ಬಂಟರ ಸಮಾಜವು ಎಲ್ಲರನ್ನೂ ಪ್ರೀತಿಸುವ ಹಾಗೂ ಗೌರವಿಸುವ ಸಮಾಜವಾಗಿದೆ. ಬಂಟ ಸಮಾಜದಲ್ಲಿರುವ ಒಗ್ಗಟ್ಟು, ಸೌಹಾರ್ದತೆಯನ್ನು ಉಳಿಸಿ ಬೆಳೆಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.
ಭಾನುವಾರ ಸಂಜೆ ವಳವೂರು ಬಂಟರ ಭವನದಲ್ಲಿ ನಡೆದ ಬಂಟವಾಳ ತಾಲೂಕು ಬಂಟರ ಸಂಘದ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ, ಸಾಧನೆಯ ಹಾದಿಗೆ ನಿರಂತರ ಪರಿಶ್ರಮ ಹಾಗೂ ನಿಷ್ಠೆ ಅಗತ್ಯ ಎಂದರು.
ಎಂದ ಅವರು, ಉದ್ಯಮದಿಂದ ಹಿಡಿದು ನ್ಯಾಯಾಂಗ ವ್ಯವಸ್ಥೆಯವರೆಗೆ ನಮ್ಮ ಸಮುದಾಯ ಮುಂದಿದೆ. ಆದರೆ ಸರಕಾರಿ ಕ್ಷೇತ್ರದಲ್ಲಿ ಬಂಟ ಸಮುದಾಯದ ಸಂಖ್ಯೆ ಕಡಿಮೆಯಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ ವಿಚಾರದ ಕುರಿತು ತಿಳುವಳಿಕೆ ನೀಡುವ ಕೆಲಸ ಕೆಲಸವಾಗಬೇಕು. ಇದರರಲ್ಲಿ ಪೋಷಕರ ಪಾತ್ರ ಹಿರಿದು ಎಂದರು.
ಸಮಾಜದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶವಿದೆ. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ಸಾಧನೆಯ ಗುರಿಯನ್ನು ತಲುಪಬೇಕು ಎಂದು ಅವರು ಹೇಳಿದರು.
ಬಂಟವಾಳ ಬಂಟರ ಸಂಘವು ಬಲಿಷ್ಠ ಸಮಾಜ ನಿರ್ಮಾಣದ ಕನಸು ಹೊಂದಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಇದೇ ಸಂದರ್ಭದಲ್ಲಿ ತಾಲೂಕಿನ ಬಂಟ ಸಮುದಾಯದ ನಿವತ್ತ ಯೋಧರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು. ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ ಕೂರಿಯಾಳಗುತ್ತು, ತಾಲೂಕು ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಜೊತೆ ಕಾರ್ಯದರ್ಶಿ ನವೀನ್‌ಚಂದ್ರ ಶೆಟ್ಟಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮಿ ನಾರಾಯಣ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲಕೃಷ್ಣ ಶೆಟ್ಟಿ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.