ಬಿಜೆಪಿ ಗುಜರಾತ್ ಮತ್ತು ಹಿಮಾಚಲ ರಾಜ್ಯಗಳ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಸೋಮವಾರ ಮಧ್ಯಾಹ್ನ ವಿಜಯೋತ್ಸವ ಕಾರ್ಯಕ್ರಮವನ್ನು ಕಾರ್ಯಕರ್ತರು ಹಮ್ಮಿಕೊಂಡರು. ಈ ಸಂದರ್ಭ ನಾರಾಯಣಗುರು ವೃತ್ತದ ಬಳಿ ಸೇರಿದ ಕಾರ್ಯಕರ್ತರು, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ನಾರಾಯಣಗುರು ವೃತ್ತದಿಂದ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವ ಸರ್ವೀಸ್ ರಸ್ತೆಯಲ್ಲಿ ಸಾಗಿ ಬಳಿಕ ಬಿಜೆಪಿ ಕಚೇರಿಗೆ ಸಾಗುವ ಸಂದರ್ಭ, ಈ ಬಾರಿಯ ಬಂಟ್ವಾಳ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರನ್ನು ಎತ್ತಿಕೊಂಡು ಜಯಘೋಷ ಹಾಕುತ್ತಾ ಸಂಭ್ರಮಿಸಿದ ಕಾರ್ಯಕರ್ತರ ವಿಜಯೋತ್ಸಾಹದ ಸಂಭ್ರಮದಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡ ಹರಿಕೃಷ್ಣ ಬಂಟ್ವಾಳ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಸಾಥ್ ನೀಡಿದರು.
ಪಕ್ಷ ಪ್ರಮುಖರಾದ ಜಿ.ಆನಂದ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ರಾಮದಾಸ ಬಂಟ್ವಾಳ, ರಮಾನಾಥ ರಾಯಿ, ಸೀತಾರಾಮ ಪೂಜಾರಿ, ಗಣೇಶ್ ರೈ ಮಾಣಿ, ಪ್ರಕಾಶ್ ಅಂಚನ್ ಸಹಿತ ಪ್ರಮುಖರೊಂದಿಗೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.