ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ಹಾಗೂ ವಿವಿಧ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 1170ನೆ ಮದ್ಯವರ್ಜನ ಶಿಬಿರಕ್ಕೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ಚಾಲನೆ ನೀಡಲಾಯಿತು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಜಗದೀಶ್ ಯಡಪಡಿತ್ತಾಯ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಮದ್ಯಪಾನ, ದುಶ್ಚಟಗಳ ಬಗ್ಗೆ ಮಾಹಿತಿ ನೀಡಿ ಅವರನ್ನು ಚಟಗಳಿಂದ ಮುಕ್ತಗೊಳಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮಿಸುತ್ತಿದೆ. ಮದ್ಯಪಾನದ ಪಿಡುಗಿನಿಂದ ನಾಶವಾಗುತ್ತಿರುವ ಕುಟುಂಬಗಳನ್ನು ರಕ್ಷಿಸಲು ಇಂತಹ ಶಿಬಿರಗಳು ಸಹಕಾರಿಯಾಗಿವೆ ಎಂದು ಹೇಳಿದರು.
ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಚಂದ್ರಶೇಖರ್, ರೋಟರಿ ಕ್ಲಬ್ ಕಾರ್ಯದರ್ಶಿ ನಾರಾಯಣ ಹೆಗ್ಡೆ, ಶಿಬಿರಾಧಿಕಾರಿ ಗಣೇಶ್ ಆಚಾರ್ಯ, ಬಿ.ಎಂ.ದಾಮೋದರ್, ತಿಮ್ಮಯ್ಯ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಸದಸ್ಯೆ ಸುಲೋಚನಾ ಸ್ವಾಗತಿಸಿ, ರೋಹಿನಿ ವಂದಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೇಲ್ವಿಚಾರಕ ಶಶಿಧರ್ ನಿರೂಪಿಸಿದರು.
ಮದ್ಯವರ್ಜನ ಶಿಬಿರದಲ್ಲಿ ಮೊದಲನೆ ದಿನವಾದ ಇಂದು ೫೦ಮಂದಿ ಭಾಗವಹಿಸಿದ್ದು, ಡಿ.೨೦ರವರೆಗೆ ಶಿಬಿರ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.