ವಿಟ್ಲದ ವಿಠಲ ವಿದ್ಯಾ ಸಂಘದ ವಿಠಲ ಪ್ರೌಢ ಶಾಲೆ ವಿಭಾಗದ ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಬೆಳಿಗ್ಗೆ ಧ್ವಜಾರೋಹಣ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಟ್ಲದ ಪುಷ್ಪಕ್ ಕ್ಲಿನಿಕ್‌ನ ವೈದ್ಯ ಡಾ. ವಿ.ಕೆ ಹೆಗ್ಡೆ ಮಾತನಾಡಿ ವಿದ್ಯಾ ಸಂಸ್ಥೆಗಳು ಜ್ಞಾನದ ಕಾರಂಜಿಯಾಗಿದೆ. ಶಿಕ್ಷೆ ಇಲ್ಲದ ಶಿಕ್ಷಣ ಸಂಸ್ಥೆಗಳು ಅಧಃಪತನದತ್ತ ಹೋಗಲು ಕಾರಣವಾಗುತ್ತದೆ. ಶಿಕ್ಷಕರಿಗೆ ಸ್ವಾತಂತ್ರ್ಯ ಕೊಟ್ಟಾಗ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.
ಕಾನತ್ತಡ್ಕ ಶ್ರೀ ಕೃಷ್ಣ ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜೆಸಿಂತಾ ಸೋಪಿಯಾ ಮಸ್ಕರೇಂಞಸ್ ಮಾತನಾಡಿ ಶಿಕ್ಷಣವು ಮಕ್ಕಳ ಸರ್ವೋತ್ತೊಮುಖ ಅಭಿವೃದ್ಧಿಗೆ ಮುಖ್ಯ ಕಾರಣವಾಗಿದೆ. ಶಿಕ್ಷಣವು ಕೇವಲ ಹಣ ಸಂಪಾದನೆ ಉದ್ದೇಶವಲ್ಲ. ಜೀವನದ ಉತ್ತಮ ಗುಣಪಟ್ಟವನ್ನು ಹೆಚ್ಚಿಸುತ್ತದೆ. ಸಜ್ಜನಿಕೆ, ಇಚ್ಛಾ ಶಕ್ತಿ ಇದ್ದಾಗ ಮುಂದಿನ ದಾರಿ ಸುಗಮವಾಗಿರುತ್ತದೆ ಎಂದು ತಿಳಿಸಿದರು.
ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಕೋಶಾಧಿಕಾರಿ ನಿತ್ಯಾನಂದ ನಾಯಕ್, ಸದಸ್ಯ ಪದ್ಮಯ್ಯ ಗೌಡ, ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಶಿಕ್ಷಕ ಶಂಕರ್‌ನಾರಾಯಣ್ ಪ್ರಸಾದ್, ಶಾಲಾ ನಾಯಕ ಶ್ರೀಶ ಕಿರಣ, ಉಪನಾಯಕಿ ಪ್ರಜ್ಞಾ ಶಂಕರಿ, ಕಾರ್ಯದರ್ಶಿ ಮುಫೀದಾ ಭಾನು, ಉಪಕಾರ್ಯದರ್ಶಿ ದೀಕ್ಷಿತ್ ಉಪಸ್ಥಿತರಿದ್ದರು.
ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ರಾಷ್ಟ್ರ ಗೀತೆಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತುಳು ಹಾಗೂ ಕನ್ನಡ ಸಂಸ್ಕೃತಿಗಳ ವಿವಿಧ ವೇಷಭೂಷಣಗಳು ಅನಾವರಣಗೊಂಡಿತ್ತು. ಜನಪದ ನೃತ್ಯಗಳು ಕೂಡ ಪ್ರದರ್ಶನಗೊಂಡಿದೆ.
ವಿಠಲ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ ವರದಿ ಮಂಡಿಸಿದರು. ಯಶವಂತ ವಿಟ್ಲ ಸ್ವಾಗತಿಸಿದರು. ಶಿಕ್ಷಕರಾದ ಸಿ.ಎಚ್ ಸುಬ್ರಹ್ಮಣ್ಯ ಭಟ್ ಹಾಗೂ ರಾಜಶೇಖರ್ ಅತಿಥಿಗಳ ಪರಿಚಯ ಮಾಡಿದರು. ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.