ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದ 2015-16ನೇ ಸಾಲಿನಲ್ಲಿ ರೈತರಿಗೆ ಉಚಿತ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ಯೋಜನೆಯಾದ ಗಂಗಾಕಲ್ಯಾಣ ಯೋಜನೆಯಡಿ 70 ಸಾವಿರ ರೂಗೆ ಮೇಲ್ಪಟ್ಟ ವೆಚ್ಚದಲ್ಲಿ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ಪಂಪ್ ಮೋಟಾರ್ ವಿತರಣೆಯನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಜನೆಯ ಪರಿಕರ ಸಾಮಾಗ್ರಿಗಳನ್ನು ಒಂದು ಕಡೆ ಸೇರಿಸಿ ನೇರವಾಗಿ ರೈತರಿಗೆ ನೀಡಿರುವುದು, ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸಿರುವುದು ಶ್ಲಾಘನೀಯವಾಗಿದೆ. ಸರ್ಕಾರ ನೀಡಿದ ಸೌಲಭ್ಯವನ್ನು ರೈತರು ಸಮರ್ಪಕವಾಗಿ ಕೃಷಿಗೆ ಬಳಸಿ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕೆಂದು ಹೇಳಿದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್ ನಿಗಮದ ಯೋಜನೆಯ ಮಾಹಿತಿ ನೀಡಿ ಹಾಗೂ ಹೊಸ ಯೋಜನೆಯ ಸದುಪಯೋಗ ಪಡೆಯಲು ಜನರಿಗೆ ಕರೆ ನೀಡಿದರು.
ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಸದಾಶಿವ ಬಂಗೇರ, ಬಂಟ್ವಾಳ ತಾಲೂಕು ಎ.ಪಿ.ಎಂ.ಸಿ. ಅಧ್ಯಕ್ಷರಾದ ಪದ್ಮನಾಭ ರೈ, ಈ ಸಂದರ್ಭದಲ್ಲಿ ಹಾಜರಿದ್ದರು. ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿ ವಂದಿಸಿದರು.