ಸಾಧಕರು

ಡಾ. ಏರ್ಯ – ನಾನು ಕಂಡಂತೆ

  • ಬಿ.ತಮ್ಮಯ್ಯ

www.bantwalnews.com

 

 

 

 

 

 

 

 

ನಮ್ಮ ನಾಡಿನ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಸಾಮಾಜಿಕ ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಯುವಜನರಿಗೆ ಆದರ್ಶ. ಶಾಲೆಗೆ ಹೋಗಿ ಓದಿದ್ದು ಕಡಿಮೆಯಾದರೂ ಸದಾ ಓದುವ ಹವ್ಯಾಸ ಇಟ್ಟುಕೊಂಡಿರುವ ಏರ್ಯರು ಅರ್ಹವಾಗಿಯೇ ಗೌರವ ಡಾಕ್ಟರೇಟ್ ಗೆ ಭಾಜನರಾದವರು.

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಅವರು ಕೈಯಾಡಿಸದ ಕ್ಷೇತ್ರವೇ ಇಲ್ಲ. ಸದಾ ಸಾಮಾಜಿಕ ಚಿಂತನೆ ಮಾಡುವ ಏರ್ಯರು ಯಾವುದೇ ಕೆಲಸಕ್ಕೆ ಕೈ ಹಾಕಿದರೆ, ಅದನ್ನು ಪೂರೈಸದೆ ಬಿಡುವವರಲ್ಲ. ಒಳ್ಳೆಯ ಕೆಲಸ ಯಾರೇ ಮಾಡಿದರೂ ನೋಡಿ ಸಂತೋಷಗೊಳ್ಳುವವರು. ಅವರನ್ನು ಮನಸಾರೆ ಪ್ರಶಂಸೆ ಮಾಡುವ ಅವರ ಗುಣ ಅನುಕರಣೀಯ.

ಏರ್ಯರು ದೂರದಲ್ಲಿರುವವರಿಗೆ ತುಂಬಾ ಗಂಭೀರ ವ್ಯಕ್ತಿಯಾಗಿ ಯಾರೊಡನೆಯೂ ಬೆರೆಯದಿರುವವರಂತೆ ಕಾಣಬಹುದು. ಆದರೆ ಅವರು ಒಮ್ಮೆ ನಿಮ್ಮನ್ನು ಮೆಚ್ಚಿಕೊಂಡರೆ, ಅವರ ಸಾಮೀಪ್ಯ ನಿಮಗೆ ದೊರೆತರೆ, ನಿಮ್ಮ ಒಳ್ಳೇಯತನ ಅವರಿಗೆ ಮನದಟ್ಟಾದರೆ ಅವರು ಹಿರಿಕಿರಿತನದ ಎಲ್ಲೆ ಮೀರಿ, ಮಕ್ಕಳಂತೆ ಮುಗ್ಧ ಮನಸ್ಸಿನಿಂದ ಬೆರೆಯುತ್ತಾರೆ. ಜಾತಿ, ಧರ್ಮದ ಎಲ್ಲೆ ಮೀರಿದವರು ಇವರು. ನಾರಾಯಣಗುರುವಳು ಜಾತಿ ಯಾವುದಾದರೇನು? ಒಳ್ಳೆಯವನಾದರೆ ಸಾಕು ಎಂದಿದ್ದಾರೆ. ಡಾ. ಏರ್ಯರು ಇದನ್ನು ಜೀವನದಲ್ಲಿ ಅನುಷ್ಠಾನಗೊಳಿಸಿದ್ದಾರೆ.

ಏರ್ಯಬೀಡಿನ ಯಜಮಾನರಾಗಿ ಧಾರ್ಮಿಕ ಕಾರ್ಯ ನಡೆಸುವುದರೊಂದಿಗೆ ಕೃಷಿಕರಾಗಿ ಸಾಮಾಜಿಕ ಸುಧಾರಕರಾಗಿಯೂ ಏರ್ಯರು ಕೆಲಸ ಮಾಡಿದ್ದಾರೆ. ದಲಿತರ ಉದ್ಧಾರಕ್ಕಾಗಿ ಹರಿಜನ ಸೇವಾ ಸಂಘ ಮಾಡಿಕೊಂಡು, ಪರಿಶಿಷ್ಟರಿಗೆ ಶಿಕ್ಷಣ ನೀಡುವ ಕೆಲಸ ಮಾಡಿದ್ದಾರೆ. ಮೊಳಹಳ್ಳಿ ಶಿವರಾಯರ ಪ್ರೇರಣೆಯಿಂದ ಗ್ರಾಮದಲ್ಲಿ ಸಹಕಾರ ಸಂಘ ಸ್ಥಾಪಿಸಿ, ಸಹಕಾರ ಚಳವಳಿಗೆ ಪ್ರೇರಣೆಯಾಗಿದ್ದಾರೆ. ತಾಲೂಕು ಮಾರ್ಕೆಟಿಂಗ್ ಸೊಸೈಟಿ, ದ.ಕ.ಜಿಲ್ಲಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ದೀಪಿಕಾ ಪ್ರೌಢಶಾಲೆ ಸ್ಥಾಪಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಮಾಡಿದ್ದಾರೆ. ಗ್ರಾಮದಲ್ಲಿ ಯುವಕ ಸಂಘ ಮಾಡಿ, ಯುವಜನತೆಯನ್ನು ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ.

ಅಂದಿನ ಜಿಲ್ಲಾಧಿಕಾರಿ ನಾಗೇಗೌಡರ ಒಡನಾಟದಿಂದ ಜಾನಪದ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡ ಇವರು, ಜಾನಪದ ತಂಡ ಕಟ್ಟಿ ರಾಜ್ಯಾದ್ಯಂತ ಪ್ರದರ್ಶನ ನೀಡಿದ್ದಾರೆ. ಕರಾವಳಿ ಹವ್ಯಾಸ ನಾಟಕ ಸಂಸ್ಥೆ ಕಟ್ಟಿ ನಾಟಕಗಳ ಬೆಳವಣಿಗೆಗೆ ಸಹಕರಿಸಿದ್ದಾರೆ. ಅನೇಕ ಸಾಹಿತಿಗಳ ಕಾರ್ಯಕ್ರಮಗಳನ್ನು ಸಂಘಟಿಸಿ ಗಟ್ಟಿ ಸಂಘಟಕ ಎನಿಸಿಕೊಂಡಿದ್ದಾರೆ. ಸುಮಾರು 15 ಹಿರಿಯ ಸಾಹಿತಿಗಳ ಶತಮಾನೋತ್ಸವವನ್ನು ನಡೆಸಿದ ಕೀರ್ತಿ ಇವರದ್ದು.

ಭೂಮಾಲೀಕರಾದ ಇವರು ಭೂಮಿ ಕಳಕೊಂಡ ಬಗ್ಗೆ ದುಖಿಸದೆ ಬಡವನಿಗೆ ಭೂಮಿ ಸಿಕ್ಕಿದ ಕುರಿತು ಸಂತೋಷಪಟ್ಟವರು. ಪ್ರಾಮಾಣಿಕ ಗೇಣಿದಾರನೊಬ್ಬ ಹಳೇಗೇಣಿ ಬಾಕಿ ತಂದುಕೊಟ್ಟಾಗ ಅದನ್ನು ತೆಗೆದುಕೊಂಡು ಮರುದಿನ ಆ ಮೊತ್ತವನ್ನು ಹಿಂದಿರುಗಿಸಿ, ಸನ್ಮಾನ ಮಾಡಿದ್ದಕ್ಕೆ ನಾನು ಸಾಕ್ಷಿ. ಇದು ಇತ್ತೀಚೆಗೆ ನಡೆದ ಘಟನೆ.

ಈ ಕಾಲದಲ್ಲೂ ಇಂಥ ಪ್ರಾಮಾಣಿಕರು ಇದ್ದಾರಲ್ಲ ಎಂದು ಹೇಳಿ ಭಾವುಕರಾದವರು ಏರ್ಯರು. ಕಲ್ಮಶ ಇಲ್ಲದ ಮನಸ್ಸು ಒಳ್”ಳೆಯತನಕ್ಕೆ ಒಲಿಯುವ ಮಾನವ ಕುಲವೊಂದೇ ವಲಂ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿದವರು. ನೀತಿವಂತರನ್ನು ಅಪ್ಪಿಕೊಂಡವರು. ಒಪ್ಪಿಕೊಂಡವರು. ಸಾಹಿತಿಯಾಗಿ, ಕವಿಯಾಗಿ, ಸಮಾಜ ಸುಧಾರಕರಾಗಿ, 93ರ ಇಳಿಹರೆಯದಲ್ಲಿರುವ ಡಾ. ಏರ್ಯರ ಸಾಹಿತ್ಯ ಸಂಭ್ರಮಕ್ಕೆ ಇದು ತಕ್ಕ ಕಾಲ. ಅವರ ಜೀವನದ ಆದರ್ಶದ ಹಲವು ಮಗ್ಗುಲುಗಳು ಇದೇ 16ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಅನಾವರಣಗೊಳ್ಳಲಿದೆ. ಸದಾ ಕೈಯಲ್ಲಿ ಪುಸ್ತಕ ಹಿಡಿದು ಪುಸ್ತಕ ಪ್ರೇಮಿಯಾದ ಡಾ. ಏರ್ಯರ ಸಾಹಿತ್ಯ ಸಂಭ್ರಮದಲ್ಲಿ 16, 17ರಂದು ಎರಡೂ ದಿನ ಪುಸ್ತಕ ಮೇಳ ಇರುವುದು ಸಂದರ್ಭೋಚಿತವೂ ಹೌದು.

(ಲೇಖಕರು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಮಾಜಿ ಅಧ್ಯಕ್ಷರು, ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ, ಡಾ. ಏರ್ಯರ ಒಡನಾಡಿ, ಬಂಟ್ವಾಳನ್ಯೂಸ್ ಅಂಕಣಕಾರರು)

READ MORE ABOUT ARYA SAHITYA SAMBHRAMA:

1.

2.

3.

4.

5.

B Thammayya

ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Recent Posts