ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ತಾಲೂಕು ಪಂಚಾಯತ್ ಸಭೆ ವೇದಿಕೆಯಾಯಿತು.
ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಲ ಸದಸ್ಯರು ಹಲವು ವಿಚಾರಗಳು ತಮ್ಮ ಗಮನಕ್ಕೆ ಬರುವುದೇ ಇಲ್ಲ ಎಂದು ಅಳಲು ತೋಡಿಕೊಂಡರೆ, ನಾವು ಹೆಸರಿಗಷ್ಟೇ ಇರುತ್ತೇವೆ ಕಾರ್ಯಕ್ರಮಗಳ ಸಂದರ್ಭ ಗುರುತಿಸುವುದೇ ಇಲ್ಲ ಎಂದರು. ಇದು ಕೊನೆಗೆ ಆರೋಪ, ಪ್ರತ್ಯಾರೋಪಗಳಿಗೂ ಕಾರಣವಾಯಿತು.
ಅನುದಾನವನ್ನು ನೀಡುವುದು ನಾವು, ನಮ್ಮನ್ನು ಕಾರ್ಯಕ್ರಮಗಳಿಗೆ ಯಾಕೆ ಆಹ್ವಾನಿಸುವುದಿಲ್ಲ ಎಂದು ಬಟ್ರಿಂಜ ಶಾಲೆಯ ಕಾರ್ಯಕ್ರಮಗಳಿಗೆ ತನ್ನನ್ನು ಆಹ್ವಾನಿಸುವುದಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿ ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾಧವ ಮಾವೆ ಆಕ್ಷೇಪಿಸಿದರು.
ಈ ಸಂದರ್ಭ ತಾಪಂ ಸದಸ್ಯೆ ಗೀತಾ ಚಂದ್ರಶೇಖರ್ ಸಹಿತ ಬಿಜೆಪಿ ಸದಸ್ಯರು ಇದನ್ನು ಅಲ್ಲಗಳೆದರು. ಅಡುಗೆ ಅನಿಲ ಸಿಲಿಂಡರ್ ವಿತರಣೆ ಸಂದರ್ಭ ತಮ್ಮನ್ನು ಆಹ್ವಾನಿಸುತ್ತಿಲ್ಲ ಎಂದು ತಾಪಂ ಸದಸ್ಯ ಸಂಜೀವ ಪೂಜಾರಿ ಸಹಿತ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದರು. ಆಹ್ವಾನ, ಸಭಾಮರ್ಯಾದೆ ಕುರಿತು ಆರೋಪಗಳ ಸುರಿಮಳೆ ಸಭೆಯಲ್ಲಿ ಕೇಳಿಬಂತು.
ಕಲ್ಲಡ್ಕ ಶ್ರೀರಾಮ ಶಿಕ್ಷಣ ಸಂಸ್ಥೆ ಮತ್ತು ಪುಣಚ ಶ್ರೀದೇವಿ ಶಿಕ್ಷಣ ಸಂಸ್ಥೆಯವರಿಗೆ ಅಕ್ಷರ ದಾಸೋಹದ ಸೌಲಭ್ಯ ಒದಗಿಸಲು ಸಿದ್ಧರಿದ್ದೇವೆ, ಆದರೆ ಅಲ್ಲಿಂದ ಬೇಡಿಕೆಯೇ ಬಂದಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ವಿಷಯ ಪ್ರಸ್ತಾಪಿಸಿದ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಈ ವಿಷಯದ ಕುರಿತು ಸ್ಪಷ್ಟನೆ ಬಯಸಿದಾಗ ಉತ್ತರಿಸಿದ ಅಧಿಕಾರಿ, ಎರಡೂ ಶಿಕ್ಷಣ ಸಂಸ್ಥೆಗಳು ಅಕ್ಷರ ದಾಸೋಹದಡಿ ಸೌಲಭ್ಯ ಪಡೆಯಲು ಅರ್ಹ. ಆದರೆ ಅಲ್ಲಿಂದ ಬೇಡಿಕೆ ಬಂದಿಲ್ಲ. ಬೇಡಿಕೆ ಬಂದರೆ ಪೂರೈಸಲು ಅಡ್ಡಿಯಿಲ್ಲ ಎಂದರು.
ರೇಶನ್ ಕಾರ್ಡಿನಲ್ಲಿ ಸೂಚಿಸಿದ ವಿಳಾಸದಲ್ಲಿ ವ್ಯಕ್ತಿ ಇಲ್ಲದಿದ್ದರೆ ಅವರ ಹೆಸರನ್ನು ಯಾಕೆ ರದ್ದುಪಡಿಸುವುದಿಲ್ಲ ಎಂದು ಸದಸ್ಯ ಉಸ್ಮಾನ್ ಕರೋಪಾಡಿ ಪ್ರಶ್ನಿಸಿದರು. ಆರು ತಿಂಗಳಿಂದ ಕಂಪ್ಯೂಟರ್ ನಲ್ಲಿ ಸಮಸ್ಯೆ ಇದೆ ಎಂದು ಅಧಿಕಾರಿ ಹೇಳಿದ್ದಕ್ಕೆ ತೃಪ್ತರಾಗದ ಉಸ್ಮಾನ್ ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಯಾರು ಯಾವ ಅಂಗಡಿಯಿಂದಲೂ ರೇಷನ್ ಪಡೆಯಬಹುದು ಎಂದು ಅಧಿಕಾರಿ ತಿಳಿಸಿದರು.
ಒಟ್ಟು ರೇಷನ್ ಕಾರ್ಡುಗಳು ಎಷ್ಟು ವಿತರಣೆಯಾಗಿವೆ, ಗ್ರಾಮ ಪಂಚಾಯತ್ ಗೆ ಮಾಹಿತಿ ಯಾಕೆ ದೊರಕುತ್ತಿಲ್ಲ. ಥಂಬ್ ಸಮಸ್ಯೆ ಇದೆ ಎಂದಾದರೆ ಯಾಕೆ ಅದರ ಪರಿಹಾರದ ಕುರಿತು ಸೊಸೈಟಿಗಳ ಸಭೆ ಕರೆಯುವುದಿಲ್ಲ, ಈ ಸಮಸ್ಯೆ ಕುರಿತು ಗಂಭೀರವಾಗಿ ಕಾರ್ಯವೆಸಗಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಸೂಚಿಸಿದರು.
ಸ್ವಚ್ಛತೆಗೆ ಪ್ರಶಸ್ತಿ ಪಡೆಯುತ್ತೇವೆ ಆದರೆ ಕರೋಪಾಡಿ ಗ್ರಾಮದಲ್ಲಿ 15 ಕುಟುಂಬಕ್ಕೆ ಶೌಚಾಲಯವೇ ಇಲ್ಲ ಎಂದು ಸದಸ್ಯ ಉಸ್ಮಾನ್ ಕರೋಪಾಡಿ ಸಭೆಯ ಗಮನಕ್ಕೆ ತಂದರು. ಈ ಕುರಿತು ಹಾರಿಕೆಯ ಉತ್ತರ ನೀಡುವುದು ಬೇಡ. ಶೌಚಾಲಯ ಕೊಡಲು ಸಮಸ್ಯೆ ಏನು, ಯಾಕೆ ಆಗಿಲ್ಲ ಎಂದು ಅವರು ಪ್ರಶ್ನಿಸಿದಾಗ ಅಧಿಕಾರಿಗಳು ಪರಿಶೀಲಿಸುವ ಭರವಸೆ ನೀಡಿದರು.
ಕಂದಾಯ ಇಲಾಖೆಯಿಂದ ಅಧಿಕಾರಿಗಳು ಬರುವುದೇ ಇಲ್ಲ. ನಮಗೆ ಸಮರ್ಪಕ ಉತ್ತರ ದೊರಕುವುದೇ ಇಲ್ಲ ಎಂದು ಸದಸ್ಯರು ಆಕ್ಷೇಪಿಸಿದ ಘಟನೆ ನಡೆಯಿತು. ಸಜಿಪಮೂಡ ಅಂಗನವಾಡಿ ಕುರಿತು ಸದಸ್ಯ ಸಂಜೀವ ಪೂಜಾರಿ ಪ್ರಶ್ನಿಸಿದಾಗ ಉತ್ತರಿಸಲು ಅಧಿಕಾರಿ ತಡಕಾಡಿದರು. ಈ ಸಂದರ್ಭ ಪಿಲಾತಬೆಟ್ಟು ಗ್ರಾಮದ ಜಾಗದ ಕುರಿತು ರಮೇಶ್ ಕುಡ್ಮೇರು ಪ್ರಶ್ನಿಸಿದರು. ಕುರ್ನಾಡು ವಿಚಾರದ ಕುರಿತು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಪ್ರಶ್ನಿಸಿದರು. ಆದರೆ ಕಂದಾಯ ಇಲಾಖೆಯಲ್ಲಿ ಉತ್ತರಿಸಲು ತಹಶೀಲ್ದಾರ್ ಬರಲಿಲ್ಲ ಯಾಕೆ ಎಂದು ಸದಸ್ಯರು ಪ್ರಶ್ನಿಸಿದರು.
ಮಿನಿ ವಿಧಾನಸೌಧ ಉದ್ಘಾಟನೆಗೊಂಡು ತಿಂಗಳು ಕಳೆಯಿತು. ಆದರೆ ತಹಶೀಲ್ದಾರ್ ಚೇಂಬರ್ ಎಲ್ಲಿದೆ ಎಂದು ಗೊತ್ತಾಗುತ್ತಿಲ್ಲ. ಅಲ್ಲೊಂದು ಗುರುತಿನ ಬೋರ್ಡ್ ಹಾಕಲೇನು ಅಡ್ಡಿ ಎಂದು ಸದಸ್ಯ ಪ್ರಭಾಕರ ಪ್ರಭು ಪ್ರಶ್ನಿಸಿದರು. ಈ ಸಂದರ್ಭ ಉತ್ತರಿಸಿದ ಪಿಡಬ್ಲುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್, ಇದು ಪಿಡಬ್ಲುಡಿ ಇಲಾಖೆಯ ಕಾರ್ಯಪಟ್ಟಿಯಲ್ಲಿಲ್ಲ ಎಂದರು.
ಶಿಕ್ಷಕರ ಕೊರತೆ:
ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಕೊರತೆ ಇದ್ದು, ಸರಕಾರಿ ಪ್ರೌಢಶಾಲೆಗಳಲ್ಲಿ ಹೇಗೆ ರಿಸಲ್ಟ್ ಬರಲು ಸಾಧ್ಯ ಎಂದು ಮಮತಾ ಗಟ್ಟಿ, ಹೈದರ್ ಕೈರಂಗಳ, ಸುಭಾಶ್ಚಂದ್ರ ಪ್ರಶ್ನಿಸಿದರು. ಚರ್ಚೆಯಲ್ಲಿ ಯಶವಂತ ಪೊಳಲಿ, ರಮೇಶ ಕುಡ್ಮೇರು ಪಾಲ್ಗೊಂಡರು.
ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ಕೊಟ್ಟರೂ ಪಾಲಿಸುವುದಿಲ್ಲ ಯಾಕೆ ಎಂದು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದ ಮಮತಾ ಗಟ್ಟಿ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಗಟ್ಟಿ, ಮಂಜುಳಾ ಮಾಧವ ಮಾವೆ, ರವೀಂದ್ರ ಕಂಬಳಿ, ಸದಸ್ಯರಾದ ಪ್ರಭಾಕರ ಪ್ರಭು, ಉಸ್ಮಾನ್ ಕರೋಪಾಡಿ, ಆದಂ ಕುಂಞ, ಹೈದರ್ ಕೈರಂಗಳ, ಗೀತಾ ಚಂದ್ರಶೇಖರ್, ಕೆ.ಸಂಜೀವ ಪೂಜಾರಿ, ಮಹಾಬಲ ಆಳ್ವ, ರಮೇಶ್ ಕುಡ್ಮೇರು ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು. ತಾಪಂ ಇಒ ಸಿಪ್ರಿಯಾನ್ ಮಿರಾಂಡ ಸ್ವಾಗತಿಸಿ, ವಂದಿಸಿದರು.