ಬಿ.ಸಿ.ರೋಡ್ ಸಹಿತ ಬಂಟ್ವಾಳ ತಾಲೂಕಿನಾದ್ಯಂತ ವ್ಯಕ್ತಿತ್ವವಿಕಸನ, ತರಬೇತಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರ ಮೂಲಕ ಜನಪರ ಹಾಗೂ ಜನಪ್ರಿಯವಾಗಿದ್ದ ಜೋಡುಮಾರ್ಗ ನೇತ್ರಾವತಿ ಜೇಸಿ ಮತ್ತೆ ಕಾರ್ಯೋನ್ಮುಖವಾಗಿದೆ.
ಮಂಗಳೂರು ಜೇಸಿ ಸಾಮ್ರಾಟ್ ಅಧ್ಯಕ್ಷ ರಾಘವೇಂದ್ರ ಹೊಳ್ಳ ನೇತೃತ್ವದಲ್ಲಿ ಜೋಡುಮಾರ್ಗ ಜೇಸಿಯ ಎಲ್ಲ ಪೂರ್ವ ಸದಸ್ಯರನ್ನು ಒಗ್ಗೂಡಿಸಿ, ಹೊಸ ಸದಸ್ಯರ ಸೇರ್ಪಡೆಯೊಂದಿಗೆ ಡಿಸೆಂಬರ್ 10ರಂದು ಸಂಜೆ ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಜೇಸಿ ಮಂಗಳೂರು ಸಾಮ್ರಾಟ್ ಪ್ರಾಯೋಜಿತ ಜೋಡುಮಾರ್ಗ ನೇತ್ರಾವತಿ ಜೇಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸವಿತಾ ನಿರ್ಮಲ್ ಅವರಿಗೆ ರಾಘವೇಂದ್ರ ಹೊಳ್ಳ ಪದಗ್ರಹಣ ನೆರವೇರಿಸಿದರು.
ಕಾರ್ಯದರ್ಶಿ ಅಜಿತ್ ಜಿ. ಜೋಷಿ, ಕೋಶಾಧಿಕಾರಿ ನವೀನ್ ಚಂದ್ರ ಶೆಟ್ಟಿ, ಉಪಾಧ್ಯಕ್ಷರಾಗಿ ಸತ್ಯನಾರಾಯಣ ರಾವ್, ಶುಭ ಆನಂದ ಬಂಜನ್, ಹರಿಪ್ರಸಾದ್, ನಿರ್ದೇಶಕರಾಗಿ ಹರ್ಷರಾಜ್ ಸಿ, ವಸಂತ್, ಹರೀಶ ಮಾಂಬಾಡಿ, ಕೃಷ್ಣರಾಜ್ ಭಟ್, ಮೊಹಮ್ಮದ್ ಪಿ ಅವರಿಗೆ ಅಧ್ಯಕ್ಷೆ ಪ್ರತಿಜ್ಞಾವಿಧಿ ಬೋಧಿಸಿದರು.
ಸಲಹೆಗಾರರಾಗಿ ಆಯ್ಕೆಗೊಂಡ ಬಿ.ರಾಮಚಂದ್ರ ರಾವ್, ವೃಷಭರಾಜ ಜೈನ್, ಜಯಾನಂದ ಪೆರಾಜೆ, ಜ್ಯೋತೀಂದ್ರಪ್ರಸಾದ್ ಶೆಟ್ಟಿ, ರಾಮದಾಸ ಬಂಟ್ವಾಳ, ಉಮೇಶ್ ನಿರ್ಮಲ್ ಹಾಗೂ ಅಹಮದ್ ಮುಸ್ತಫಾ ಉಪಸ್ಥಿತರಿದ್ದ ಕಾರ್ಯಕ್ರಮವನ್ನು ಜೇಸಿ ವಲಯಾಧ್ಯಕ್ಷ ರಾಕೇಶ್ ಕುಂಜೂರು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಜೇಸಿ ಆಂದೋಲನಕ್ಕೆ ಅಧಿಕ ಸಂಖ್ಯೆಯಲ್ಲಿ ಯುವಜನರು ಸೇರ್ಪಡೆಗೊಳ್ಳಬೇಕು ಎನ್ನುವುದು ತನ್ನ ಆಶಯ ಎಂದರು.
ಮುಖ್ಯ ಅತಿಥಿಗಳಾಗಿ ಜೇಸಿ ವಲಯಉಪಾಧ್ಯಕ್ಷ ಪಶುಪತಿ ಶರ್ಮಾ, ಬಂಟ್ವಾಳ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ತಹಶೀಲ್ದಾರ್ ಪುರಂದರ ಹೆಗ್ಡೆ ಹಾಗೂ ಜೇಸಿ ಇಂಡಿಯಾ ಫೌಂಡೇಶನ್ ನಿರ್ದೇಶಕ ವೈ. ಸುಕುಮಾರ್, ಮಂಗಳೂರು ಸಾಮ್ರಾಟ್ ಜೇಸಿ ಕಾರ್ಯದರ್ಶಿ ವೆಂಕಟರಮಣ ಭಾಗವಹಿಸಿದ್ದರು.
ಜೋಡುಮಾರ್ಗ ನೇತ್ರಾವತಿ ಜೇಸಿ ವ್ಯಕ್ತಿತ್ವ ವಿಕಸನ, ತರಬೇತಿ ಹಾಗೂ ಹಲವು ಸಮಾಜಮುಖಿ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಕ್ರಿಯಾಶೀಲವಾಗಲಿ ಎಂದು ಅತಿಥಿಗಳು ಶುಭ ಹಾರೈಸಿದರು. ಈ ಸಂದರ್ಭ ಒಟ್ಟು 15 ನೂತನ ಸದಸ್ಯರ ಸೇರ್ಪಡೆ ನಡೆಯಿತು.