www.bantwalnews.com
ಕ್ಷಣಗಣನೆ ಆರಂಭಗೊಂಡಿದೆ. ತಾಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನಕ್ಕೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರ ಸಜ್ಜುಗೊಂಡಿದೆ. ಬೆಳಗ್ಗೆ 9ರಿಂದ ರಾತ್ರಿ 9 ಗಂಟೆವರೆಗೆ ಇಡೀ ದಿನ ಮಲಾರು ಜಯರಾಮ ರೈ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಉದ್ಘಾಟನೆ, ವಿಚಾರಗೋಷ್ಠಿ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಸಾಂಸ್ಕೃತಿಕ ಕಾರ್ಯಕ್ರಮ, ಸಮಾರೋಪ, ತುಳುವೆರೆ ಗೊಬ್ಬುಲು, ಪಾಡ್ದನ, ಬೀರ ಸಂಧಿ, ಉರಲ್ ಇತ್ಯಾದಿಗಳ ವಾಚನ, ತುಳುಗಾದೆ, ಒಗಟು, ರಸಪ್ರಶ್ನೆ ಸ್ಪರ್ಧೆ, ತುಳು ಬದುಕು, ವಸ್ತು ಪ್ರದರ್ಶನ, ಕುಲಕಸುಬುಗಳ ಪ್ರಾತ್ಯಕ್ಷಿಕೆಗಳು ಸಮ್ಮೇಳನದಲ್ಲಿ ಇರಲಿವೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ನೇತೃತ್ವದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ.ಬಿ, , ಸಮ್ಮೇಳನದ ಉಪಸಮಿತಿ ಸಂಚಾಲಕರು ಡಾ. ವೈ.ಎನ್ ಶೆಟ್ಟಿ, ತಾಲೂಕು ತುಳು ಸಮ್ಮೇಳನ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್, ತಾಲೂಕು ತುಳು ಸಮ್ಮೇಳನ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಎಂ ಕುಲಾಲ್, ತಾಲೂಕು ತುಳು ಸಮ್ಮೇಳನ ಸಮಿತಿ ಪ್ರಧಾನ ಸಂಚಾಲಕ ಗೋಪಾಲ್ ಅಂಚನ್ ಮುಂದಾಳತ್ವದಲ್ಲಿ ನಡೆಯುವ ಸಮ್ಮೇಳನದ ಇದರ ಆಯೋಜಕರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಬಂಟ್ವಾಳ ತಾಲೂಕು ತುಳು ಸಾಹಿತ್ಯ ಸಮ್ಮೇಳನ ಸಮಿತಿ.
ಅಧ್ಯಕ್ಷರ ಬಗ್ಗೆ:
ಬಂಟ್ವಾಳ ತಾಲೂಕು ಪ್ರಥಮ ತುಳು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಮಲಾರ್ ಜಯರಾಮ ರೈ. ಅವರು ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಮಲಾರ್ ಮನೆತನದವರು. 1946ನೇ ಇಸವಿ ಫೆಬ್ರವರಿ 4 ರಂದು ಲಕ್ಷ್ಮಿ ಮತ್ತು ತಿಮ್ಮಪ್ಪ ರೈ ದಂಪತಿಗಳಿಗೆ ಜನಿಸಿದ ಇವರು ಹಿಂದಿಯಲ್ಲಿ ಸ್ನಾತಕ್ಕೋತ್ತರ ಪದವಿ ಮುಗಿಸಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದವರು.ಮಂಗಳೂರಿನ ನವಭಾರತ ಪತ್ರಿಕೆಯಲ್ಲಿ ದುಡಿದು ಬಳಿಕ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ವರದಿಗಾರರಾಗಿ, ಹಿರಿಯ ಉಪ ಸಂಪಾದಕರಾಗಿ, ಜಿಲ್ಲಾ ವರದಿಗಾರರಾಗಿ ರಾಜ್ಯದ ಬೇರೆ ಬೇರೆ ಕಡೆ ಕೆಲಸ ಮಾಡಿದ್ದಾರೆ. ಲೇಖಕರಾಗಿ ಗುರುತಿಸಿ ಕೊಂಡಿರುವ ಇವರು ಅನೇಕ ತುಳು ಕೃತಿಗಳನ್ನು ಹೊರತಂದಿದ್ದಾರೆ. ’ರಸದಿಂಜಿ ರಾಮಾಯಣ’, ’ತುಳುನಾಡ್’, ’ಪುಟಪರ್ತಿ ಪುಣ್ಯಭೂಮಿ’, ’ಸಾಯಿಪಾತೆರೆದ ಅಮೃತ’, ’ಅಪ್ಪೆಇಲ್’, ’ಬೇರ್‌ಮರ್ದ್’ (ಗದ್ಯಕೃತಿಗಳು) ಹಾಗೂ ತುಳುವೆರೆಂಕುಲು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಕನ್ನಡದಲ್ಲಿ ಕೂಡಾ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಬಹುರೂಪಿ ಗಾಂಧಿ (ಅನುವಾದಿತ ಕೃತಿ) ಸಂತ ಸುಧಾರಕ ಶ್ರೀ ನಾರಾಯಣಗುರು, ನುಗ್ಗಿ ಬರುತಾವೆ ನೂರು ನೆನಪುಗಳು, ಅದಮ್ಯ (ಸಂಪಾದಿತ ಕೃತಿಗಳು) ಸಾವಿರದಲ್ಲೊಂದು ಗ್ರಾಮ ಸೀರೆ, ಪತ್ರಕರ್ತನ ಪರ್ಯಟನ (ಕಿರುಕೃತಿಗಳು) ಹಾಗೆಯೇ ಇಂಗ್ಲಿಷ್ ಭಾಷೆಯಲ್ಲಿ ಕೂಡಾ ಬರೆದಿರುವ ಜಯರಾಮ ರೈಗಳು ’ಜರ್ನಿ ತ್ರೂ ಜರ್ನಲಿಸಂ’ ವಿಷನ್ ಏಂಡ್ ಕ್ರಿಯೇಶನ್ ಆಫ್ ಶ್ರೀ ಗುರುದೇವಾನಂದ ಸ್ವಾಮೀಜಿ, ಇನ್ನರ್ ವಾಯ್ಸ್ ಆಫ್ ಅವಧೂತ, ಲೈಟ್ ಆಫ್ ನಾಲೇಜ್ ಮುಂತಾದ ಇಂಗ್ಲಿಷ್ ಕೃತಿಗಳು ಪ್ರಕಟವಾಗಿದೆ.
ಶ್ರೀ ಮದ್‌ರಾಮಾಯಣದ ಸುಂದರಕಾಂಡದ ತುಳು ಗದ್ಯ ಅನುವಾದ ಒಡಿಯೂರಿನ ದತ್ತ ಪ್ರಕಾಶ ನಿಯತ ಕಾಲಿಕದಲ್ಲಿ ದಾರವಾಹಿಯಾಗಿ ಪ್ರಕಟಗೊಳ್ಳುತ್ತಿದೆ. ತುಳು ಸಂಘಟನೆಯಲ್ಲಿ ವಿಶೇಷ ಆಸಕ್ತಿ ಇರುವ ಮಲಾರ್ ಜಯರಾಮ ರೈ ಬೆಂಗಳೂರಿನ ತುಳುವೆಂಕುಲು ಸಂಘಟನೆಯ ಸ್ಥಾಪಕ ಸದಸ್ಯರು, ಒಡಿಯೂರು ತುಳುಕೂಟದ ಸ್ಥಾಪಕಾಧ್ಯಕ್ಷರು. ಕುಡ್ಲ ತುಳುಕೂಟದ ಪ್ರಾರಂಭದಲ್ಲಿ ದುಡಿದವರು. ತುಳುಭಾಷಾಭಿವೃದ್ಧಿಗಾಗಿ ನಡೆದ ಅನೇಕ ತುಳು ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ವಿದ್ವಾಂಸರಾಗಿ, ಸಂಘಟಕಾಗಿ ಪಾಲ್ಗೊಂಡವರು. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧ ಪಟ್ಟು ಅನೇಕ ಪ್ರಶಸ್ತಿ ಪುರಸ್ಕಾರ ಪಡೆದಿರುವ ಇವರು ತುಳುಭಾಷೆ-ಸಂಸ್ಕೃತಿಯ ಬೆಳವಣಿಗೆಗಾಗಿ ಶ್ರಮಿಸಿ ಅನೇಕ ಕಡೆ ಸನ್ಮಾನ, ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಕೇರಳ ತುಳು ಅಕಾಡೆಮಿಯ ಪ್ರಥಮ ತಂಡದಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.
ಸಮ್ಮೇಳನದಲ್ಲಿ ಏನೇನಿವೆ:
ಬೆಳಗ್ಗೆ 9 ಗಂಟೆಗೆ ತುಳುವೆರೆ ದಿಬ್ಬಣ ಆರಂಭ. ಉದ್ಘಾಟನೆ – ಎ.ಸಿ.ಭಂಡಾರಿ. 9.30ಕ್ಕೆ ಸಮ್ಮೇಳನವನ್ನು ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. ಮಲಾರು ಜಯರಾಮ ರೈ ಅಧ್ಯಕ್ಷತೆ ವಹಿಸುವರು. ವಸ್ತುಪ್ರದರ್ಶನವನ್ನು ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಉದ್ಘಾಟಿಸುವರು. ಅತಿಥಿಗಳಾಗಿ ಸಚಿವ ಯು.ಟಿ.ಖಾದರ್, ವಿಧಾನಪರಿಷತ್ತುಸದಸ್ಯ ಗಣೇಶ್ ಕಾರ್ಣಿಕ್, ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ ಭಾಗವಹಿಸುವರು. 11 ಗಂಟೆಗೆ ತುಳುನಾಡ ಐಸಿರ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಅವರಿಂದ ನಡೆಯಲಿದೆ. ಇದರ ಪ್ರಾಯೋಜಕತ್ವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಹಿಸಲಿದೆ. 11.30ಕ್ಕೆ ಚಾವಡಿ ಪಟ್ಟಾಂಗ ನಡೆಯುವುದು. ವಿಷಯ: ತುಳು ಪರಪುದ ಒರಿಪು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ಅಧ್ಯಕ್ಷತೆಯಲ್ಲಿ ಭಾಗವಹಿಸುವವರು ಅಬ್ದುಲ್ ರಝಾಕ್ ಅನಂತಾಡಿ, ಮಹೇಂದ್ರನಾಥ ಸಾಲೆತ್ತೂರು, ಚೇತನ್ ಮುಂಡಾಜೆ ಮತ್ತು ನಾದ ಮಣಿನಾಲ್ಕೂರು. ಅದಾದ ಬಳಿಕ 12.30ಕ್ಕೆ ಪಾರಿ- ಪಾಡ್ದನ, ಉರಲ್ – ಬೀರ, ಸಂದಿ ಪನ್ಪುನಿ ನಡೆಯುವುದು. ಮಧ್ಯಾಹ್ನ 1 ಗಂಟೆಗೆ ಭೋಜನ ವಿರಾಮ.
ಮಧ್ಯಾಹ್ನ 1.30ಕ್ಕೆ ಪಿರಾಕ್ ದ ತುಳು ಪದೊಕ್ಲೆನ್ ಪನ್ಪುನಿ ಇದೆ. 2 ಗಂಟೆಗೆ ಹಿರಿಯ ತುಳು ಸಾಹಿತಿ ಚೆನ್ನಪ್ಪ ಅಳಿಕೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ. ಗಣೇಶ ಪ್ರಸಾದ ಪಾಂಡೇಲು, ಚಂದ್ರಶೇಖರ ಪಾತೂರು, ಪೂವಪ್ಪ ನೇರಳಕಟ್ಟೆ, ಶಾಂತಪ್ಪ ಬಾಬು ಸಜಿಪ, ವಿಶ್ವನಾಥ ಕುಲಾಲ್ ಮಿತ್ತೂರು, ರಾಜೇಶ ಶೆಟ್ಟಿ ದೋಟ, ಜಯಶ್ರೀ ಇಡ್ಕಿದು, ಸತೀಶ ಕಕ್ಯಪದವು, ಯತೀಶ ಕಾಮಾಜೆ, ರಶ್ಮಿ ಅಮ್ಮೆಂಬಳ ಭಾಗವಹಿಸುವರು.
ಮಧ್ಯಾಹ್ನ 3 ಗಂಟೆಗೆ ಚಾವಡಿ ಪಟ್ಟಾಂಗ – ಸಾಗೊಳಿದ ಎರ್ತೆ ಜಪ್ಪೆಲ್. ಅಧ್ಯಕ್ಷತೆಯನ್ನು ಡಾ. ಗಿರೀಶ ಭಟ್ಟ ಅಜಕ್ಕಳ ವಹಿಸುವರು. ಎಂ.ಕೆ.ಕುಕ್ಕಾಜೆ, ಸೀತಪ್ಪ ಕುಡೂರು ಸಿದ್ದಕಟ್ಟೆ, ಜಯಶ್ರೀ ಚೌಟ ಸಿದ್ಧಕಟ್ಟೆ, ಆದಿರಾಜ ಜೈನ್ ಕೋಯಕುಡೆ ಭಾಗವಹಿಸುವರು. ಸಂಜೆ 4 ಗಂಟೆಗೆ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢಶಾಲೆ ಶಂಭೂರು ಇವರಿಂದ ತುಳು ರಂಗ್ ರಂಗಿತೊ ಲೇಸ್ ನಡೆಯುವುದು.
ಸಂಜೆ 4.30ಕ್ಕೆ ತಮ್ಮನದ ಲೇಸ್. ಸನ್ಮಾನ ಕಾರ್ಯಕ್ರಮ.
ಗಿರಿರಾಜ ವಗ್ಗ (ರಂಗಕರ್ಮಿ), ಮೀನಾಕ್ಷಿ ಆಚಾರ್ಯ (ಪುಲ ಮರ್ದ್), ವಿಶ್ವನಾಥ ಶೆಟ್ಟಿ ಸೊರ್ನಾಡು (ಯಕ್ಷಗಾನ), ಕಾಂತಪ್ಪ ಶೆಟ್ಟಿ ಅಗರಿ (ಪುಲ ಮರ್ದ್), ಬಿ.ಆರ್. ಕುಲಾಲ್ ಬಿ.ಸಿ.ರೋಡ್ (ರಂಗಕರ್ಮಿ), ವಾಸು ಪಂಡಿತ ಸರಪಾಡಿ (ಪುಲ ಮರ್ದ್), ಅಣ್ಣು ಪೂಜಾರಿ ಅಮ್ಟಾಡಿ (ಕಂಬುಲ), ಗೌರಿ ಪಾಲ್ತಾಜೆ (ಪದೆತಿ), ಎಸ್. ರಹಿಮಾನ್ ಸಾಹೇಬ್ ಇರ್ವತ್ತೂರು (ಉರಗ ಸಂರಕ್ಷಣೆ), ಶೇಖರಪಂಬದ ಸಜಿಪ (ದೈವಾರಾಧನೆ), ಶಶಿ ಬಂಡಿಮಾರ್ (ತುಳು ಪತ್ರಿಕೆ), ಅಂತೋಣಿ ಪಿಂಟೋ ಪೆರ್ನೆ (ಕಂಡ ಸಾಗೊಳಿ), ನಾರಾಯಣ ದಾಸ್ ಕಕ್ಯಪದವು (ಧರ್ಮಕಜ್ಜ) ಸನ್ಮಾನ ಪಡೆದುಕೊಳ್ಳುವವರು.
ಸಂಜೆ 5 ಗಂಟೆಗೆ ದುನಿಪು – ತುಳು ಪದೊ ರಂಗಿತೊ – ನಾದ ಸಂಗೀತ ಕಲಾ ತಂಡ, ನಯನಾಡು ಇವರಿಂದ.
ಸಮಾರೋಪ ಸಮಾರಂಭ ಸಂಜೆ 5.30ಕ್ಕೆ ನಡೆಯುವುದು. ಮಲಾರ್ ಜಯರಾಮ ರೈ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣವನ್ನು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಮಾಡುವರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಶಕುಂತಳಾ ಶೆಟ್ಟಿ, ತುಳು ಕೂಟ ಅಧ್ಯಕ್ಷ ಸುದರ್ಶನ ಜೈನ್, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ಆಲಿ, ಪುರಸಭೆ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಪುರಸಭೆ ಸದಸ್ಯ ಭಾಸ್ಕರ ಟೈಲರ್ ಭಾಗವಹಿಸುವರು. ಈ ಸಂದರ್ಭ ಶಿವರಾಮ ಜೋಗಿ ಮತ್ತು ದೇಜಪ್ಪ ಬಾಚಕೆರೆ ಅವರಿಗೆ ತುಳು ಸಿರಿ ಗೌರವ ನೀಡಲಾಗುವುದು.
ಸಂಜೆ 6.30ಕ್ಕೆ ಕಾವಳಕಟ್ಟೆ ಯಕ್ಷಗಾನ ತಂಡ, ಶ್ರುತಿ ನಾಟ್ಯಲಹರಿಯಿಂದ ತುಳು ಜಾನಪದ ನಲಿಕೆಲು, 7 ಗಂಟೆಗೆ ತುಳು ಯಕ್ಷ ಹಾಸ್ಯ ವೈಭವ ಸರಪಾಡಿ ಅಶೋಕ ಶೆಟ್ಟಿ ಸಂಯೋಜನೆಯಲ್ಲಿ ನಡೆಯುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.