ಬಿ.ಸಿ.ರೋಡ್ ಸಮೀಪ ಪಾಣೆಮಂಗಳೂರಿನ ಎಸ್.ವಿ.ಎಸ್.ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಡಿ.24ರಂದು ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ ಪುತ್ತೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಡೆಯುವ ನೃತ್ಯಸಂಧ್ಯಾ ಕಾರ್ಯಕ್ರಮಕ್ಕೆ ವೃಕ್ಷಮಾತೆ ನಾಡೋಜ ಡಾ. ಸಾಲುಮರದ ತಿಮ್ಮಕ್ಕ ಆಗಮಿಸಲಿದ್ದಾರೆ.
ನೃತ್ಯ ಸಂಧ್ಯಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವೃಕ್ಷ ಅಭಿಯಾನದ ಅಂಗವಾಗಿ ಸಂಜೆ ೪.೩೦ಕ್ಕೆ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ಅವರು ನೀಡಲಿದ್ದಾರೆ ಎಂದು ಬಿ.ಸಿ.ರೋಡಿನಲ್ಲಿ ಬುಧವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರದ ಸಂಚಾಲಕ ಉದಯ್ ವೆಂಕಟೇಶ್ ಮಾಹಿತಿ ನೀಡಿದರು.
ಸುಮಾರು 150 ವಿದ್ಯಾರ್ಥಿಗಳಿಗೆ ತಿಮ್ಮಕ್ಕ ಸಸಿ ವಿತರಣೆ ಮಾಡುವರು. ಬಳಿಕ ವಿದ್ಯಾರ್ಥಿಗಳಿಂದ “ನೃತ್ಯ ಸಂಧ್ಯಾ” ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿವ್ಯಾಪ್ರಭಾ ಚಿಲ್ತಡ್ಕ ವಹಿಸುವರು. ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಅರ್ಚಕ ವೆಂಕಟರಮಣ ಅಸ್ರಣ್ಣ ಆಶೀರ್ವಚನ ನೀಡುವರು. ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಾ ಸ್ವಾಮಿ, ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ, ರಮಾನಂದ ಸಾಲಿಯಾನ್ ಬೆಳ್ತಂಗಡಿ, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಉದ್ಯಮಿ ಹರೀಂದ್ರ ಪೈ, ವಲಯ ಅರಣ್ಯಾಧಿಕಾರಿ ಸುರೇಶ್, ಮಾಧವ ಉಳ್ಳಾಲ ಹಾಗೂ ವೆಂಕಟ್ರಾಯ ಶೆಣೈ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಡಾ. ಸಾಲುಮರದ ತಿಮ್ಮಕ್ಕ, ಭಾಗವತ ಪಟ್ಲ ಸತೀಶ ಶೆಟ್ಟಿ ಮತ್ತು ವಿದುಷಿ ನಯನ ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರದ ಗೌರವ ಸಲಹೆಗಾರ ಮಂಜು ವಿಟ್ಲ, ನೃತ್ಯ ನಿರ್ದೇಶಕಿ ರೋಹಿಣಿ ಉದಯ, ಕೋಶಾಧಿಕಾರಿ ಜಯಲಕ್ಷ್ಮೀ, ನಳಿನಿ, ರೂಪಕಲಾ, ಶ್ರದ್ಧಾ, ಅಶ್ವಿತಾ ಇದ್ದರು.