ಬಂಟ್ವಾಳ

ಇಸ್ಕಾನ್ ಮೆಗಾಕಿಚನ್‌ಗೆ ಬೆಂಜನಪದವಿನಲ್ಲಿ ಭೂಮಿಪೂಜೆ

www.bantwalnews.com

  • ಅಕ್ಷಯ ಪಾತ್ರಾ ಯೋಜನೆಯಡಿ ಕಾರ್ಯಕ್ರಮ, ಖಾಸಗಿ ಸಹಭಾಗಿತ್ವ

ಸುಮಾರು 50 ಸಾವಿರ ಹಸಿದ ಹೊಟ್ಟೆಗಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಸಾಧ್ಯವಾಗುವ ಇಸ್ಕಾನ್ ಯೋಜನೆಯಾದ ಅಕ್ಷಯ ಪಾತ್ರಾ ಮೆಗಾ ಕಿಚನ್ ಗೆ ದ.ಕ.ಜಿಲ್ಲೆಯ ಮಂಗಳೂರು ಹೊರವಲಯದ ಬೆಂಜನಪದವಿನಲ್ಲಿ ಶುಕ್ರವಾರ ಭೂಮಿಪೂಜೆ ನಡೆಯಿತು.

ಜಾಹೀರಾತು

ಕೇಂದ್ರ, ರಾಜ್ಯ ಸರಕಾರಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಪೂರಕವಾಗಿ ಇಸ್ಕಾನ್ ವತಿಯಿಂದ ಅಕ್ಷಯ ಪಾತ್ರಾ ಯೋಜನೆಯಡಿ ಜಿಟಿ ಫೌಂಡೇಶನ್, ದಿಯಾ ಸಿಸ್ಟಮ್ಸ್ ಮಂಗಳೂರು ಪ್ರೈ. ಲಿ. ಸಹಯೋಗದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಈ ಮೆಗಾಕಿಚನ್ (ವಿಶಾಲವಾದ ಅಡುಗೆ ಕೋಣೆ) ಯೋಜನೆ ಇದು.

ಈ ಸಂದರ್ಭ ಉಡುಪಿ ಫಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಅತಿವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ, ಅಕ್ಷಯ ಪಾತ್ರಾ ಫೌಂಡೇಶನ್ ಉಪಾಧ್ಯಕ್ಷ ಶ್ರೀ ಚಂಚಲಪತಿದಾಸ ಉಪಸ್ಥಿತರಿದ್ದು, ಆಶೀರ್ವಚನ ನೀಡಿದರು.

ಜಾಹೀರಾತು

ಈ ಸಂದರ್ಭ ಮಾತನಾಡಿದ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆ ಯಶಸ್ವಿಯಾಗಿದ್ದು, ಇದನ್ನು ಸರಕಾರಿ ಕಾಲೇಜಿಗೆ ಬರುವ ಮಕ್ಕಳಿಗೂ ವಿಸ್ತರಿಸುವ ಇರಾದೆ ಸರಕಾರಕ್ಕಿದೆ. ಈಗಾಗಲೇ ಇನ್‌ಫೋಸಿಸ್ ಸಂಸ್ಥೆ ಮುಂದೆ ಬಂದಿದೆ. ಸ್ವಯಂಸೇವಾ ಸಂಸ್ಥೆಗಳ ನೆರವಿನೊಂದಿಗೆ ಬಿಸಿಯೂಟವನ್ನು ಕಾಲೇಜಿಗೆ ಹೋಗುವ ಬಡಮಕ್ಕಳಿಗೂ ಒದಗಿಸುವ ಯೋಜನೆಯನ್ನು ಆರಂಭಿಸುವ ಕುರಿತು ಚಿಂತಿಸಲಾಗುವುದು ಎಂದರು. ಜನಸಾಮಾನ್ಯರ ಮಕ್ಕಳೂ ಅನುಕೂಲಸ್ಥರ ಮಕ್ಕಳಿಗೆ ಸರಿಸಮವಾಗಿ ಪೌಷ್ಠಿಕ ಆಹಾರವನ್ನು ಸೇವಿಸುವ ವ್ಯವಸ್ಥೆ ನಿರ್ಮಿಸುವುದು ನಿಜವಾದ ದೇಶಪ್ರೇಮ ಎಂದು ಖಾದರ್ ಹೇಳಿದರು.

ಜಾಹೀರಾತು

ಮುಖ್ಯ ಅತಿಥಿಗಳಾಗಿ ಆಗಮಿಸಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸರಕಾರವೇ ಎಲ್ಲವನ್ನೂ ಮಾಡಲು ಅಸಾಧ್ಯವಾದ ಸನ್ನಿವೇಶದಲ್ಲಿ ಸೇವಾ ಸಂಸ್ಥೆಗಳು ಜನಸೇವೆಯ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಶುಚಿ ಮತ್ತು ರುಚಿಯಾದ ಆಹಾರ ಒದಗಿಸುವ ಇಸ್ಕಾನ್ ಅಕ್ಷಯ ಪಾತ್ರೆ ಯೋಜನೆ ಅಸಾಧಾರಣ ಸಾಧನೆ ಎಂದರು.

ಈ ಸಂದರ್ಭ ಮಾತನಾಡಿದ ಅಕ್ಷಯ ಪಾತ್ರಾ ಫೌಂಡೇಶನ್ ಉಪಾಧ್ಯಕ್ಷ ಚಂಚಲಪತಿ ದಾಸ್, ಈಗ ಸುಮಾರು 16 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಯೋಜನೆ ನಡೆಯುತ್ತಿದೆ. 50 ಲಕ್ಷ ರೂಪಾಯಿ ಪ್ರತಿದಿನ ಇದಕ್ಕಾಗಿಯೇ ಖರ್ಚಾಗುತ್ತದೆ. ನಮ್ಮ ಊಟಕ್ಕೆ 10ರಿಂಧ 11 ರೂಪಾಯಿ ಖರ್ಚಾಗುವ ನಿರೀಕ್ದೆ ಇದೆ. ಇದರಲ್ಲಿ ಸರಕಾರದಿಂದ 7 ರೂಪಾಯಿ ಬಂದರೆ ಉಳಿದದ್ದನ್ನು ಖಾಸಗಿ ನೆರವಿನಿಂದ ಬಳಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಸಹಕಾರವನ್ನು ಕೋರುತ್ತೇವೆ. ಭವಿಷ್ಯದಲ್ಲಿ ೫೦ ಲಕ್ಷ ಮಕ್ಕಳನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ. ಶಾಲಾ ಮಕ್ಕಳು ಪೌಷ್ಟಿಕಾಂಶಯುತವಾದ ಆಹಾರ ಸೇವಿಸುವ ಮೂಲಕ ಸಶಕ್ತರಾಗಿ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.

ಜಾಹೀರಾತು

ಮಂಗಳೂರಿನ ಹೊರವಲಯದ ಬೆಂಜನಪದವಿನಲ್ಲಿ ಜಾಗ ಖರೀದಿಸಿ, ಇಸ್ಕಾನ್ ಗೆ ಸಹಕರಿಸಿದ ದಾನಿ ದಿಯಾ ಸಿಸ್ಟಮ್ಸ್ ಸಿಇಒ ಡಾ. ವಿ.ರವಿಚಂದ್ರನ್ ಮಾತನಾಡಿ, ಹಸಿದ ಜೀವಗಳು ಆಹಾರ ಸೇವನೆಯಿಂದ ಪಡೆಯುವ ಸಂತೃಪ್ತಿಯೇ ದೇವರ ಸೇವೆ ಎಂದು ಭಾವಿಸಿ ಈ ಕಾರ್ಯಕ್ಕೆ ಇಳಿಯಲಾಗಿದೆ ಎಂದರು. ಮಂಗಳೂರು ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಸಂದೇಶ ನೀಡಿ, ದೇವರ ವಿಶೇಷ ಕರೆ ಇಲ್ಲಿದೆ. ಇದೊಂದು ಅಸಾಮಾನ್ಯ ಯೋಜನೆ ಎಂದು ಶುಭ ಹಾರೈಸಿದರು. ಜೀವಂತ ಕೃಷ್ಣನೆಂದರೆ ಶಾಲಾ ವಿದ್ಯಾರ್ಥಿಗಳು. ಇದು ನೇರ ಕೃಷ್ಣನಿಗೆ ತಲುಪುವ ಕಾರ್ಯಕ್ರಮ ಎಂದು ಫಲಿಮಾರು ಮಠಾಧೀಶರು ಆಶೀರ್ವದಿಸಿದರು. ಇಸ್ಕಾನ್ ನ ಯು.ಎಸ್. ಸಿಸಿಒ ವಂದನಾ ತಿಲಕ್ ಶುಭ ಹಾರೈಸಿದರು.

ಜಾಹೀರಾತು

ಅಕ್ಷಯ ಪಾತ್ರಾ ಫೌಂಡೇಶನ್ ಹುಬ್ಬಳ್ಳಿ – ಧಾರವಾಡ ಅಧ್ಯಕ್ಷ ರಾಜೀವಲೋಚನ ದಾಸ, ಮಂಗಳೂರು ಅಧ್ಯಕ್ಷ ಕಾರುಣ್ಯ ಸಾಗರ ದಾಸ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ಎಚ್.ಕುಮಾರ್, ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ಬಿ.ನಾಗರಾಜ ರಾವ್, ಮಂಗಳೂರು ಯೆನೆಪೋಯ ವಿವಿ ಕುಲಪತಿ ಯೆನೆಪೊಯ ಅಬ್ದುಲ್ಲ ಕುಂಞ, ವಿಧಾನಪರಿಷತ್ತು ವಿಪಕ್ಷ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್, ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಜೆ.ಆರ್.ಲೋಬೊ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.