Report: Harish Mambady Pic: Kishore Peraje
ಎನಗಿಂತ ಕಿರಿಯರಿಲ್ಲ ಎಂಬಂತೆ ಡಾ. ಆಳ್ವರ ಬದುಕು. ಸಮಾಜದ ಬಗ್ಗೆ ಪ್ರೀತಿ, ಇತರ ಧರ್ಮಗಳ ಬಗ್ಗೆ ಸಹಿಷ್ಣುತೆ ಇದ್ದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ. ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಈ ತತ್ವದಡಿ ತನ್ನ ಬದುಕು ಸಾಗಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ, ಯುವಜನರಿಗೆ ಅವರ ಬದುಕು ಅನುಸರಣೀಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಶನಿವಾರ ಮೊಳಹಳ್ಳಿ ಶಿವರಾವ್ ಸಭಾಂಗಣ ಮತ್ತು ಕವಿಶಿಷ್ಯ ಪಂಜೆ ಮಂಗೇಶರಾವ್ ವೇದಿಕೆಯಲ್ಲಿ ನಡೆದ ಡಾ. ಏರ್ಯ ಸಾಹಿತ್ಯ ಸಂಭ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿದ ಡಾ. ಹೆಗ್ಗಡೆ, ನಮ್ಮ ಧರ್ಮವನ್ನು ಪ್ರೀತಿಸುವುದಷ್ಟೇ ಅಲ್ಲ, ಇನ್ನೊಂದು ಧರ್ಮದ ಬಗ್ಗೆ ಅನಾದರ ಇರಬಾರದು. ಗಾಂಧಿ ತತ್ವವನ್ನು ಪಾಲಿಸುವ ಡಾ. ಏರ್ಯ ನಿರ್ಲಿಪ್ತವಾಗಿ, ನಿರ್ವ್ಯಾಜ್ಯವಾಗಿ, ನಿಶ್ಚಿಂತೆಯಿಂದ ಸಾತ್ವಿಕ ಜೀವನ ನಡೆಸುತ್ತಿದ್ದಾರೆ. ಹೃದಯದೊಳಗೆ ಮುಗ್ಧತೆ, ಆಳವಾದ ಭಾವನೆಗಳನ್ನು ಹೊಂದಿರುವ ಭಾವುಕಜೀವಿ ಡಾ. ಏರ್ಯ ಎಂದು ಹೇಳಿದರು. ಹಿಂದು ಶಬ್ದದ ನಿಜವಾದ ವ್ಯಾಖ್ಯಾನವನ್ನು ನೋಡಬೇಕೆಂದಿದ್ದರೆ, ಡಾ. ಆಳ್ವ ಅವರನ್ನು ನೋಡಬೇಕು ಎಂದು ಡಾ.ಹೆಗ್ಗಡೆ ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಿ.ಎ.ವಿವೇಕ ರೈ ಮಾತನಾಡಿ, ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ೨೦ ಮತ್ತು ೨೧ನೇ ಶತಮಾನದ ಕೊಂಡಿಯಾಗಿದ್ದಾರೆ. ಎಲ್ಲರನ್ನೂ ಒಂದೆಡೆ ಕರೆತಂದವರು ಡಾ. ಏರ್ಯ ಎಂದರು. ಅವರ ಕೃತಿಗಳ ಹಿಂದೆ ಭಾವನೆ ಇವೆ. ಭಾವುಕತೆ ಜೊತೆಗೆ ಪ್ರೀತಿಯ ಅಪ್ಪುಗೆ ಇವೆ. ಹಣದ ಹಿಂದೆ ಹೋಗುವವರಲ್ಲ ಡಾ. ಏರ್ಯ. ಅವರು ಪ್ರೀತಿಯ ಸಂಬಂಧ ಬಯಸುವವರು. ಮಕ್ಕಳೊಡನೆಯೂ ಬೆರೆಯುವವರು. ಅಧಿಕಾರವನ್ನು ಅವಕಾಶ ಎಂದು ಭಾವಿಸಿ ಬದುಕಿ, ಸಾಧಿಸಿದವರು. ತಮ್ಮ ಯಾವ ಬರೆಹಗಳನ್ನೂ ಲಾಭಕ್ಕಾಗಿ ಉಪಯೋಗಿಸಲಿಲ್ಲ ಎಂದು ಡಾ. ರೈ ಹೇಳಿದರು.
ಬೋಳಂತೂರು ಕೃಷ್ಣ ಪ್ರಭು ಪುಸ್ತಕ ಮಳಿಗೆ ಉದ್ಘಾಟಿಸಿ ಮಾತನಾಡಿದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಡಾ. ಏರ್ಯ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಆಶಯ ನುಡಿಗಳನ್ನಾಡಿದ ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮನುಷ್ಯನಲ್ಲಿ ಮನುಷ್ಯತ್ವ ತುಂಬಬೇಕಾದರೆ ಸಜ್ಜನರ ಸಂಘ ಮಾಡಬೇಕು, ಪುಸ್ತಕ ಓದಬೇಕು ಎಂದು ಯುವಜನರಿಗೆ ಹಿತವಚನ ಹೇಳಿದರು. ಪ್ರಪಂಚದ ಎಲ್ಲ ಒಳ್ಳೆಯ ವಿಚಾರಗಳು ನಮ್ಮೆಡೆಗೆ ಬರಲಿ, ಇಂದು ವೈಜ್ಞಾನಿಕ ಬೆಳವಣಿಗೆಗಳು ಮನುಷ್ಯನ ಹಾದಿ ತಪ್ಪಿಸುವಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ಕಲಾವಿದ ಮಂಜು ವಿಟ್ಲ ವಿನ್ಯಾಸಗೊಳಿಸಿದ ಏರ್ಯ ಅವರ ಅಂಚೆ ಚೀಟಿಯ ಚಿತ್ರವನ್ನು ಬಿಡುಗಡೆಗೊಳಿಸಲಾಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಡಾ. ಏರ್ಯ ಸಾಕ್ಷ್ಯಚಿತ್ರ ಪ್ರದರ್ಶನ ಉದ್ಘಾಟಿಸಿದರು. ಏರ್ಯರನ್ನು ಡಾ. ವೀರೇಂದ್ರ ಹೆಗ್ಗಡೆ ಸನ್ಮಾನಿಸಿದರು. ಗಾಯಕ ಚಂದ್ರಶೇಖರ ಕೆದ್ಲಾಯ ಅವರು ಏರ್ಯ ಅವರು ರಚಿಸಿದ ಗೀತೆಗಳನ್ನು ಹಾಡಿದರು. ಏರ್ಯ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷ ಕೆ. ಮೋಹನ ರಾವ್ ಸ್ವಾಗತಿಸಿದರು. ಸಂಚಾಲಕ ವಿಶ್ವನಾಥ ಬಂಟ್ವಾಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಅಜಕ್ಕಳ ಗಿರೀಶ ಭಟ್ಟ ವಂದಿಸಿದರು. ನಿವೃತ್ತ ಅಧ್ಯಾಪಕ, ಕಲಾವಿದ ಮಹಾಬಲೇಶ್ವರ ಹೆಬ್ಬಾರ ಕಾರ್ಯಕ್ರಮ ನಿರೂಪಿಸಿದರು.