ಕಲೆ, ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಪ್ರೋತ್ಸಾಹಕ್ಕಾಗಿ ಹುಟ್ಟಿಕೊಂಡ ಸಂಸ್ಥೆ ರಾರಾಸಂ. ರಾಧಾಕೃಷ್ಣ ಬಂಟ್ವಾಳ ಮತ್ತವರ ತಂಡ ಕಳೆದ 6 ವರ್ಷಗಳಿಂದ ರಾರಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ, ಕಲಾವಿದರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನು ಒದಗಿಸಿದೆ. ಜೊತೆಗೆ ಒರ್ವ ಯುವ ಸಾಧಕನನ್ನು ಗುರುತಿಸಿ ರಾರಾಸಂ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತದೆ. ಪ್ರತೀ ವರ್ಷ ಡಿ.25ರಂದೇ ಈ ಕಾರ್ಯಕ್ರಮ ನಡೆಯುತ್ತಿರುವುದು ಇದರ ವಿಶೇಷತೆ.
ಈ ಬಾರಿಯೂ ಡಿ. 25ರಂದು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬೆಳಿಗ್ಗೆ ೯ ಗಂಟೆಯಿಂದ ರಾರಾ ಸಂಭ್ರಮದ ೭ನೇ ವರ್ಷದ ಸಾಂಸ್ಕೃತಿಕ ಕಲರವ ಆರಂಭಗೊಳ್ಳಲಿದೆ. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು, ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಸತೀಶ್ ಕುಲಾಲ್ , ಲಯನ್ಸ್ ಕ್ಲಬ್ ಉಪಾಧ್ಯಕ್ಷ ಸುಧಾಕರ ಆಚಾರ್ಯ, ರಮೇಶ್ ಕುಲಾಲ್ ಪಣೋಲಿಬೈಲು, ನಿವೃತ್ತ ಶಿಕ್ಷಕಿ ಗೀತಾ ವಿ.ರೈ, ಜೇಸಿಐ ಬಂಟ್ವಾಳದ ನಿಯೋಜಿತ ಅಧ್ಯಕ್ಷ ದಯಾನಂದ ರೈ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಅದೃಷ್ಟ ಪುಟಾಣಿ, ಪೇಪರ್ ಕ್ರಾಪ್ಟ್, ಪುಟಾಣಿ ಪಂಟರ್, ಕವನ ಸ್ಪರ್ಧೆ, ಕೈಬರಹ ಸ್ಪರ್ಧೆ, ಹೂ ಜೋಡಣೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ, ಮೆಹಂದಿ, ಮಿಮಿಕ್ರಿ ಸ್ಪರ್ಧೆಗಳು ನಡೆಯಲಿದೆ. ಇದರಿಂದ ಜೊತೆಗೆ ಛದ್ಮವೇಷ, ಸೂಪರ್ ಸಿಂಗರ್, ಪುಣ್ಯಕೋಟಿ ನೃತ್ಯರೂಪಕ, ಡ್ಯಾನ್ಸ್ ಧಮಾಕಾ ವಿಶೇಷ ಆಕರ್ಷಣೆ ನೀಡಿಲಿದೆ.
ಸಮಾರೋಪ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ವಸಂತಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಜೇಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷ ಪ್ರವೀಣ್ ಕುಮಾರ್, ಉದ್ಯಮಿ ರಮೇಶ್ ಬಂಟ್ವಾಳ್, ಸಹಾಯಕ ಅಂಚೆ ಅಧೀಕ್ಷಕ ಜೋಸೆಫ್ ರೋಡ್ರಿಗಸ್ ಪ್ರಮುಖರಾದ ಹರೀಶ್ ಎಂ., ಭೋಜ ಸರಳಪಾದೆ, ವಸಂತ ಉರ್ವ, ಎ.ಅಜೀಜ್, ಅಜೇಯ್ ಪಡೀಲ್, ಪ್ರಶಾಂತ್‌ರಾಜ್ ಶೆಟ್ಟಿ, ನವೀನ್ ಕೋಡ್ಲಕ್ಕೆ ಉಪಸ್ಥಿತರಿರುವರು. ಬಹುಮುಖ ಪ್ರತಿಭೆ ಶ್ರುತಿದಾಸ್ ಕಾವಳಕಟ್ಟೆ ಅವರಿಗೆ ರಾರಾಸಂ ಪುರಸ್ಕಾರ ನೀಡಿ ಗೌರವಿಸಲಾಗುವುದು.