ತಾಲೂಕು ಪಂಚಾಯತ್ ಆರ್.ಟಿ.ಸಿ. ಹಿಂದೆ ಅಧ್ಯಕ್ಷರ ಹೆಸರಿನಲ್ಲಿತ್ತು. ಅದನ್ನು ಕಾರ್ಯನಿರ್ವಹಣಾಧಿಕಾರಿ ಹೆಸರಲ್ಲಿ ಮಾಡಬೇಕು ಎಂಬ ಅರ್ಜಿ ಕೊಟ್ಟು ಐದಾರು ತಿಂಗಳಾಯಿತು. ಇದುವರೆಗೂ ಆಗಿಲ್ಲ ಏನಾಯಿತು?
ಹೀಗೆಂದು ಕಂದಾಯ ಇಲಾಖೆಯ ಅಧಿಕಾರಿಯನ್ನು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಂದಾ ಪ್ರಶ್ನಿಸಿದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪಂಚಾಯತ್ ನ ಪ್ರಗತಿ ಪರಿಶಿಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಪಂಗೆ ಮಂಜೂರಾದ ಸ್ಥಳಗಳ ಕುರಿತ ಆರ್.ಟಿ.ಸಿ.ಗಾಗಿ ಅರ್ಜಿ ಸಲ್ಲಿಸಿದ್ದು ಇನ್ನೂ ಬಂದಿಲ್ಲ ಕೊಟ್ಟು ಆರು ತಿಂಗಳಾಯಿತು. ಯಾವ ಹಂತದಲ್ಲಿದೆ ಎಂದು ಕಂದಾಯ ನಿರೀಕ್ಷಕರ ಬಳಿ ಕೇಳಿದಾಗ ಪರಿಶಿಲಿಸುವುದಾಗಿ ಕಂದಾಯ ಇಲಾಖೆ ಅಧಿಕಾರಿ ಉತ್ತರಿಸಿದರು.
ಕುಡಿಯುವ ನೀರಿನ ವಿತರಣೆಗೆ ಸಂಬಂಧಿಸಿ ಇರುವ ಪಂಪ್ ಸೆಟ್ ಗಳಿಗೆ ತಾತ್ಕಾಲಿಕ ಕನೆಕ್ಷನ್ ಅನ್ನು ಐದು ಗ್ರಾಪಂಗಳು ತೆಗೆದುಕೊಂಡಿದ್ದು, ಇನ್ನೂ ಸ್ಥಿರಗೊಳಿಸಿಲ್ಲ. ಆದರೆ ಬಿಲ್ ಕಟ್ಟಿಲ್ಲ ಎಂದು ಡಿಸ್ ಕನೆಕ್ಟ್ ಮಾಡಬೇಡಿ ಎಂದು ಮೆಸ್ಕಾಂ ಅಧಿಕಾರಿಗಳಿಗೆ ಇಒ ಸೂಚಿಸಿದರು. ಅಂಗನವಾಡಿಗಳಿಗೆ ತಿಂಗಳ ಬಿಲ್ ಅನ್ನು ಆಯ ತಿಂಗಳೇ ನೀಡಿ ಎಂದು ಹೇಳಿದ ಅವರು ಈ ಕುರಿತು ದೂರುಗಳು ಬಾರದಂತೆ ಗಮನಹರಿಸಲು ಸೂಚಿಸಿದರು.
ಕೊಡ್ಮಣ್, ಫರಂಗಿಪೇಟೆ, ಮೇರೆಮಜಲುಗಳಲ್ಲಿ ಪಡಿತರ ವಿತರಣೆಗೆ ಸಂಬಂಧಿಸಿ ಇಂಟರ್ ನೆಟ್ ಸಮಸ್ಯೆ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಈ ಸಂದರ್ಭ ನಾನಾ ಇಲಾಖಾಧಿಕಾರಿಗಳು ತಮ್ಮ ವಿಭಾಗಗಳ ಕುರಿತ ವರದಿ ಮಂಡಿಸಿದರು. ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ ಸಹಿತ ನಾನಾ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.