ಸರಕಾರಿ ಜಾಗದಲ್ಲಿ ಹಲವು ವರ್ಷಗಳಿಂದ ವಾಸಿಸಿಕೊಂಡು ಬರುತ್ತಿದ್ದ ಜನರಿಗೆ ನೆಲದ ಹಕ್ಕು ಮಂಜೂರು ಮಾಡುವ ಬಗ್ಗೆ ಕಳೆದ ಕೆಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಕ್ಕು ಮಂಜೂರಾತಿಯನ್ನು ಸಿದ್ದರಾಮಯ್ಯ ಸರಕಾರ ಅನುಷ್ಠಾನಕ್ಕೆ ತರುವ ಮೂಲಕ ಬಡ ಜನರ ಬಹುಮುಖ್ಯ ಆಶೋತ್ತರಗಳನ್ನು ಈಡೇರಿಸಿದೆ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವಾಪ್ತಿ ಹಾಗೂ ತಾಲೂಕು ವ್ಯಾಪ್ತಿಯ ಹಲವು ಮಂದಿ ಫಲಾನುಭವಿಗಳಿಗೆ 94ಸಿ, 94ಸಿಸಿ ಹಾಗೂ ವಿವಿಧ ಯೋಜನೆಗಳಡಿ ಪರಿಹಾರ ಧನ ಚೆಕ್ ವಿತರಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ವಿವಿಧ ಭಾಗ್ಯಗಳ ಮೂಲಕ ಈಗಾಗಲೇ ಜನಪರ ಸರಕಾರವಾಗಿ ಮೂಡಿ ಬಂದಿದೆ. ಬಡವರ ಏಳಿಗೆಯೇ ಸರಕಾರದ ಮುಖ್ಯ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಕಾರ್ಯಕ್ರಮಗಳು ಮುಂದುವರಿಯಲಿದೆ ಎಂದರು.
ಇದೇ ವೇಳೆ ಸಚಿವರು ಸುಮಾರು 200 ಮಂದಿ ಫಲಾನುಭವಿಗಳಿಗೆ 94ಸಿ ಹಾಗೂ 94ಸಿಸಿ, ಮತ್ತು 25 ಮಂದಿ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಮಂಜೂರಾದ ಪರಿಹಾರ ಧನ ಚೆಕ್ಕನ್ನು ಹಸ್ತಾಂತರಿಸಿದರು.
ಈ ಸಂದರ್ಭ ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಜಿ ಬಿ ಎಚ್ ಖಾದರ್, ಜಿ ಪಂ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ ಜೈನ್, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ತಾ ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಎಪಿಎಂಸಿ ಅಧ್ಯಕ್ಷ ಕೆ ಪದ್ಮನಾಭ ರೈ, ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕರಾದ ರಾಮ, ನವೀನ್ ಮೊದಲಾದವರು ಉಪಸ್ಥಿತರಿದ್ದರು.