ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ವಡಗಾಂವ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಗ್ನೇಶ್ ಮೆವಾನಿ 10 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಿದ ಹರ್ಷದಲ್ಲಿ ಬಿ.ಸಿ.ರೋಡಿನ ಕೈಕಂಬ ಜಂಕ್ಷನ್ ಬಳಿ ಬಂಟ್ವಾಳ ಎಸ್‌ಡಿಪಿಐ ವತಿಯಿಂದ ಸಿಹಿ ಹಂಚಿ, ಪಟಾಕಿ ಸಿಡಿಸಿ ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದರು.
ಬಂಟ್ವಾಳ ವಿಧಾನ ಸಭಾ ಎಸ್‌ಡಿಪಿ ಅಧ್ಯಕ್ಷ ಶಾಹುಲ್ ಎಸ್.ಎಚ್. ಮಾತನಾಡಿ, ಗುಜರಾತ್ ಚುನಾವಣೆಯಲ್ಲಿ ಜಿಗ್ನೇಶ್‌ರನ್ನು ವಿಜಯಗೊಳಿಸುವುದು ಜಾತ್ಯಾತೀತ ಸಿದ್ಧಾಂತ ಹೊಂದಿರುವ ಎಸ್‌ಡಿಪಿಐ ನಾಯಕರಿಗೆ ಇದೊಂದು ಸವಾಲಗಿತ್ತು. ಜಿಗ್ನೇಶ್ ಪರಮತ ಯಾಚಿಸಲು ಎಸ್‌ಡಿಪಿಯ ನಾಯಕರ ಮತ್ತು ಕಾರ್ಯಕರ್ತರು ತನ್ನ ಅಮೂಲ್ಯವಾದ ಸಮಯವನ್ನು ವಿನಿಯೋಗಿಸಿದ್ದಾರೆ. ಇದರ ಪ್ರತಿಫಲವಾಗಿ ಜಿಗ್ನೇಶ್ ಮೇವಾನಿ ಅವರು ಪ್ರಚಂಡ ಬಹುಮತದಿಂದ ವಿಜಯಿಯಾಗಿದ್ದಾರೆ ಎಂದರು.
ಗುಜರಾತ್ ಚುನಾವಣೆಯಲ್ಲಿ ಜಿಗ್ನೇಶ್ ಮೆವಾನಿಯವರ ವಿಧಾನ ಸಭಾದ ಪ್ರಥಮ ಗೆಲುವಿನೊಂದಿಗೆ ಕರ್ನಾಟಕದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಎಸ್‌ಡಿಪಿಐ ಹೊಸ ಇತಿಹಾಸವನ್ನು ನಿರ್ಮಿಸಲು ಇದು ಮುನ್ನಡಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮೆವಾನಿ ಗೆಲುವಿಗೆ ಕಾರಣರಾದ ಕರ್ನಾಟಕ ಹಾಗೂ ಕೇರಳದಿಂದ ಎಸ್‌ಡಿಪಿಯ ನಾಯಕರ ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭ ಪ್ರಮುಖರಾದ ಇಸ್ಮಾಯಿಲ್ ಬಾವಾ, ಯೂಸುಫ್ ಆಲಡ್ಕ, ಮಾಲಿಕ್ ಕೊಳಕೆ, ಪುರಸಭಾ ಸದಸ್ಯ ಮುನೀಶ್ ಅಲಿ ಮತ್ತಿತರರು ಇದ್ದರು.