ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಡಿ.16ರಂದು ಶನಿವಾರ ನಡೆಯುವ ಡಾ. ಏರ್ಯ ಸಾಹಿತ್ಯ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಗುರುವಾರ ಸಂಜೆ ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ನ ಸಾಹಿತ್ಯ ಸಂಭ್ರಮ ಕಾರ್ಯಾಲಯದಲ್ಲಿ ನಡೆಯಿತು.
ನೋಟರಿ ಮತ್ತು ವಕೀಲ ಅಶ್ವನಿ ಕುಮಾರ್ ರೈ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಹಿರಿಯ ಸಾಹಿತಿ ಡಾ. ಏರ್ಯ ಯುವ ಪೀಳಿಗೆಯೊಂದಿಗೂ ಬೆರೆಯುವವರು. ಅವರಲ್ಲಿ ಹೊಸತನದ ಚಿಂತನೆಯನ್ನು ಸ್ವೀಕರಿಸುವ ಮನೋಸ್ಥಿತಿ ಇದೆ. ಇದನ್ನು ಅವರ ಸಾಹಿತ್ಯಗಳಲ್ಲೂ ಕಾಣಬಹುದಾಗಿದೆ, ಆ ಕಾರಣಕ್ಕಾಗಿಯೇ ಅವರಿಂದ ಉನ್ನತವಾದ ಸಾಹಿತ್ಯಗಳು ರಚನೆಯಾಗಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಗತಿಪರ ಕೃಷಿಕ ರಾಜೇಶ್‌ನಾಯಕ್ ಉಳಿಪಾಡಿಗುತ್ತು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಅವರ ಸಾಹಿತ್ಯಗಳನ್ನು ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯ ಎಂದರು.
ಸಮಿತಿ ಅಧ್ಯಕ್ಷ ಕೆ. ಮೋಹನ ರಾವ್, ಸಂಚಾಲಕ ವಿಶ್ವನಾಥ್ ಬಂಟ್ವಾಳ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕರಾಮ ಪೂಜಾರಿ, ಪುರಸಭಾ ಸದಸ್ಯ ಜಗದೀಶ ಕುಂದರ್, ಸಾಹಿತಿ, ಪ್ರಾಧ್ಯಾಪಕ ಡಿ.ಬಿ.ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು. ಹಿರಿಯ ಕಲಾವಿದ ಮಂಜು ವಿಟ್ಲ ಸ್ವಾಗತಿಸಿದರು, ಸಮಿತಿ ಕಾರ್ಯದರ್ಶಿ ಫಾರೂಕ್ ಬಂಟ್ವಾಳ ವಂದಿಸಿದರು, ಸಾಹಿತಿ, ಪ್ರಾಧ್ಯಾಪಕ ವಿ.ಸು.ಭಟ್ ಕಾರ್ಯಕ್ರಮ ನಿರೂಪಿಸಿದರು.