ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಕನ್ಯಾಡಿ ಬ್ರಹ್ಮಾನಂದ ಶ್ರೀಗಳು ಮತ್ತು ಹರಿಕೃಷ್ಣ ಬಂಟ್ವಾಳ್ ಉಲ್ಲೇಖ
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಸುವರ್ಣ ಮಹೋತ್ಸವ ಆಚರಣೆ ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭ ಆಶೀರ್ವಚನ ನೀಡಿದ ಕನ್ಯಾಡಿ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ,ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ಸಮಾಜಕ್ಕಾಗಿ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಧರ್ಮದ ನೆಲೆಗಟ್ಟನ್ನು ಸಮಾಜಕ್ಕೆ ತೋರಿಸಿಕೊಟ್ಟವರು ಬ್ರಹ್ಮಶ್ರೀ ನಾರಾಯಣಗುರುಗಳು. ಸಮಾಜಕ್ಕೆ ಬೆಳಕುಚೆಲ್ಲಿದ ದಿವ್ಯಚೇತನ ಅವರು. ಎಲ್ಲ ವೇದಗಳ ಸಾರಾಂಶಗಳನ್ನು ತಂದ ದೊಡ್ಡ ಚೇತನ ನಾರಾಯಣಗುರುಗಳು. ಅವರ ನಂತರದ ದೊಡ್ಡ ದಿವ್ಯಶಕ್ತಿ ಜನಾರ್ದನ ಪೂಜಾರಿ. ನಾರಾಯಣಗುರುಗಳು ಏನೇನು ಹೇಳಿದರೋ, ಅವನ್ನೆಲ್ಲ ಮಾಡಿ ತೋರಿಸಿದವರು ಜನಾರ್ದನ ಪೂಜಾರಿ ಎಂದು ಸ್ವಾಮೀಜಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪೂರ್ವಾಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ, ಇವತ್ತು ಅದೆಷ್ಟೋ ಬಿಲ್ಲವರು, ಬಡವರು ಸ್ವಂತ ಕಾಲ ಮೇಲೆ ನಿಂತಿರುವುದರ ಹಿಂದೆ ಪೂಜಾರಿಯವರ ಶ್ರಮ ಇದೆ. ಕೋಟ್ಯಂತರ ಮಂದಿಗೆ ಉದ್ಯೋಗ ಕೊಡಿಸಿದವರು ಅವರು. ದೇಶದಲ್ಲಿ ಬಿಲ್ಲವರು ತಲೆಎತ್ತಿ ನಿಲ್ಲುವಂತೆ ಮಾಡಿದ ಪೂಜಾರಿಯವರಿಗೆ ಬೆಂಬಲ ನೀಡುವ ಛಾತಿ ಸಮುದಾಯಕ್ಕಿರಬೇಕು. ಜನಾರ್ದನ ಪೂಜಾರಿ ಅವರ ಬೆನ್ನ ಹಿಂದೆ ಬಿಲ್ಲವ ಸಮುದಾಯ ನಿಲ್ಲುವುದು ಅವರಿಗೆ ಸಲ್ಲಿಸುವ ಕೃತಜ್ಞತೆ. ಇಂದು ಬಿಲ್ಲವರು ಬಲ್ಲವರಾಗಬೇಕಾದರೆ, ರಾಜಕೀಯ ಶಕ್ತಿಯನ್ನು ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಶಕ್ತಿಯೊಂದರ ಅಗತ್ಯ ಬಿಲ್ಲವರಿಗಿದೆ. ಸಮುದಾಯದ ನೈತಿಕತೆಯನ್ನು ಕಾಪಾಡುವುದು, ಕೋಮುವಾದಿ ಸಮಾಜವನ್ನು ಸೆಕ್ಯುಲರ್ ಸಮಾಜವನ್ನಾಗಿ ಕಟ್ಟುವುದು ಮಹಿಳೆಯರಿಂದ ಸಾಧ್ಯ. ಬಿಲ್ಲವ ಮಹಿಳೆಯರು ಈ ಕುರಿತು ಗಮನಹರಿಸಬೇಕು ಎಂದು ಹರಿಕೃಷ್ಣ ಬಂಟ್ವಾಳ ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಬಿ.ಜನಾರ್ದನ ಪೂಜಾರಿ, ಕುದ್ರೋಳಿಯಲ್ಲಿ ಜನವರಿ 26ರಂದು ಆತ್ಮಚರಿತ್ರೆ ಬಿಡುಗಡೆ ಮಾಡಲಾಗುತ್ತದೆ. ಆ ದಿನ ಎಲ್ಲ ಸಮಾಜಗಳ ಬಾಂಧವರು ಬರಬೇಕು, ತನ್ನ ಜೀವನದ ವಿಚಾರಗಳನ್ನು ಹೊತ್ತುಕೊಂಡ ಹೊತ್ತಗೆಯನ್ನು ಅಂದು ಬಿಡುಗಡೆ ಮಾಡಲಾಗುತ್ತದೆ ಎಂದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಪೂರ್ವಾಧ್ಯಕ್ಷರಾದ ಡಾ. ಗಂಗಾಧರ ಮೇಲ್ಕಾರ್, ಕೆ.ಹರಿಕೃಷ್ಣ ಬಂಟ್ವಾಳ್, ಎಂ.ಚಂದ್ರಶೇಖರ ಪೂಜಾರಿ, ರಾಮಪ್ಪ ಪೂಜಾರಿ ಚಂಡ್ತಿಮಾರು ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ರಾಘವ ಅಮೀನ್, ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್ ವಿಜಯಾ ಬ್ಯಾಂಕ್, ಕೋಶಾಧಿಕಾರಿ ರಮೇಶ್ ಎಂ. ತುಂಬೆ, ಲೆಕ್ಕ ಪರಿಶೋಧಕರು ಸತೀಶ ಬಿ, ಕಾರ್ಯಕಾರಿ ಸಮಿತಿ ಸದಸ್ಯರಾದ ದಾಮೋದರ ಸಾಲ್ಯಾನ್, ಉಮೇಶ್ ಸುವರ್ಣ ತುಂಬೆ, ನಾರಾಯಣ ಪೂಜಾರಿ ಬೊಳ್ಳುಕಲ್ಲು, ಜಯಪ್ರಕಾಶ್ ಜೆ. ಎಸ್., ರಾಜೇಶ್ ಸುವರ್ಣ, ಬಿ. ಸಂಜೀವ ಪೂಜಾರಿ ಗುರುಕೃಪಾ, ಜನಾರ್ದನ ಸಾಲಿಯಾನ್ ದರಿಬಾಗಿಲು, ವೀರೇಂದ್ರ ಅಮೀನ್, ಹೇಮಂತ ಕುಮಾರ್, , ಸುರೇಂದ್ರ ಅಮೀನ್, ವಿಶೇಷ ಆಹ್ವಾನಿತರಾದ ಮಹಾಬಲ ಬಂಗೇರ, ಬಂಟ್ವಾಳ ತಾಲೂಕು ಬಿಲ್ಲವ ಮಹಾ ಮಂಡಲ ಪ್ರತಿನಿಧಿ ಗಂಗಾಧರ ಪೂಜಾರಿ ಬಡಗಬೆಳ್ಳೂರು, ಉಪಾಧ್ಯಕ್ಷೆ ಭಾರತಿ ಬಿ.ಕುಂದರ್ ಮೊದಲಾದವರು ಉಪಸ್ಥಿತರಿದ್ದರು.
ಬೆಳಗ್ಗೆ ಗಂಟೆ ೫ರಿಂದ ವೈದಿಕ ಕಾರ್ಯಕ್ರಮಗಳು ಲೋಕೇಶ್ ಶಾಂತಿ ನೇತೃತ್ವದಲ್ಲಿ ನಡೆದವು. ಈ ಸಂದರ್ಭ ಬಿ.ತಮ್ಮಯ್ಯ ಸಂಪಾದಕತ್ವದ ಸ್ಮರಣ ಸಂಚಿಕೆ ಸ್ವರ್ಣ ಕೇದಗೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ದಂಪತಿಯನ್ನು ಸನ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಬೇಬಿಕುಂದರ್ ವಿಜಯ ಬ್ಯಾಂಕ್ ಸ್ವಾಗತಿಸಿದರು. ಕೋಶಾಧಿಕಾರಿ ರಮೇಶ್ ಎಂ. ತುಂಬೆ ವಂದಿಸಿದರು. ಪತ್ರಕರ್ತ ಆಲದಪದವು ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)