ಬಂಟ್ವಾಳ

ಗಾಂಧೀ ತತ್ವದ ಬದುಕು, ಎಲ್ಲರೊಳಗೊಂದಾಗಿ ಬೆರೆಯುವ ಸಂದೇಶ ನೀಡಿದ ಡಾ. ಏರ್ಯ ಸಾಹಿತ್ಯ ಸಂಭ್ರಮ

www.bantwalnews.com

ಸಾಹಿತ್ಯ ಹಾಗೂ ಸಾಮಾಜಿಕ ಸ್ತರಗಳಲ್ಲಿ ಜಾತಿ, ಧರ್ಮ ಆಧಾರಿತವಾಗಿ ವಿಭಜನೆಗೊಳ್ಳುವ ಸನ್ನಿವೇಶದಲ್ಲಿ ಸೌಹಾರ್ದತೆ, ಸಹಬಾಳ್ವೆ ಹಾಗೂ ಸಮಾಜದ ಎಲ್ಲರೊಂದಿಗೆ ಬೆರೆಯುವ ಹೃದಯವಂತಿಕೆಯ ಬದುಕು ಸಾಗಿಸುವ ಪಾಠವನ್ನು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಡಾ. ಏರ್ಯ ಸಾಹಿತ್ಯ ಸಂಭ್ರಮ ಒದಗಿಸಿತು.

ಕಾರ್ಯಕ್ರಮ ಉದ್ಘಾಟಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಆರಂಭದಲ್ಲಿ ಈ ವಿಚಾರಕ್ಕೆ ಹೆಚ್ಚು ಒತ್ತು ನೀಡಿ, ಎಲ್ಲ ಜಾತಿ, ಧರ್ಮಗಳನ್ನು ಪ್ರೀತಿಸುವ ಡಾ. ಏರ್ಯ ಅವರ ವ್ಯಕ್ತಿತ್ವವನ್ನು ಶ್ಲಾಘಿಸಿದರು. ನಂತರ ನಡೆದ ಗೋಷ್ಠಿಗಳಲ್ಲೂ ಪ್ರಚಲಿತ ಸನ್ನಿವೇಶ ಮತ್ತು ಏರ್ಯ ಬದುಕಿನ ವಿವಿಧ ಮಜಲುಗಳನ್ನು ಬಿಡಿಸಿ ಹೇಳಿದ ಭಾಷಣಕಾರರು, ಸಹಬಾಳ್ವೆ, ಸಹಕಾರ ತತ್ವದ ಏರ್ಯರ ಜೀವನಶೈಲಿಯನ್ನು ಉಲ್ಲೇಖಿಸಿದರು ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನಿಟ್ಟೆ ಸ್ವಾಯತ್ತ ವಿಶ್ವವಿದ್ಯಾನಿಲಯಯ ಕುಲಾಧಿಪತಿ ಡಾ. ಎನ್. ವಿನಯ ಹೆಗ್ಡೆ,

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳ ರಾಯಬಾರಿಯಾಗಿ ರಾಜ್ಯ, ದೇಶದ ಗಡಿದಾಟಿದ ಡಾ. ಏರ್ಯರು ಈ ಶತಮಾನ ಕಂಡಿರುವ ಓರ್ವ ಶ್ರೇಷ್ಠ ವ್ಯಕ್ತಿ ಎಂದರು. ನಾನು ಹಿರಿಯರಾದ ಏರ್ಯರಿಂದ ಸ್ಪೂರ್ತಿ ಪಡೆದು ಬೆಳೆದವನು. ಹೀಗೆ ಅನೇಕರ ಮಂದಿಯನ್ನು ಮೌಲ್ಯ ಆಧರಿತ ವ್ಯಕ್ತಿಗಳನ್ನಾಗಿ ಈ ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಏರ್ಯರದ್ದು, ನಿಸ್ವ್ವ್ವಾರ್ಥವಾದ ಬದುಕು. ಯಾವುದೇ ಸಂದರ್ಭದಲ್ಲೂ ಪರಿಸ್ಥಿತಿಂiಂದಿಗೆ ರಾಜಿ ಮಾಡಿಕೊಳ್ಳದೇ, ಎಲ್ಲರನ್ನೂ ಪ್ರೀತಿಸುತ್ತಾ ಮೇರುವ್ಯಕ್ತಿ. ಅವರ ಸಾಹಿತ್ಯಕ ಸೇವೆಯನ್ನು ಉಳಿಸುವ ಕಾರ್ಯ ಮುಂದುವರಿಯಲಿ ಎಂದವರು ಹಾರೈಸಿದರು.

ಇನ್ನೋರ್ವ ಮುಖ್ಯಅತಿಥಿ ಯೆನೆಪೊಯ ಸ್ವಾಯತ್ತ ವಿಶ್ವವಿದ್ಯಾನಿಲಯದ ಕುಲಾಧಿಪತಿ ಯೆನೆಪೊಯ ಅಬ್ದುಲ್ಲ ಕುಂಞಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್ ಸದಾಶಿವ ರಾವ್ ಅವರ ದೇಶಭಕ್ತಿ, ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಸಹಕಾರ ಚಳುವಳಿಯಿಂದ ರೂಪುಗೊಂಡು ಏರ್ಯರು, ತಮ್ಮ ಬದುಕಿನ ಉದ್ದಕ್ಕೂ ತಮ್ಮದೇಯಾದ ಜೀವನ .iಲ್ಯವನ್ನು ಸಾರುತ್ತಾ, ಸಾರ್ಥಕತೆ ಕಂಡವರು. ನಿಷ್ಕಳಂಕವನ್ನೇ ಅರಿಯದ ಒಂದು ಹಿರಿ ಜೀವವನ್ನು ಕಿರಿಯರ ಮುಂದೆ ಅನಾವರಣಗೊಳಿಸಲಾಗಿದೆ ಎಂದರು.

ಏರ್ಯರು ಶೈಕ್ಷಣಿಕ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿದವರು. ಓರ್ವ ಹಿಂದೂ ಧರ್ಮದ ಪ್ರತಿಪಾದಕನಾಗಿ ಇತರ ಧರ್ಮೀಯರನ್ನು ಗೌರವಿಸುವ ಅವರ ಗುಣ ವಿಶೇಷ ಈ ಸಮಾಜಕ್ಕೆ ಸಾಮರಸ್ಯದ ಸಂದೇಶವನ್ನು ನೀಡಲಿ ಎಂದು ಮೊಡಂಕಾಪು ಚರ್ಚ್ ಪ್ರಧಾನ ಧರ್ಮಗುರು ವಂ. ಮ್ಯಾಕ್ಸಿಂ ಎಲ್. ನೊರೊನ್ಹಾ ಶುಭ ಹಾರೈಸಿದರು.

ಸಾಂಸ್ಕೃತಿಕ, ಸಾಹಿತ್ಯ, ಧಾರ್ಮಿಕವಾಗಿ ಸಂಪನ್ನಗೊಂಡಿರುವ ಬಂಟ್ವಾಳ ಇತ್ತೀಚಿನ ದಿನಗಳಲ್ಲಿ ಮಾನವೀಯ ಸೆಳೆದಿಂದ ದೂರವಾಗುತ್ತಿದೆಯೇ ಎನ್ನುವ ಆತಂಕದಲ್ಲಿದ್ದೇವೆ. ಯುವ ಜನರಲ್ಲಿ ಸಾಮರಸ್ಯ, ಸೌಹಾರ್ದತೆ ಹಾಗೂ ಸಹಬಾಳ್ವೆಯನ್ನು ತುಂಬಿಸುವ ಕೆಲಸಕ್ಕೆ ಈ ಸಾಹಿತ್ಯ ಸಂಭ್ರಮ ಮುನ್ನುಡಿಯಾಗಲಿದೆ ಎಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವರು ಭಾವನಾತ್ಮಕವಾಗಿ ನುಡಿದರು.

ನಾಯಕರಾಗುವವರಿಗೆ ಮಾದರಿ

ತನ್ನ 20ನೇ ವಯಸ್ಸಿನಲ್ಲೇ ಸಮಾಜ ಪರಿವರ್ತನೆಗೆ ದೊಡ್ಡ ಹೆಜ್ಜೆ ಹಾಕಿದ ಡಾ. ಏರ್ಯ ಸವಾಲುಗಳನ್ನು ಎದುರಿಸಿ ದಲಿತೋದ್ಧಾರದ ಕುರಿತು ಪ್ರಯತ್ನಿಸಿದ್ದರು ಎಂದು ಹೇಳಿದ ಇತಿಹಾಸಕಾರ ಡಾ. ಪುಂಡಿಕಾಯಿ ಗಣಪಯ್ಯ ಭಟ್, ಸತ್ವಪರ, ನ್ಯಾಯಪರ ಬದುಕು ಕಟ್ಟುವ ದಿಸೆಯಲ್ಲಿ ಸಾಗಿದ ಏರ್ಯ, ರಾಜಕೀಯ, ಸಹಕಾರಿ ಮತ್ತು ಇತರ ರಂಗಗಳಲ್ಲಿ ಮುಂದುವರಿಯುವವರು, ನಾಯಕರಾಗುವವರಿಗೆ ಮಾದರಿ ಎಂದರು. ಏರ್ಯರದು ಏರು ವ್ಯಕ್ತಿತ್ವ , ಅವರ ಸಾಹಿತ್ಯಕ್ಕಿಂತಲೂ ಜೀವನ ಶೈಲಿಯೇ ನಮಗೆ ಹೆಚ್ಚು ಆದರ್ಶ ಎಂದ ಅವರು ಏರ್ಯರ ಸಾಹಿತ್ಯ, ಸಹಕಾರಿ ಕ್ಷೇತ್ರದ ಯಶಸ್ಸಿನಲ್ಲಿ ಪತ್ನಿ ಆನಂದಿ ಆಳ್ವರ ಪಾತ್ರವೂ ಹಿರಿದು ಎಂದು ಅಭಿಪ್ರಾಯಪಟ್ಟರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕಾರಾಂ ಪೂಜಾರಿ ವೇದಿಕೆಯಲ್ಲಿದ್ದರು.  ಪತ್ರಕರ್ತ ಹರೀಶ ಮಾಂಬಾಡಿ ಕಾರ್ಯಕ್ರಮ ನಿರೂಪಿಸಿದರು.

ಅದ್ವಿತೀಯ ಕೊಡುಗೆ

ಮೊಳಹಳ್ಳಿ ಶಿವರಾಯರಂತೆ ಡಾ. ಏರ್ಯ ಅವರು ಸಹಕಾರ ಕ್ಷೇತ್ರಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು. ಏರ್ಯ ಅವರು ಸಹಕಾರ ಕ್ಷೇತ್ರದಲ್ಲಿ ನಡೆದ ಹಾದಿಯ ಕುರಿತು ಅವರು ಪ್ರಸ್ತಾಪಿಸಿ, ಮಾದರಿಯಾಗುವಂತ ಹೆಜ್ಜೆಯನ್ನು ಅವರು ಕ್ಷೇತ್ರದಲ್ಲಿ ಇಟ್ಟಿದ್ದಾರೆ ಎಂದರು. ಡಾ. ನಾ.ದಾಮೋದರ ಶೆಟ್ಟಿ ವೇದಿಕೆಯಲ್ಲಿದ್ದರು. ಉಪನ್ಯಾಸಕ ಸುರೇಶ್ ನಂದೊಟ್ಟು ಕಾರ್ಯಕ್ರಮ ನಿರೂಪಿಸಿದರು.

ಕ್ರಿಯಾಶಕ್ತಿಯ ಕೇಂದ್ರ

ಡಾ. ಏರ್ಯ ಕ್ರಿಯಾಶಕ್ತಿಯ ಕೇಂದ್ರ ಎಂದು ಹೇಳಿದ ಪ್ರಾಧ್ಯಾಪಕ ಡಾ. ವರದರಾಜ ಚಂದ್ರಗಿರಿ, ದೇವಸ್ಥಾನಗಳಲ್ಲಿ ದಲಿತ ವರ್ಗದ ಜನರನ್ನು ಪ್ರವೇಶಿಸುವಂತೆ ಮಾಡಿದ 70 ವರ್ಷಗಳ ಹಿಂದಿನ ಸಂಗತಿ ಈಗಲೂ ಪ್ರಸ್ತುತ. ನಾಯಕತ್ವದ ಗುಣವನ್ನು ಅವರು ಮೈಗೂಡಿಸಿಕೊಂಡಿದ್ದರು ಎಂದರು.ಕರಾವಳಿಗೆ ಅಧ್ಯಾಪಕ ಪರಂಪರೆಯ ಗೋವಿಂದ ಪೈ, ಪಂಡಿತ ಪರಂಪರೆಯ ಪಂಜೆ ಮಂಜೇಶರಾಯರು ಪ್ರಮುಖರು. ಪಂಜೆಯವರ ಶತಮಾನೋತ್ಸವವನ್ನು ಇಡೀ ಕರ್ನಾಟಕ ಗಮನ ಸೆಳೆಯುವಂತೆ ಮಾಡಿದವರು ಡಾ. ಏರ್ಯ ಎಂದು ಅವರ ಸಂಘಟನಾ ಕ್ಷೇತ್ರದ ಕುರಿತು ಮಾತನಾಡಿದ ಡಾ. ವರದರಾಜ ಚಂದ್ರಗಿರಿ ಹೇಳಿದರು. ವೇದಿಕೆಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಬಿ.ತಮ್ಮಯ್ಯ ಉಪಸ್ಥಿತರಿದ್ದರು. ಡಿ.ಬಿ.ಅಬ್ದುಲ್ ರಹಿಮಾನ್ ಕಾರ್ಯಕ್ರಮ ನಿರೂಪಿಸಿದರು.

ಡಾ. ಏರ್ಯ ಸಾಹಿತ್ಯ ಸಂಭ್ರಮ-2017 ಸ್ವಾಗತ ಸಮಿತಿ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ ಸ್ವಾಗತಿಸಿ, ಸಂಘಟಕ ಬಿ.ತಮ್ಮಯ ವಂದಿಸಿದರು. ಸ್ವಾಗತ ಸಮಿತಿ ಕೋಶಾಧಿಕಾರಿ, ವಿಮರ್ಶಕ ವಿ.ಸು.ಭಟ್ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿಯ ಮುಖ್ಯ ಸಂಘಟಕ ಹಿರಿಯ ರಂಗಕರ್ಮಿ, ನಿವೃತ್ತ ಅಧ್ಯಾಪಕ ಮಹಾಬಲೇಶ್ವರ ಹೆಬ್ಬಾರ, ಸೇವಾಂಜಲಿ ಪ್ರತಿಷ್ಠಾನದ ಮುಖ್ಯಸ್ಥ ಕೆ.ಕೆ.ಪೂಂಜ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಬಂಟ್ವಾಳ ಕಾರ್ಯಕ್ರಮವನ್ನು ಸಂಯೋಜಿಸಿದರು.

ಮನಸೆಳೆದ ಗೀತ ಗಾಯನ:

ಡಾ. ಏರ್ಯ ಸಾಹಿತ್ಯ ಸಂಭ್ರಮದಲ್ಲಿ ಹಿರಿಯರಾದ ಚಂದ್ರಶೇಖರ ಕೆದ್ಲಾಯ ಅವರು ಏರ್ಯ ಅವರು ರಚಿಸಿದ ಗೀತೆಗಳನ್ನು ಹಾಡಿದರು. ಬಹಳ ಮಾರ್ಮಿಕವಾದ ಕವಿತೆಯ ಸಾಲುಗಳನ್ನು ಅಷ್ಟೇ ಮನಮುಟ್ಟುವಂತೆ ಹಾಡಿದ ಕೆದ್ಲಾಯ ಅವರು, ಹೊಸ ತಲೆಮಾರಿಗೆ ಹಳೇ ಹಾಡುಗಳ ಸತ್ವವನ್ನು ಪರಿಚಯಿಸಿದರು.

 

 

 

 

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts