ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಾಜ್ಯದ ವಿವಿಧೆಡೆ ಬುಧವಾರ ನಸುಕಿನ ವೇಳೆ ಹಲವು ಅಧಿಕಾರಿಗಳ ಮನೆಗಳಿಗೆ ದಾಳಿ ನಡೆಸಿ ಶಾಕ್ ನೀಡಿದೆ. ಇವರಲ್ಲಿ ಬಂಟ್ವಾಳ ತಾಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪಿ.ಎಫ್. ಮಿರಾಂಡ ಅವರ ಪಕ್ಷಿಕೆರೆ, ತೋಕೂರುನಲ್ಲಿರುವ ಮನೆ ಹಾಗೂ ಬಂಟ್ವಾಳದ ಕಚೇರಿಗೆ ದಾಳಿ ನಡೆಸಿರುವ ಡಿವೈಎಸ್ಪಿ ಸುಧೀರ್ ಹೆಗ್ಡೆ ಮತ್ತು ಡಿವೈಎಸ್ಪಿ ಗಿರೀಶ್ ನೇತೃತ್ವದ ಕಾರ್ಯಾಚರಣೆ ತಂಡ ದಾಖಲೆಗಳನ್ನು ಕಲೆ ಹಾಕುತ್ತಿದೆ. ವಿವಿಧೆಡೆ ಮಿರಾಂಡಾ ಮಾಡಿರುವ ಆಸ್ತಿಪಾಸ್ತಿಗಳ ಲೆಕ್ಕಾಚಾರ, ಕಚೇರಿ ಕಂಪ್ಯೂಟರ್ ನ ಹಾರ್ಡ್ ಡಿಸ್ಕ್ ಪರಿಶೀಲನೆ ಸಹಿತ ಹಲವು ಪ್ರಮುಖ ದಾಖಲೆಗಳ ಪರಿಶೀಲನೆ ನಡೆದಿದೆ.
ಇದೇ ವೇಳೆ ತುಮಕೂರಿನ ಕೊರಟಗೆರೆ ಪಿಡಬ್ಲುಡಿ ಎಇಇ ಜಗದೀಶ್, ಬಳ್ಳಾರಿ ಪ್ರದೇಶಾಭಿವೃದ್ಧಿ ನಿಗಮ ಅಧಿಕಾರಿಯ ಮನೆ, ಧಾರವಾಡ ನಗರ ಎಸಿಎಫ್ ಮನೆ, ಕಲಬುರ್ಗಿ ಸಣ್ಣ ನೀರಾವರಿ ವಿಭಾಗ ಎಕ್ಸಿಕ್ಯುಟಿವ್ ಎಂಜಿನಿಯರ್ ಮನೆ ಮೇಲೆಯೂ ದಾಳಿ ನಡೆದಿದೆ.
ಬೆಳಗಾವಿಯ ಅಂಕೋಲಾ ವಲಯದ ಎಸಿಎಫ್ ಅವರ ಹುಬ್ಬಳ್ಳಿಯ ಗಂಗಾಧರ ನಗರ, ಧಾರವಾಡದ ಕಲಗೇರಿಯಲ್ಲಿರುವ ನಿವಾಸ ಹಾಗೂ ಬೆಳಗಾವಿ ಸಮೀಪವಿರುವ ಫಾರ್ಮ್ ಹೌಸ್ ಮೇಲೆ ಏಕ ಕಾಲಕ್ಕೆ ಐವರು ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಳಗಾವಿಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಅವರಿಗೂ ಎಸಿಬಿ ಶಾಕ್ ನೀಡಿದೆ. ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಸೇರಿದಂತೆ ವ್ಯವಹಾರ ಹೊಂದಿರುವ ಸ್ಥಳಗಳ ಮೇಲೆ ದಾಳಿ ನಡೆದಿದೆ.