www.bantwalnews.com
ದುಬೈಯ ಎಸ್ ಕೆ ಎಸ್ ಇವೆಂಟ್ಸ್ ಇವರು ಆಯೋಜಿಸುವ ಆರರಿಂದ ಹದಿನೇಳು ವಯಸ್ಸಿನ ಸಂಯುಕ್ತ ಅರಬ್ ಸಂಸ್ಥಾನದ ( ಯು.ಎ ಇ ) ನಿವಾಸಿ ಮಕ್ಕಳು ಹಿಂದಿ ಭಾಷೆಯ ಚಲನಚಿತ್ರ ಹಾಡುಗಳನ್ನು ಹಾಡುವ ರಾಷ್ಟ್ರೀಯ ಮಟ್ಟದ ಸ್ಪರ್ಧೆ “ವಾಯ್ಸ್ ಆಫ್ ಯು ಎ ಇ – ಕಿಡ್ಸ್ ಕೆಟಗರಿ ” .
ಯು.ಎ ಇ ಯ ಏಳು ಪ್ರಾಂತ್ಯದ ನಿವಾಸಿ ಭಾರತೀಯ ಮಕ್ಕಳ ಜೊತೆಗೆ ಹಿಂದಿ ಭಾಷೆಯನ್ನು ಅರಿಯದ ವಿದೇಶದ ಮಕ್ಕಳು ಕೂಡ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಮೂರು ಹಂತಗಳಲ್ಲಿ ನಡೆಯುವ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಭಾರತದ ಹೆಸರಾಂತ ಗಾಯಕರು ತೀರ್ಪುಗಾರರಾಗಿರುತ್ತಾರೆ.
“ವಾಯ್ಸ್ ಆಫ್ ಯು ಎ ಇ – ಕಿಡ್ಸ್ ಕೆಟಗರಿ– 2017 ಸ್ಪರ್ಧೆಯ ಅಂತಿಮ ಸುತ್ತು ದುಬೈ ಮಹಾನಗರದ 1600 ಆಸನದ ಸುಪ್ರಸಿದ್ಧ ‘ಶೇಖ್ ರಶೀದ್‘ ಆಡಿಟೋರಿಯಂನಲ್ಲಿ ನಡೆಯಿತು.
ಸುಮಾರು 200 ಅಧಿಕ ಸ್ಪರ್ಧಾಳುಗಳು ಪಾಲ್ಗೊಂಡ ಈ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ 20 ಸ್ಪರ್ದಾಳುಗಳಿಗೆ ಆಡಿಟೋರಿಯಂನ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಭಿಕರ ಮುಂದೆ ತಲಾ ಮೂರುವರೆ ನಿಮಿಷ ಹಾಡುವ ಅವಕಾಶ ಲಭಿಸಿತು .
ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ 20 ಸ್ಪರ್ಧಾಳುಗಳಲ್ಲಿ ಹಿಂದಿ ಭಾಷೆಯನ್ನು ಅರಿಯದ ಹಿಂದಿ ಚಲನಚಿತ್ರ ಗಾಯನ ಪ್ರೇಮಿ ತಜಕಿಸ್ಥಾನ್ದೇಶದ ಕನ್ಯೆ ಕೂಡ ಒಬ್ಬಳು.
ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ ಏಕೈಕ ಕನ್ನಡ ಕುವರನೊಬ್ಬ ಹತ್ತು ವರ್ಷದ ಪೋರ. ಕಾರ್ಯಕ್ರಮದ ಕ್ರಮಾಂಕದಲ್ಲಿ ಹನ್ನೊಂದನೆ ಸ್ಪರ್ದಾಳುವಾಗಿ ತನಗೆ ಲಭಿಸಿದ ಅತ್ಯಲ್ಪ ಕಾಲಾವಧಿಯಲ್ಲಿ ಯಮನ್ ರಾಗದ ಮಿಶ್ರ ಛಾಪು ತಾಳದ ‘ಆಜ್ ಇಬಾದತ್’ ಹಿಂದಿ ಹಾಡನ್ನು ಸಭಿಕರ ಮತ್ತು ತೀರ್ಪುಗಾರರ ಮುಂದೆ ಸುಶ್ರಾವ್ಯವಾಗಿ ಹಾಡಿದ.
“ವಾಯ್ಸ್ ಆಫ್ ಯು ಎ ಇ – ಕಿಡ್ಸ್ ಕೆಟಗರಿ– 2017 ಸ್ಪರ್ಧೆಯ ಅಂತಿಮ ಸುತ್ತಿನ ತೀರ್ಪುಗಾರರಾಗಿ ಬಂದಿದ್ದ ಪ್ರಸಿದ್ಧ ಹಿಂದಿ ಗಾಯಕಿ ದಕ್ಷಿಣ ಭಾರತದ ಗಾನ ಕೋಗಿಲೆ ಕವಿತಾ ಕೃಷ್ಣಮೂರ್ತಿ ಕನ್ನಡ ಕುವರ ‘ಅಮೋಘವರ್ಷ‘ನ ಹಿಂದಿ ಹಾಡು ‘ಆಜ್ ಇಬಾದತ್‘ ಆಲಿಸಿದ ನಂತರ ತಮ್ಮ ಅಭಿಪ್ರಾಯವನ್ನು ತಕ್ಷಣ ತಿಳಿಸಿದ್ದು ಹೀಗೆ.
ಅಮೋಘವರ್ಷನ ವಯಸ್ಸನ್ನು ಅವನಿಂದಲೇ ಕೇಳಿ ತಿಳಿದ ಕವಿತಾ ಕೃಷ್ಣಮೂರ್ತಿ ಮುಂದಿನ ಪ್ರಶ್ನೆ ನಿನಗೆ ಸಂಗೀತ ಕಲಿಸಿದ ಗುರುಗಳು ಯಾರು? ‘ನನ್ನ ಚಿಕ್ಕಮ್ಮ ದಿವ್ಯಶಂಕರಿ ನನ್ನ ಸಂಗೀತ ಗುರು ‘ಎಂದ ಅಮೋಘವರ್ಷ.
‘ನೀನು ಅದ್ಭುತ ಗಾಯಕ ,ಇದು ತುಂಬಾ ಕಠಿಣ ಹಾಡು, ಈ 10 ರ ಎಳವೆಯಲ್ಲಿ ಇದರ ತಾರ ಸ್ಥಾಯಿ ಹಾಗೂ ಮಂದಾರ ಸ್ಥಾಯಿಗಳಲ್ಲಿನ ನಿನ್ನಸ್ವರ ಸಂಚಾರ ತುಂಬಾ ಸುಂದರವಾಗಿತ್ತು. ನೀನು ಕ್ರಮಬದ್ಧವಾಗಿ ರಾಗಬದ್ಧವಾಗಿ ಶ್ರುತಿಯಲ್ಲಿ ಬಿಲ್ಲಿನಿಂದ ಹೊರಟ ಬಾಣದಂತೆ ಅದ್ಭುತವಾಗಿ ಹಾಡಿರುವೆ. ಇಷ್ಟು ಸಣ್ಣ ವಯಸ್ಸಿನಲ್ಲಿ ನಿನ್ನನ್ನು ಪಳಗಿಸಿರುವ ನಿನ್ನ ಸಂಗೀತ ಗುರುಗಳಿಗೆ ನನ್ನ ಅಭಿನಂದನೆಗಳು ‘ಎಂದು ಕವಿತಾ ಕೃಷ್ಣಮೂರ್ತಿ ತಿಳಿಸಿದರು.
ಅತ್ಯಂತ ಸಣ್ಣತಪ್ಪುಗಳನ್ನು ಕೂಲಂಕಷವಾಗಿ ಕಂಡುಹಿಡಿದು ತಿದ್ದಿ ವಿಮರ್ಶಿಸಿ ತಿಳಿಹೇಳುವ ಬೆರಳೆಣಿಕೆಯ ತೀರ್ಪುಗಾರರಲ್ಲಿ ಒಬ್ಬರಾದ ಪ್ರಸಿದ್ಧ ಹಿಂದಿ ಗಾಯಕಿ ದಕ್ಷಿಣ ಭಾರತದ ಗಾನ ಕೋಗಿಲೆ ಕವಿತಾ ಕೃಷ್ಣಮೂರ್ತಿಯವರ ಕುತೂಹಲ ಮೂಡಿಸಿದ ದಿವ್ಯಶಂಕರಿ ಅವರ ಕಿರುಪರಿಚಯ.
ತನ್ನ ಏಳನೇ ವಯಸ್ಸಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಪ್ರಾರಂಭಿಸಿದ ದಿವ್ಯಶಂಕರಿ, ಬಡೆಕ್ಕಿಲ ಚಂದ್ರಶೇಖರ ಭಟ್ ಮತ್ತು ಪದ್ಮಾವತಿ ದಂಪತಿಗಳ ಸುಪುತ್ರಿ. ಆಕಾಶವಾಣಿ ಮಂಗಳೂರು ವಿಭಾಗದಲ್ಲಿ ಯುವವಾಣಿ ಕಲಾವಿದೆಯಾಗಿದ್ದ ಇವರು ಬೆಂಗಳೂರು, ಉಡುಪಿ, ಕಟೀಲು ,ಮಂಗಳೂರು ಸೇರಿದಂತೆ ಹಲವಾರು ಪಟ್ಟಣಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.