ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಸಾಹಿತ್ಯ ಪ್ರಕಾರವನ್ನು ದಾಖಲಿಸುವ ಐತಿಹಾಸಿಕ ಕಾರ್ಯಕ್ರಮ ಡಾ. ಏರ್ಯ ಸಾಹಿತ್ಯ ಸಂಭ್ರಮ ಸ್ವಾಗತ ಸಮಿತಿ ಆಯೋಜಿಸಿದೆ ಎಂದು ಬಂಟ್ವಾಳ ತಾಲೂಕು ಪ್ರಾಥಮಿಕ ಹಾಗೂ ಗ್ರಾಮೀಣ ಭೂ ಅಭಿವೃದ್ಧಿ ಸಂಘದ ಅಧ್ಯಕ್ಷ ಸುದರ್ಶನ ಜೈನ್ ಅವರು ತಿಳಿಸಿದರು.
ನಮ್ಮ ಬಂಟ್ವಾಳ ಕಾರ್ಯಾಲಯದಲ್ಲಿ ಗುರುವಾರ ಡಾ. ಏರ್ಯ ಬದುಕು- ಬರಹ ಸಾಧನೆಗಳ ಪಕ್ಷಿನೋಟ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಏರ್ಯ ಸಾಹಿತ್ಯ, ಸಮಾಜ ಸೇವೆ, ಸಂಘಟನೆ ಕ್ಷೇತ್ರಗಳ ಸಾಧನೆ ಮುಂದಿನ ಪೀಳಿಗೆಗೆ ಅನಾವರಣಗೊಳ್ಳಬೇಕೆಂದು ತಿಳಿಸಿದರು.
ಕೃತಿ ಸಂಪಾದಕ, ಹಿರಿಯ ರಂಗ ಕಲಾವಿದ ಮಹಾಬಲೇಶ್ವರ ಹೆಬ್ಬಾರ್ ಮಾತನಾಡಿ, ಡಿ.16ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಬೆಳಗ್ಗೆ 9.30ರಿಂದ ಸಂಜೆ 4.30 ತನಕ ಡಾ. ಏರ್ಯ ಸಾಹಿತ್ಯ ಸಂಭ್ರಮ ನಡೆಯಲಿದ್ದು, ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಆಶೀರ್ವಚನ ನೀಡಲಿದ್ದಾರೆ ಎಂದು ವಿವರಿಸಿದರು.
ಸ್ವಾಗತ ಸಮಿತಿ ಸಂಚಾಲಕ ವಿಶ್ವನಾಥ್ ಬಂಟ್ವಾಳ, ಸಂಘಟಕ ಕಿಶೋರ್ ಪ್ರೀತಿ, ಪತ್ರಕರ್ತ ಪ್ರಶಾಂತ್ ಪುಂಜಾಲಕಟ್ಟೆ, ಪ್ರಧಾನ ಕಾರ್ಯದರ್ಶಿ ಫಾರೂಕ್ ಬಂಟ್ವಾಳ ಉಪಸ್ಥಿತರಿದ್ದರು.