಮದುಮಗಳು ಪತ್ರಿಕೋದ್ಯಮ ಪಾಠ ಮಾಡುವ ಉಪನ್ಯಾಸಕಿ. ಹೀಗಾಗಿ ಎರೋಲ್ ನಾಲಿಗೆಗೆ ಕತ್ತರಿ, ಮದುಮಗಳ ಕೈಕಾಲುಗಳನ್ನು ಕಟ್ಟಿಹಾಕಿದ ಚಿತ್ರ ಇನ್ವಿಟೇಶನ್ ನಲ್ಲಿದೆ. ನಿಮ್ಮ ಕೆಲಸ ಏನೇ ಇರಲಿ, ಮನೆಯಲ್ಲಿರೋವಾಗ ಗಂಡ, ಹೆಂಡ್ತಿ ಯಾಗೇ ಇರಿ ಎಂಬಂಥ ಚಿತ್ರ ಗಮನ ಸೆಳೆಯುತ್ತದೆ. ಹೀಗಾಗಿ ಎರೋಲ್ ವಿಲ್ಮಾ ಮದ್ವೆ ಹೇಳಿಕೆ ಕೊಡುವಾಗ ಪಡೆದುಕೊಳ್ಳುವವರ ಮೊಗದಲ್ಲೂ ಸಣ್ಣದೊಂದು ಮುಗುಳ್ನಗು ಹಾಯುವಂತೆ ಇನ್ವಿಟೇಶನ್ ಮಾಡುತ್ತದೆ. ಹ್ಯಾಷ್ ಟ್ಯಾಗ್ ನಲ್ಲಿ ವಿ ಲವ್, ವಿ ವೆಡ್ 2ಕೆ18 ಎಂದಿರುವುದೂ ಗಮನ ಸೆಳೆಯುವಂತೆ ಮಾಡಿದೆ.
ಸದಾ ಲವಲವಿಕೆಯಲ್ಲಿರುವ ಆರ್.ಜೆ. ಎರೋಲ್ ಮತ್ತು ವಿಲ್ಮಾ ಅವರಿಗೆ ಆಲ್ ದಿ ಬೆಸ್ಟ್. 2018 ಅವರಿಬ್ಬರಿಗೂ ಒಳ್ಳೆಯದು ಮಾಡಲಿ. ಆಲ್ ದಿ ಬೆಸ್ಟ್…