ವಿಶೇಷ ವರದಿ

ಜನ ಮಾನಸದೆಡೆಗೆ ಏರ್ಯ ಸಾಹಿತ್ಯ ಯಾನ…

  • ಫಾರೂಕ್ ಬಂಟ್ವಾಳ

www.bantwalnews.com

  • ಡಿ.16ರಂದು ಬಂಟ್ವಾಳದಲ್ಲಿ ಡಾ.ಏರ್ಯ ಸಾಹಿತ್ಯ ಸಂಭ್ರಮ
  • ಸಾಹಿಸ್ಯಾಸಕ್ತರಿಗೊಂದು ಪುಸ್ತಕ ಜಾತ್ರೆ


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ ಸಾಮ್ರಾಜ್ಯವನ್ನು ಬಹುಕಾಲ ಆಳಿದ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವರಿಗೆ ಇದೀಗ 93ರ ಹರೆಯ. ಈ ಸುದೀರ್ಘ ಜೀವನ ಪಯಣದಲ್ಲಿ ಸಾಹಿತ್ಯ, ಸಾಮಾಜಿಕ, ಶೈಕ್ಷಣಿಕ, ಸಹಕಾರ ಮೊದಲಾದ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ಏರ್ಯರು ತಮ್ಮ ಬದುಕಿನುದ್ದಕ್ಕೂ ಉನ್ನತ ಮೌಲ್ಯಗಳನ್ನು ಎತ್ತಿ ಹಿಡಿದವರು.

ಏರ್ಯರ ಜೀವನ ಮೌಲ್ಯ ಸಂದೇಶ ಹಾಗೂ ಬಹುಮುಖ ವ್ಯಕ್ತಿತ್ವವನ್ನು ಮೆಲುಕು ಹಾಕುವ ಮತ್ತು ಕಿರಿಯ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಡಿ. 16ರಂದು ‘ಡಾ. ಏರ್ಯ ಸಾಹಿತ್ಯ ಸಂಭ್ರಮ’ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಡಾ. ಏರ್ಯ ಸಾಹಿತ್ಯ ಸಂಭ್ರಮ ಸ್ವಾಗತ ಸಮಿತಿ ಆಯೋಜಿಸಿದೆ. ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಏರ್ಯರ ಸಾಹಿತ್ಯ ಯಾನ ಅನಾವರಣಗೊಳ್ಳಲಿದೆ.

ರಾಷ್ಟ್ರಪಿತ ಗಾಂಧೀಜಿಯರು ಪ್ರತಿಪಾದಿಸಿದ ದೇಶಿಯತೆ, ಕಾರ್ನಾಡ್ ಸದಾಶಿವರಾಯರ ದೇಶಭಕ್ತಿಯಿಂದ ಪ್ರೇರಿತರಾದ ಏರ್ಯರು ಎಳೆಯ ವಯಸ್ಸಿನಲ್ಲೇ ಹರಿಜನ್ ಸೇವಕ ಸಂಸ್ಥೆಯೊಂದನ್ನು ಕಟ್ಟಿಕೊಂಡು, ಸಮಾಜದಲ್ಲಿ ತುಳಿತಕ್ಕೊಳಗಾದ ವರ್ಗಕ್ಕೆ ಆಸರೆಯಾದವರು. ದಲಿತರನ್ನು ಮೊತ್ತಮೊದಲ ಬಾರಿಗೆ ಹೊಟೇಲಿಗೆ ಪ್ರವೇಶ, ದಲಿತ ಮಕ್ಕಳಿಗೆ ವಿದ್ಯಾಭ್ಯಾಸ, ಊಟ, ವಸ್ತ್ರ ಉಚಿತವಾಗಿ ನೀಡುವ ಮೂಲಕ ಆಂದೋಲನವೊಂದಕ್ಕೆ ಕೈ ಹಾಕಿ ಯಶಸ್ವಿ ಕಂಡರು. ಏರ್ಯರ ರಾಮಾಶ್ವಮೇಧದ ರಸತರಂಗಗಳು ಮದ್ರಾಸು ವಿಶ್ವ ವಿದ್ಯಾಲಯದಲ್ಲಿ ಬಿ.ಎ. ತರಗತಿಗೆ ಪಠ್ಯವಾಗಿಯೂ ಸೇರ್ಪಡೆಗೊಂಡಿದೆ. ಏರ್ಯರ ಅನೇಕ ಸಾಹಿತ್ಯ ಕೃತಿ ಸರಕಾರದ ಅಂಕು-ಡೊಂಕು ತಿದ್ದುವಲ್ಲಿ ಹಾಗೂ ಅಧಿಕಾರಿಗಳ ಕಣ್ಣು ಕೆಂಪಾಗಿಸುವ ಮಟ್ಟದಲ್ಲೂ ಬೆಳೆದಿತ್ತು.

ಸಾಹಿತ್ಯ ಸಂಭ್ರಮದಲ್ಲಿ ಏನಿದೆ?
ಸಾಹಿತ್ಯ ಸಂಭ್ರಮ ಉದ್ಘಾಟನೆ ಹಾಗೂ ಸಮಾರೋಪ ಕಾರ್ಯಕ್ರಮಗಳ ನಡುವೆ ಏರ್ಯ: ಬದುಕು-ಬರಹ, ಸಹಕಾರಿ, ಸಂಘಟನಾ ಕ್ಷೇತ್ರಗಳ ಸಾಧನೆಯ ಕುರಿತು ಮೂರು ವಿಶೇಷ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಬೋಳಂತೂರು ಕೃಷ್ಣಪ್ರಭು ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ, ಡಾ. ಏರ್ಯ ಸಾಕ್ಷ್ಯ ಚಿತ್ರ ಪ್ರದರ್ಶನಗೊಳ್ಳಲಿದೆ.

ವೇದಿಕೆಗೆ ಪಂಜೆ ಹೆಸರೇಕೆ?
ಡಾ. ಏರ್ಯ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ವೇದಿಕೆಗೆ ‘ಕವಿಶಿಷ್ಯ’ ಪಂಜೆ ಮಂಗೇಶರಾವ್ ವೇದಿಕೆ ಎಂದು ನಾಮಕರಣ ಮಾಡಲಾಗಿದೆ. ಪಂಜೆಯವರು ಬಂಟ್ವಾಳ ಮೂಲದವರವರೆನ್ನುವ ಕಾರಣವೂ ಇಲ್ಲಿ ಔಚಿತ್ಯ ಪಡೆದ ಅಂಶ. 1974ರಂದು ಪಂಜೆ ಶತಮಾನೋತ್ಸವವನ್ನು ಏರ್ಯರೇ ಎದುರು ನಿಂತು ನಡೆಸಿದ್ದರು. ಪಂಜೆ ಕವಿ ಸ್ಮಾರಕ ಭವನ ನಿರ್ಮಾಣದ ಕನಸು ಹೊತ್ತವರು.

ಮೊಳಹಳ್ಳಿ ಶಿವರಾವ್ ಸಭಾಂಗಣ:
ಏರ್ಯರಿಗೆ ಸಹಕಾರಿ ಅಚ್ಚುಮೆಚ್ಚಿನ ಕ್ಷೇತ್ರದಲ್ಲೊಂದು. ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್ ಅವರ ಸಹಕಾರಿ ಆಂದೋಲನದಿಂದ ಪ್ರಭಾವಿತರಾದ ಏರ್ಯರು ತಮ್ಮೂರಾದ ಅಮ್ಟೂರಿನಲ್ಲಿ ಸಹಕಾರಿ ಸಂಸ್ಥೆಯೊಂದು ಸ್ಥಾಪಿಸಿ ಸಹಕಾರಿ ಜಾಗೃತಿ ಮೂಡಿಸಿದವರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಸಹಕಾರ ಆಂದೋಲನವನ್ನು ನಡೆಸಿದ್ದಾರೆ. ಈ ಕಾರಣಕ್ಕಾಗಿ ಮೊಳಹಳ್ಳಿ ಅವರ ಹೆಸರನ್ನು ಸಭಾಂಗಣಕ್ಕೆ ಇಡಲಾಗಿದೆ ಎಂದು ಡಾ. ಏರ್ಯ ಸಾಹಿತ್ಯ ಸಂಭ್ರಮ ಸ್ವಾಗತ ಸಮಿತಿ ಸಂಚಾಲಕ ವಿಶ್ವನಾಥ್ ಬಂಟ್ವಾಳ ತಿಳಿಸಿದ್ದಾರೆ.

ಸಂಭ್ರಮ ಎಲ್ಲಿ?
ಬಿ.ಸಿ.ರೋಡಿನ ನಾರಾಯಣಗುರು ವೃತ್ತರಿಂದ ಬಂಟ್ವಾಳ ಪೇಟೆಗೆ ಹೋಗುವ ದಾರಿಯಲ್ಲಿ ಅರ್ಧ ಫಲಾಂಗು ದೂರದಲ್ಲಿದೆ, ಸ್ಪರ್ಶಾಕಲಾ ಮಂದಿರ. ಬೆಳಗ್ಗೆ 9.30 ರಿಂದ ಸಂಜೆ 4.30 ತನಕ ಇಡೀ ದಿನ ಸಾಹಿತ್ಯ ಕಾರ್ಯಕ್ರಮ ಇಲ್ಲಿ ನಡೆಯಲಿದೆ.

ವಾಣಿಜ್ಯ ನಗರಿಯಾಗಿ ಬೆಳೆಯುತ್ತಿರುವ ಬಿ.ಸಿ.ರೋಡಿನಲ್ಲಿ ಸಾಹಿತ್ಯ- ಸಾಂಸ್ಕೃತಿಕ ವಾತಾವರಣವನ್ನು ತುಂಬುವ ಪ್ರಯತ್ನ ಮತ್ತೆ ನಡೆದಿದೆ. ಈ ಮೂಲಕ ಡಾ. ಏರ್ಯರು ಆದರ್ಶಪ್ರಾಯರು ಎನ್ನುತ್ತಾರೆ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ. ತುಕಾರಾಂ ಪೂಜಾರಿ ಪ್ರತಿಕ್ರಿಯಿಸಿದ್ದಾರೆ. ಯುವ ಜನರಿಗೆ, ವಿದ್ಯಾರ್ಥಿಗಳಿಗೆ ಸಹಜ ಸಾಹಿತ್ಯಾಸಕ್ತಿ ಮೂಡಿಸಲು ಡಾ. ಏರ್ಯ ಸಾಹಿತ್ಯ ಸಂಭ್ರಮ ಸ್ಪೂರ್ತಿಯಾಗಲಿದೆ ಎಂದು ಸಾಹಿತಿ ವಿ.ಎಸ್.ಭಟ್ ನುಡಿಯುತ್ತಾರೆ. ಏರ್ಯರ ಕ್ರೀಯಾಶೀಲತೆ, ಜೀವನೋಲ್ಲಾಸ ಯುವ ಜನರಲ್ಲಿ ಭರವಸೆ ಮೂಡಿಸುವುದು ಎಂಬುದು ಹಿರಿಯ ರಂಗಕರ್ಮಿ ಮಂಜು ವಿಟ್ಲ ಅವರ ಅಭಿಮತ.
ಡಾ. ಏರ್ಯರು ಕಳೆದ ಶತಮಾನದ ಬಹುಭಾಗ ಕಂಡವರು. ಅವರ ನಿವಾಸವೇ ಒಂದು ಗ್ರಂಥ ಭಂಡಾರ. ಇದೊಂದು ಸಾಹಿತ್ಯ ವಿದ್ಯಾರ್ಥಿಗಳಿಗೆ ಅಧ್ಯಯನ ಕೇಂದ್ರವಾಗಿದೆ ಎನ್ನುತ್ತಾರೆ ಮಹಾಬಲೇಶ್ವರ ಟಿ. ಹೆಬ್ಬಾರ್.

‘ಏರ್ಯರು ಜಿಲ್ಲೆಯ ಎಲ್ಲಾ ರಂಗಗಳಲ್ಲೂ ಕೈಯಾಡಿಸಿದವರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೀವನದ ಎಲ್ಲಾ ರಂಗಗಳಲ್ಲೂ ಸಲ್ಲುವವರಾಗಿದ್ದರು, ಅಲ್ಲೆ, ಇಲ್ಲೆ, ಎಲ್ಲೆಲ್ಲೂ ಸಲ್ಲುವವರಾಗಿದ್ದಾರೆ. ಅವರ ಸೇವೆ ಇನ್ನಷ್ಟು ಕಾಲ ಜನರಿಗೆ ದೊರಕುವಂತಾಗಲಿ ಎಂಬ ಹಾರೈಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರದ್ದು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ