ಭಾಷಾವಾರು ಪ್ರಾಂತ್ಯ ವಿಂಗಡನೆಯ ಸಂದರ್ಭದಲ್ಲಿ ಕೇರಳ ರಾಜ್ಯದ ಭಾಗವಾಗಿ ಹೋದ ಕಾಸರಗೋಡು ಜಿಲ್ಲೆಯ ಹಲವಾರು ಧಾರ್ಮಿಕ ಆಚರಣೆಗಳು ದಕ್ಷಿಣ ಕನ್ನಡ ಜಿಲ್ಲೆಯ ಆಚರಣೆಗೆ ಸಾಮ್ಯತೆಯನ್ನು ಹೊಂದಿವೆ. ಕಾಸರಗೋಡು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ಆರಾಧಾನಾ ಸಂಪ್ರದಾಯ ತೆಯ್ಯಂ. ಇದು ನಮ್ಮಲ್ಲಿ ಪ್ರಚಲಿತದಲ್ಲಿರುವ ದೈವರಾಧನೆಯನ್ನು ಹೋಲುವ ಕಲಾರೂಪ. ತುಳುನಾಡಿನ ದೈವಗಳಿಗೆ ಪಾಡ್ದನವಿದ್ದರೆ ಇಲ್ಲಿ ’ತೋಟ್ಟಂ’ ಎಂಬ ಪ್ರಕಾರವಿದೆ.
ಕಾಞಂಗಾಡ್ ಕಾಸರಗೋಡು ಜಿಲ್ಲಾ ಕೇಂದ್ರದಿಂದ 28 ಕಿ.ಮೀ. ದೂರದಲ್ಲಿದೆ. ಮಲಯಾಳಂ ಮಾತೃ ಭಾಷೆಯ ನೆಲವಾದರೂ ಇಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬಗಳು ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದು ತುಳು, ಕೊಂಕಣಿ ಹಾಗೂ ಕನ್ನಡ ಭಾಷೆಗಳನ್ನಾಡುವವರು ಕಾಣಸಿಗುತ್ತಾರೆ. ನಿತ್ಯಾನಂದ ಸ್ವಾಮಿ ಧ್ಯಾನಸ್ಥರಾಗಿದ್ದ ಗುಹೆಗಳು, ಹೊಸದರ್ಗ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆ.
ಕಾಞಂಗಾಡ್ ಪೇಟೆಯ ಹೊರವಲಯದಲ್ಲಿರುವ ’ಅರೆಯಿ’ ಎಂಬ ಪ್ರಶೇದವು ಭತ್ತ, ತೆಂಗು ಹಾಗೂ ಬಾಳೆಯ ಬೆಳೆಗೆ ಪ್ರಸಿದ್ಧವಾಗಿದೆ. ಅರೆಯಿ ಸಮೀಪದ ಕಾರ್ತಿಕ ಎಂಬಲ್ಲಿ ಪ್ರತೀವರ್ಷ ನಡೆಯುವ ’ತೈಯಂ’ ರಾಜ್ಯದಲ್ಲೇ ವಿಶಿಷ್ಠತೆಯಿಂದ ಕೂಡಿದೆ. ಇಲ್ಲಿ ಆರಾಧನೆಗೊಂಡ ದೈವಗಳು ನದಿಯನ್ನು ದೋಣಿಯ ಮೂಲಕ ದಾಟಿ ’ಅರೆಯಿ’ ಯಲ್ಲಿರುವ ದೈವವನ್ನು ಭೇಟಿ ಮಾಡುವ ಸಂಪ್ರದಾಯವೇ ಇದಕ್ಕೆ ಕಾರಣ.
ಸಾಮಾನ್ಯವಾಗಿ ವೀರರ ಆರಾಧನೆಯ ಪ್ರತೀಕವಾಗಿ ರೂಪು ಪಡೆಯುವ ’ತೆಯ್ಯಂ’ ಈ ಪ್ರದೇಶದಲ್ಲೂ ಇದೇ ಹಿನ್ನಲೆಯನ್ನು ಹೊಂದಿದೆ ಎಂದು ಕ್ಷೇತ್ರದ ಮುಖ್ಯ ಸ್ಥರಾದ ಕುಂಞಿ ಕೃಷ್ಣನ್ ಅಭಿಪ್ರಾಯ ಪಡುತ್ತಾರೆ. ಭತ್ತವನ್ನೇ ಪ್ರಧಾನ ಬೆಳೆಯನ್ನಾಗಿ ಬೆಳೆಯುತ್ತಿದ್ದ ಇಲ್ಲಿನ ರೈತರಿಗೆ ಪ್ರತೀ ವರ್ಷ ನೆರೆನೀರು ನುಗ್ಗಿ ಬೆಳೆಹಾನಿ ಸಂಭವಿಸುತ್ತಿದ್ದ ಸಂದರ್ಭ ರೈತರ ರಕ್ಷಣೆಗಾಗಿ ದೈವವು ಇಲ್ಲಿ ನೆಲೆಯಾಯಿತು ಎಂಬುದು ನಂಬಿಕೆ. ಹೊಳೆಯ ಆಚೆ ದಡದಲ್ಲಿರುವ ಅರಸರಲ್ಲಿ ಪ್ರಜೆಗಳು ತಮ್ಮ ಕಷ್ಟಗಳನ್ನು ನೇರವಾಗಿ ಹೇಳಿಕೊಳ್ಳಲಾಗದ ಸಂದರ್ಭದಲ್ಲಿ ಅರಮನೆಯ ದೈವಗಳ ಜತೆ ಇಲ್ಲಿನ ದೈವಗಳ ಭೇಟಿಯ ಸಂದರ್ಭ ಕಷ್ಟ ಸುಖಗಳನ್ನು ಹೇಳಿಕೊಳ್ಳವ ಸಂಪ್ರದಾಯವಿತ್ತು. ಆ ಸಂಬಂಧ ಇಂದೂ ಮುಂದುವರಿದಿದೆ ಎಂದು ಕುಂಞಿಕೃಷ್ಣನ್ ಹೇಳುತ್ತಾರೆ.
ಪ್ರತೀ ವರ್ಷ ತುಲಾ ಮಾಸ 10 ಮತ್ತು 11 ರಂದು ನಡೆಯುವ ಕಳಿಯಾಟ್ಟ ಉತ್ಸವವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತ ಜನರು ಸೇರುತ್ತಾರೆ.