www.bantwalnews.com
ನಿರೀಕ್ಷೆಯಂತೆ ತುಳು ಭಾಷೆಯನ್ನು ಎಂಟನೇ ಪರಿಚ್ಚೇಧಕ್ಕೆ ಸೇರಿಸಬೇಕು ಎಂಬ ಹಕ್ಕೊತ್ತಾಯದೊಂದಿಗೆ ಬಂಟ್ವಾಳದಲ್ಲಿ ದ.ಕ.ಜಿಲ್ಲೆಯ ಮೊದಲ ತಾಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆಯಿತು. ಖುದ್ದು ಸಮ್ಮೇಳನಾಧ್ಯಕ್ಷ, ಪತ್ರಕರ್ತ ಮಲಾರು ಜಯರಾಮ ರೈ ಈ ಒತ್ತಾಯ ಮಾಡಿದರು.
ಸಮ್ಮೇಳನದ ಉದ್ಘಾಟನಾ ಸಮಾರಂಭದ ವರದಿ ಹೀಗಿದೆ:
ತುಳು ಭಾಷಿಕರಿಗಂತ ಕಡಿಮೆ ಸಂಖ್ಯೆಯಲ್ಲಿರುವ ಸಿಂಧಿ, ನೇಪಾಲಿ, ಕೊಂಕಣಿ, ಮಣಿಪುರಿ, ಸಂಸ್ಕೃತ ಭಾಷೆಗಳು ಸಂವಿಧಾನದ 8ನೆ ಪರಿಚ್ಛೇದಕ್ಕೆ ಸೇರಿದೆ. ಆದರೆ 5 ಮಿಲಿಯ ಜನರ ಭಾಷೆಯಾಗಿರುವ ತುಳು ಭಾಷೆಗೆ ಪರಿಚ್ಛೇದದ ಮಾನ್ಯತೆ ಯಾಕಿಲ್ಲ? ಎಂದು ಪ್ರಶ್ನಿಸಿದರು ಸಮ್ಮೇಳನಾಧ್ಯಕ್ಷ ಮಲಾರು ಜಯರಾಮ ರೈ. ಜನರ ಭಾಷೆಯೊಂದನ್ನು ಮಾನ್ಯತೆ ನೀಡದೆ ದೂರವಿಟ್ಟಿರುವುದು ನ್ಯಾಯ ವಿರೋಧಿ, ಜನ ವಿರೋಧಿ ನಡವಳಿಕೆಯಾಗಿದೆ.ಭಾಷೆಯ ಹಕ್ಕು ಜನರ ಮೂಲಭೂತ ಸಾಂಸ್ಕೃತಿಕ ಹಕ್ಕು. ಅದಕ್ಕೂ ಆ ಭಾಷೆಯನ್ನು ಮಾತನಾಡುವ ಜನರ ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ವ್ಯವಸ್ಥೆಗೂ ಅವರ ರಾಜಕೀಯ ಹಕ್ಕಿಗೂ ಸಂಬಂಧ ಇದೆ. ಲಿಪಿ ಇದ್ದರೂ, ಇಲ್ಲದಿದ್ದರೂ ಯುನೆಸ್ಕೊ ಸಂಸ್ಥೆಯು ಪ್ರತಿ ಭಾಷೆಗೂ ಮನ್ನಣೆ ನೀಡಿದೆ ಎಂದರು.
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ತುಳು ಅದ್ಭುತವಾದ ಭಾಷೆ. ಆದರೆ ಪ್ರಸ್ತುತ ದಿನಗಳಲ್ಲಿ ಇಂಗ್ಲಿಷ್ ವ್ಯಾಮೋಹದಿಂದಾಗಿ ತುಳು ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಡಿವಟಿಕೆಯನ್ನು ಉರಿಸುವುದರ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತವನ್ನು ಹೋಲಿಸುವ ಜಗತ್ತಿನಲ್ಲಿ ಇನ್ನೊಂದು ದೇಶವಿಲ್ಲ. ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸವಾಬೇಕಿದೆ ಎಂದು ಹೇಳಿದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅವರು ಸಭಾಂಗಣದ ಮುಂಭಾಗ ದ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಮ್ಮೇಳನದಲ್ಲಿ ಒಳ್ಳೆಯ ವಿಚಾರಗಳ ಬಗ್ಗೆ ಚಿಂತನ -ಮಂಥನ ನಡೆಯುವ ಮೂಲಕ ಉತ್ತಮ ನಿರ್ಧಾರಗಳು ಹೊರಬರಬೇಕೆಂದು ಅವರು ಆಶಿಸಿದರು.
ತುಳು ಅಕಾಡೆಮಿಯಿಂದ ಮೂರು ತಿಂಗಳಿಗೊಮ್ಮ ಪ್ರಕಟಗೊಳ್ಳುವ “ಮದಿಪು” ಹಾಗೂ ಬಿ.ತಮ್ಮಯ್ಯ ಅವರ 15ನೆ ಸಂಚಿಕೆ “ತುಳುವೆ” ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಸಮ್ಮೇಳನ ಸಮಿತಿ ಅಧ್ಯಕ್ಷ ಸುದರ್ಶನ ಜೈನ್ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಎ.ಗೋಪಾಲ ಅಂಚನ್ ಪ್ರಾಸ್ತಾವಿಕ ಮಾತನಾಡಿದರು. ಸಂಘಟಕ ಡಿ.ಎಂ.ಕುಲಾಲ್ ವಂದಿಸಿದರು. ಕಲಾವಿದ ಎಚ್.ಕೆ.ನಯನಾಡು ಮತ್ತು ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಡಾ. ವೈ.ಎನ್.ಶೆಟ್ಟಿ, ಸುಭಾಶ್ಚಂದ್ರ ಜೈನ್, ತುಳು ಅಕಾಡೆಮಿ ಸದಸ್ಯರು ಉಪಸ್ಥಿತರಿದ್ದರು.