ಅಧಿಕಾರಿಗಳನ್ನು ಒದಗಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ನಿರ್ಲಕ್ಷ ತೋರಿದ ಹಿನ್ನಲೆಯಲ್ಲಿ ಮುಂದಿನ ಗ್ರಾಮಸಭೆಯನ್ನೇ ಬಹಿಷ್ಕರಿಸಲು ನರಿಕೊಂಬು ಗ್ರಾ.ಪಂ.ನ ಸಾಮಾನ್ಯ ಸಭೆ ಸರ್ವಾನುಮತದ ತೀರ್ಮಾನ ಕೈಗೊಂಡಿದೆ.
ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೇಟ್ಟು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು ಗ್ರಾಮಸಭೆ ಪೂರ್ವಭಾವಿಯಾಗಿ ನಡೆಯುವ ವಾರ್ಡ್ ಸಭೆಗಳನ್ನು ನಡೆಸದಿರಲು ಸಭೆ ನಿರ್ಧರಿಸಿದೆ.
ಕಳೆದ ಸಾಮಾನ್ಯ ಸಭೆಯಲ್ಲಿ ಖಾಯಂ ಪಿಡಿಓ, ಕಾರ್ಯದರ್ಶಿ, ದ್ವಿತೀಯ ಲೆಕ್ಕ ಸಹಾಯಕರುಗಳನ್ನು ಖಾಯಂ ಆಗಿ ಒದಗಿಸಿ ಕೊಡಬೇಕೆಂದು ಸರ್ವಾನುಮತದ ನಿರ್ಣಯ ಕೈಗೊಂಡು ಜಿ.ಪಂ.ಮುಖ್ಯಕಾರ್ಯನಿರ್ವಾಹಣಾಧಿಕಾರಿ, ತಾ. ಪಂ.ಕಾರ್ಯನಿರ್ವಾಹಣಾಧಿಕಾರಿಯವರಿಗೆ ಸಲ್ಲಿಸಲಾಗಿದ್ದರೂ ಬೇಡಿಕೆಗಳಿಗೆ ಮೇಲಾಧಿಕಾರಿಗಳು ಸ್ಪಂದಿಸಿಲ್ಲ. ಆದ್ದರಿಂದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಬಾರಿಯ ವಾರ್ಡು ಹಾಗೂ ಗ್ರಾಮಸಭೆಗಳನ್ನು ಬಹಿಷ್ಕರಿಸಲು ಸರ್ವಾನುಮತದ ತೀರ್ಮಾನ ಕೈಗೊಳ್ಳಾಗಿದ್ದು ಈ ಬಗ್ಗೆ ಪ್ರಧಾನಮಂತ್ರಿ ಕಾರ್ಯಲಯಕ್ಕೂ ಮಾಹಿತಿ ನೀಡಲು ತೀರ್ಮಾನಿಸಲಾಗಿದೆ.
ನರಿಕೊಂಬು ಗ್ರಾ.ಪಂ.ವ್ಯಾಫ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಎಂಆರ್ ಜಲ ವಿದ್ಯುತ್ ಉತ್ಪಾದಕ ಘಟಕವು ಕಳೆದ ೨ ವರ್ಷಗಳಿಂದ ತೆರಿಗೆಯನ್ನು ಪಾವತಿಸಿಲ್ಲ. ಈ ಬಗ್ಗೆ ಕಂಪೆನಿಗೆ ನೋಟಿಸು ನೀಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನರಿಕೊಂಬುವಿನಿಂದ ಬೋಳಂತೂರು, ಶೇಡಿಗುರಿಯಾಗಿ ಬಸ್ ಸೌಲಭ್ಯ ಒದಗಿಸಿ ಕೊಡುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಜನರ ಅನುಕೂಲಕ್ಕಾಗಿ ಅಂಡರ್‌ಪಾಸ್ ನಿರ್ಮಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆ ಚರ್ಚಿಸಲಾಯಿತು.