ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಪರಾರಿ ಎಂಬಲ್ಲಿನ ಆದಿ ದ್ರಾವಿಡ ಜನಾಂಗದ ಪರಿಶಿಷ್ಟ ಜಾತಿಯ ಕಾಲೋನಿಗೆ ರಸ್ತೆ ಹಾಗೂ ವಿದ್ಯುತ್ ದಾರಿ ದೀಪದ ಸೌಲಭ್ಯ ಒದಗಿಸಿಲ್ಲ ಎಂದು ಆರೋಪಿಸಿ ಸ್ಥಳೀಯರು ಗುರುವಾರ ಪುರಸಭಾ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಬಂಟ್ವಾಳ ಕ್ಷೇತ್ರ ಬಿಜೆಪಿ ಎಸ್.ಎಸ್ಸಿ ಮೋರ್ಚಾ ಅಧ್ಯಕ್ಷ ಗಂಗಾಧರ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಕಾಲೋನಿಗೆ ರಸ್ತೆ, ದಾರಿದೀಪ ಅಳವಡಿಸುವಂತೆ ಅನುದಾನ ಮೀಸಲಿಟ್ಟರೂ ಪುರಸಭೆಯು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗಂಗಾಧರ್ ಆರೋಪಿಸಿದ್ದಾರೆ.
ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಲಾಗಿತ್ತಲ್ಲದೆ,ಪ.ಪಂ.ಮತ್ತು ಪ.ಜಾತಿಯ ಬಹುತೇಕ ಸಭೆಯಗಳಲ್ಲೂ ಚರ್ಚಿಸಲಾಗಿತ್ತು .ಆದರೂ ಇದರ ಅನುಷ್ಠಾನಕ್ಕೆ ಪುರಸಭೆ ಮುಂದಾಗಿಲ್ಲ ಎಂದು ಗಂಗಾಧರ್ ಆರೋಪಿಸಿದರು.
ಗಂಗಾಧರ್ ಪುರಸಭೆಯ ಅವರಣದಲ್ಲಿ ಪ್ರತಿಭಟನೆ ಮುಂದಾಗುತ್ತಿದ್ದಂತೆ ಬಂದೋಬಸ್ತಿನಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಗೇಟ್ ಒಳಗಡೆ ಪ್ರವೇಶಕ್ಕೆ ತಡೆದರು. ಇದರಿಂದ ಆಕ್ರೋಶಿತರಾದ ಗಂಗಾಧರ್ ನೇರ ಎಸ್.ಎಸ್ಸಿ ಸೆಲ್ ನ ಎಸ್ಪಿ ಡಾ ವೇದಮೂರ್ತಿಯವರಿಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು . ಪ್ರತಿಭಟನೆಗೆ ದಲಿತರಿಗೆ ಹೊರಗಡೆ ಅವಕಾಶ, ಉಳಿದವರಿಗೆ ಹೊರಗಡೆಯೇ ಇದೆಂತಹ ನೀತಿ ಎಂದು ಪ್ರಶ್ನಿಸಿದರು.
ಗಂಗಾಧರ್ ಅವರು ಪುರಸಭೆಯ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದರೆ,ಒಳಗಡೆ ಸಾಮಾನ್ಯ ಸಭೆ ನಡೆಯುತಿತ್ತು. ಬಳಿಕ ಮುಖ್ಯಾಧಿಕಾರಿ ಪ್ರತಿಭಟನಾಕಾರರಿಂ ಮನವಿ ಸ್ವೀಕರಿಸಿ, ಶೀಘ್ರವೇ ಕಾಮಗಾರಿ ಕೈಗೆತ್ತಿಗೊಳ್ಳವ ಭರವಸೆಯಂತೆ ಪ್ರತಿಭಟನೆ ವಾಪಾಸ್ ಪಡೆದರು.