ಕವರ್ ಸ್ಟೋರಿ

ವಾಮನರೂಪಿ ಭವನ್ 3ಡಿ ರೆಸಿನ್ ಆರ್ಟ್ ನಿಷ್ಣಾತ

  • ದಿನೇಶ್ ಹೊಳ್ಳ

 

 

 

 

 

www.bantwalnews.com

ಲೇಖಕ, ಕಲಾವಿದ, ಕವಿ, ಪರಿಸರವಾದಿ ದಿನೇಶ್ ಹೊಳ್ಳ ಬಂಟ್ವಾಳ ತಾಲೂಕಿನ ಮೊಡಂಕಾಪಿನವರು. ಅವರ ಕಾರ್ಯಕ್ಷೇತ್ರ ಮಂಗಳೂರು. ಪಶ್ಚಿಮ ಘಟ್ಟ ಉಳಿಸಿ, ನೇತ್ರಾವತಿ ಸಂರಕ್ಷಣೆ, ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಳ ಪ್ರೇರಕ ಶಕ್ತಿ. ಹಲವು ಪತ್ರಿಕೆಗಳಲ್ಲಿ ಅವರ ಬರೆಹಗಳು ಮೂಡಿಬಂದಿವೆ. www.bantwalnews.com ಗಾಗಿ ಹೊಳ್ಳ ಅವರು ವಿಶೇಷ ಲೇಖನವೊಂದನ್ನು ಒದಗಿಸಿದ್ದಾರೆ. ಇದು ಪುಟ್ಟ ದೇಹದ ದೊಡ್ಡ ಕಲಾವಿದ ಭವನ್ ಕುರಿತು. ಯಾರು ಈ ಭವನ್? ಏನು ಇವರ ಕಾರ್ಯ? ದಿನೇಶ್ ಹೊಳ್ಳ ಹೀಗೆ ವಿವರಿಸುತ್ತಾರೆ. 

ಈ ಯುವಕನ ಹೆಸರು ಭವನ್.

ನೋಡಲು 5 ನೇ ತರಗತಿಯಲ್ಲಿ ಕಲಿಯುವಂತಹ ಬಾಲಕನಂತೆ ಕಂಡರೂ ವಯಸ್ಸು 23. ಮುದ್ದುಮುಖದ ಪುಟ್ಟ ಪೋರನಂತಿರುವ ಈ ವಾಮನರೂಪಿ ಪ್ರತಿಭಾವಂತ ಕಲಾವಿದ.

ಭವನ್ — ಕಲಾವಿದ

ಮೂರ್ತಿ ಚಿಕ್ಕದಾದರೂ ಕೀರ್ತಿ ಎತ್ತರವೆತ್ತರ ಏರುತ್ತಿದೆ. ಮೂಲತಃ ಮಾಡಿಕೇರಿಯವನಾದ ಭವನ್ ಹೆಚ್ಚಿನ ಶಿಕ್ಷಣ ಪೂರೈಸಿದ್ದು ಮಂಗಳೂರಿನಲ್ಲೇ. ಮಂಗಳೂರಿನ ಮಹಾಲಸಾ ಕಲಾ ಶಿಕ್ಷಣ ಸಂಸ್ಥೆಯಲ್ಲಿ 5 ವರ್ಷದ ದೃಶ್ಯ ಕಲಾ ಪದವಿ ಯನ್ನು ಪಡೆದು ಇದೀಗ ವೃತ್ತಿಪರ ಕಲಾವಿದ.

ಭಾವಚಿತ್ರಗಳನ್ನು ರಚಿಸುವುದರಲ್ಲಿ ವಿಶೇಷ ಪರಿಣತಿ ಹೊಂದಿರುವ ಭವನ್ ಈವರೆಗೆ ಸುಮಾರು 5000 ಕ್ಕೂ ಮಿಕ್ಕಿ ಭಾವಚಿತ್ರಗಳನ್ನು ರಚಿಸಿರುವರು. ಇವರ ವಿಶೇಷ ಆಸಕ್ತಿ 3ಡಿ ರೆಸಿನ್ ಗೋಲ್ಡ್ ಫಿಶ್ ಆರ್ಟ್ ಮಾಡುವುದರಲ್ಲಿ. ಇದು ಬಹಳ ಅಪರೂಪದ ಕಲಾಕೃತಿ.

ಆಸ್ಟ್ರೇಲಿಯಾದ ಚೆರಾಲ್ಡೋ ಚಿರ್ಚಿಯ ಮತ್ತು ಜಪಾನ್ ನ ರಿಯುಸಕಿ ಫುಕಾಹೊರಿ ಇವರಿಬ್ಬರನ್ನು ಬಿಟ್ಟರೆ ಇಡೀ ಭಾರತ ದೇಶದಲ್ಲೇ ಈ ಕಲಾಕೃತಿಯನ್ನು ಮಾಡುವ ಏಕೈಕ ವ್ಯಕ್ತಿ ಅಂದರೆ ಅದು ಈ ಭವನ್…

ಈ ಕಲಾಕೃತಿಯ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿ ಚೆರಾಲ್ಡೋ ಚೀರ್ಚಿಯಾ ರನ್ನು ಇಂಟರ್ನೆಟ್ ನಲ್ಲಿ ಸಂಪರ್ಕಿಸಿ ಅವರ ಮಾರ್ಗದರ್ಶನ ಪಡೆದು ಇದೀಗ ವಿವಿಧ ಪ್ರಕಾರಗಳ 3ಡಿ ರೆಸಿನ್ ಆರ್ಟ್ ಮಾಡವಲ್ಲಿ ಕ್ರಿಯಾಶೀಲರಾಗಿದ್ದಾರೆ.

ರೆಸಿನ್ ಎಂಬ ಅಂಟು ದ್ರವದಿಂದ 5 ರಿಂದ 6 ಪದರಗಳನ್ನು ಸೃಷ್ಟಿಸಿ ಪ್ರತಿಯೊಂದು ಪದರಕ್ಕೂ ಬಣ್ಣ ಹಚ್ಚುತ್ತಾ ಬಂದಾಗ ಈ 3ಡಿ ಕಲಾಕೃತಿ ಅಭಿವ್ಯಕ್ತಗೊಳ್ಳುತ್ತದೆ. ಆಕ್ಟೋಪಸ್, ಚೇಳು, ಮೀನು, ಜಲಚರ ಜೀವಿಗಳು ಈ ಕಲಾಕೃತಿಗೆ ವಸ್ತು ವಿಷಯಗಳಾಗುತ್ತವೆ.

ಇದನ್ನು ಉತ್ತಮ ರೀತಿಯಲ್ಲಿ ಮಾಡಿ ಮನೆ, ಮನೆಗಳಲ್ಲೂ ಇದರ ಸದುಪಯೋಗವಾಗುವಂತಹ ಪ್ರಾಯೋಗ ವಾದರೆ ಈ ಕಲಾಕೃತಿಗಳಿಗೆ ಬೇಡಿಕೆ ಲಭಿಸಬಹುದು. ಸುಮಾರು 30 ಕಲಾಕೃತಿಗಳನ್ನು ರಚಿಸಿ ಕಲಾ ಪ್ರದರ್ಶನ ಮಾಡಬೇಕೆಂಬುದು ಭವನ್ ನ ಅಭಿಲಾಷೆ.

ಅಭಯ್ ಆರ್ಟ್ ಫೆಸ್ಟ್, ಬಾಂಬೆ ಆರ್ಟ್ ಸೊಸೈಟಿ ಯಲ್ಲಿ ಭವನ್ ತಮ್ಮ ಕಲಾ ಕೃತಿಯನ್ನು ಪ್ರದರ್ಶಿಸಿ ಪ್ರಶಸ್ತಿ ಗಳಿಸಿಕೊಂಡಿದ್ದಾರೆ. ಇತ್ತೀಚೆಗೆ ಉಡುಪಿಯ 25 ಅಡಿ ಎತ್ತರದ ಗೋಡೆಯೊಂದಕ್ಕೆ ಈ ಭವನ್ ಏಣಿ ಇಟ್ಟು ಬ್ರಹತ್ ಭಿತ್ತಿ ಚಿತ್ತಾರವನ್ನು ಮಾಡಿದುದು ಈ ಈ ಚಿಕ್ಕ ಮೂರ್ತಿಯ ದೊಡ್ಡ ಕಲೆಯ ಶ್ರಮವಾಗಿರುತ್ತದೆ. ಹುಟ್ಟುಹಬ್ಬ, ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಭವನ್ ಪಟಾಪತ್ ಅಂತ ಕೆಲವೇ ನಿಮಿಷಗಳಲ್ಲಿ ಕ್ಯಾರಿಕೆಚರ್ ನಿರ್ಮಿಸಬಲ್ಲರು.

ಭವನ್ ಅವರೊಂದಿಗೆ ಮಾತನಾಡಲು ಕರೆ ಮಾಡಿರಿ:  9741165754

ಅವರ ಚಿತ್ರಗಳು ಇಲ್ಲಿವೆ ನೋಡಿ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts