ಮೇರೆ ಪಾಸ್ ಮಾ ಹೇ
ಬಾಲಿವುಡ್ ನ ಜಗತ್ಪ್ರಸಿದ್ಧ ಡೈಲಾಗ್ ಇದು.
ದೀವಾರ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆ ಸರಿಸಮನಾಗಿ ನಟಿಸಿದ ಗುಳಿಕೆನ್ನೆಯ ಹೀರೊ ಶಶಿಕಪೂರ್ ಈ ಡೈಲಾಗ್ ಮೂಲಕ ಬಿಗ್ ಬಿ ಜೊತೆ ಫೇಮಸ್ ಆದರು. ಅಮಿತಾಭ್ ಮತ್ತು ಶಶಿಕಪೂರ್ ಅಣ್ಣ, ತಮ್ಮ ಪಾತ್ರದಲ್ಲಿದ್ದರೆ ಸಿನಿಮಾ ಸೂಪರ್ ಹಿಟ್ ಎಂಬಲ್ಲಿವರೆಗೆ ಈ ಜೋಡಿ 70ರ ದಶಕದಲ್ಲಿ ಮನೆಮಾತಾಗಿತ್ತು. ಅದರಲ್ಲಿ ರಫ್ ಅಂಡ್ ಟಫ್ ಪಾತ್ರ ಅಮಿತಾಭ್ ಮಾಡುತ್ತಿದ್ದರೆ, ಲವರ್ ಬಾಯ್ ಆಗಿದ್ದ ಶಶಿಕಪೂರ್ ಇನ್ನು ನೆನಪು ಮಾತ್ರ.
ಶೋಮ್ಯಾನ್ ರಾಜ್ ಕಪೂರ್ ಸಹೋದರ, ಪದ್ಮಭೂಷಣ, ಫಾಲ್ಕೆ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ಹಿರಿಯ ನಟ, ನಿರ್ಮಾಪಕ ಶಶಿ ಕಪೂರ್ (79) ಮೂಲ ಹೆಸರು ಬಲ್ಬೀರ್ ಪ್ರಥ್ವಿರಾಜ್ ಕಪೂರ್ . ಸೋಮವಾರ (ಡಿ.4) ಅವರು ವಿಧಿವಶರಾಗಿದ್ದಾರೆ. ದೀರ್ಘಕಾಲದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. 2011ರಲ್ಲಿ ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಾರ್ಚ್ 18, 1938ರಲ್ಲಿ ಕಲ್ಕತ್ತಾದಲ್ಲಿ ಜನನ. ಶಶಿಕಪೂರ್ ತಮ್ಮ ಬಾಲ್ಯದ ದಿನಗಳಲ್ಲೇ ನಟನೆಯಲ್ಲಿ ತೊಡಗಿಸಿಕೊಂಡಿದ್ದು, 1940ರಲ್ಲಿ ಹಲವಾರು ಪೌರಾಣಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 1948ರಲ್ಲಿ ಬಂದ ಆಗ್ ಮತ್ತು 1951ರಲ್ಲಿ ಬಂದ ಆವಾರಾ ಸಿನಿಮಾಗಳು ನಟನಾ ಕೌಶಲ್ಯವನ್ನು ಸಾಬೀತುಪಡಿಸಿತು. ಇವರು ತಮ್ಮ ಹಿರಿಯ ಸಹೋದರ ರಾಜ್ ಕಪೂರ್ ಜತೆ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.ಸಿನಿಮಾ ಕ್ಷೇತ್ರದಲ್ಲಿ ಇವರು ಪ್ರಥಮವಾಗಿ ಪ್ರವೇಶ ಪಡೆದ ಸಂದರ್ಭಉನ್ನತವಾಗಿ ಬೆಳೆಯಲು 1961ರಲ್ಲಿ ಯಶ್ ಚೋಪ್ರಾ ನಿರ್ಮಾಣದ ಧರ್ಮಪುತ್ರ ಸಹಾಯಕವಾಯಿತು. 1960, 1970 ವರೆಗೆ ಹಾಗೂ 1980ರ ಒಳಗೆ ಇವರು ಬಾಲಿವುಡ್ ಕ್ಷೇತ್ರದಲ್ಲಿ ಬಹು ಪ್ರಖ್ಯಾತ ನಗುಮುಖದ ನಟರಾಗಿ ಹೆಸರುವಾಸಿಯಾಗಿದ್ದರು.
ವಕ್ತ್ , ಜಬ್ ಜಬ್ ಫೂಲ್ ಕಿಲೆ , ಕನ್ಯಾದಾನ್ , ಹಸೀನಾ ಮಾನ್ ಜಾಯೇಗಿ , ಆ ಗಲೆ ಲಾಗ್ ಜಾ , ರೋಟಿ ಕಪಡಾ ಔರ್ ಮಕಾನ್ , ಚೋರ್ ಮಾಚೆಯೇ ಶೋರ್ , ದೀವಾರ್ , ಕಭಿ ಕಭೀ , ಫಕೀರಾ , ತ್ರಿಶೂಲ್ , ಸತ್ಯಮ್ ಶಿವಂ ಸುಂದರಂ , ಕಾಲಾ ಪತ್ತಾರ್ , ಸುಹಾಗ್ , ಶಾನ್ , ಕಂತ್ರಿ ಮತ್ತು ನಮಕ್ ಹಲಾಲ್ ಇವರ ಜನಪ್ರಿಯ ಸಿನಿಮಾಗಳಾಗಿವೆ. ಬ್ರಿಟಿಷ್ ಹಾಗೂ ಅಮೆರಿಕಾ ಸಿನಿಮಾಗಳಲ್ಲೂ ನಟಿಸಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದಾರೆ. ಮರ್ಚೆಂಟ್ ಐವರಿ ಪ್ರೊಡಕ್ಷನ್ಸ್ ನಿರ್ಮಾಣದ ಶೇಕ್ಸ್‌ಪಿಯರ್ ವಲ್ಲಾಹ್ ಚಿತ್ರದಲ್ಲಿ ಇವರ ಅತ್ತಿಗೆ ಫೆಲ್ಸಿಟಿ ಕೆಂಡಾಲ್ ಎದುರಿಗೆ ನಟಿಸಿದ್ದರು.ಬಾಂಬೆ ಟಾಕಿ ಮತ್ತು ಹೀಟ್ ಆಂಡ್ ಡಸ್ಟ್ ಇದರಲ್ಲಿ ಇವರು ಪತ್ನಿಯಾದ ಜೆನ್ನಿಫರ್ ಕೆಂಡಾಲ್ ಜತೆ ನಟಿಸಿದ್ದರು. ಇವರು ಬ್ರಿಟಿಷ್ ಮತ್ತು ಅಮೆರಿಕಾ ಸಿನಿಮಾಗಳಲ್ಲಿ ನಟಿಸಿದ್ದು, ಅವುಗಳಾದ ಪ್ರೆಟ್ಟಿ ಪೊಲ್ಲಿ ಚಿತ್ರದಲ್ಲಿ ಹಾಯ್ಲೇ ಮಿಲ್ಸ್ ಜೊತೆಗೆ ನಟಿಸಿದ್ದರು. ಸಿದ್ಧಾರ್ಥ ಮತ್ತು ಸ್ಯಾಮ್ಮಿ ಆಂಡ್ ರೋಸಿ ಗೆಟ್ ಲೈಯ್ಡ್ ) ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.1980ರಲ್ಲಿ ಇವರು ತಮ್ಮ ಸ್ವಂತ ಸಿನಿಮಾ ನಿರ್ಮಾಣವನ್ನು ವಾಲಾಸ್ ಸಿನಿಮಾ ಮೂಲಕ ಆರಂಭಿಸಿದರು. ಇವರು ತಯಾರಿಸಿದ ಜುನೂನ್ , ಕಲಿಯುಗ್ , 36 ಚೌರಿಂಗೀ ಲೇನ್ , ವಿಜೇತಾ ಮತ್ತು ಉತ್ಸವ್ ಸಿನಿಮಾಗಳು ವಿಮರ್ಷಕರಿಂದಲೂ ಸಾಕಷ್ಟು ಪ್ರಶಂಸೆಗೆ ಪಾತ್ರವಾಯಿತು.ಕೊನೆಯ ಹಾಗೂ ಇತ್ತೀಚಿನ ಜೀವನಚಿತ್ರವಾದ ಜಿನ್ಹಾ (1998)ದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಮಹಮ್ಮದ್ ಅಲಿ ಜಿನ್ಹಾ ಪಾತ್ರದಲ್ಲಿ ನಟಿಸಿದ್ದು, ನಿರೂಪಕರಾಗಿದ್ದರು. ಮತ್ತು ಮರ್ಚೆಂಟ್ ಐವರಿ ಪ್ರೊಡಕ್ಷನ್ ನವರ ಸೈಡ್ ಸ್ಟ್ರೀಟ್ಸ್ (1998)ದಲ್ಲೂ ನಟಿಸಿದ್ದಾರೆ.
ಶಶಿ ಕಪೂರ್ ತಂದೆ ಪೃಥ್ವಿರಾಜ್ ಕಪೂರ್. ರಾಜ್ ಕಪೂರ್ ಹಾಗೂ ಶಮ್ಮಿ ಕಪೂರ್ ಕಿರಿಯ ಸಹೋದರರು. ಇವರ ಪತ್ನಿ ಜೆನ್ನಿಫರ್ ಕೆಂಡಲ್ ಮೃತಪಟ್ಟಿದ್ದಾರೆ. ಕರಣ್ ಕಪೂರ್, ಕುನಾಲ್ ಕಪೂರ್ ಹಾಗೂ ಸಂಜನಾ ಕಪೂರ್ ಎಂಬ ಮಕ್ಕಳಿದ್ದಾರೆ. ಅಮಿತಾಬ್ ಬಚ್ಚನ್ ಜತೆಗೆ ದೀವಾರ್, ದೋ ಔರ್ ದೋ ಪಾಂಚ್ ಮತ್ತು ನಮಕ್ ಹಲಾಲ್ ಚಿತ್ರಗಳಲ್ಲಿ ಶಶಿ ಕಪೂರ್ ನಟಿಸಿದ್ದಾರೆ. 2014ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, 1986ರಲ್ಲಿ ಹೊಸದಿಲ್ಲಿ ಟೈಮ್ಸ್‌ನ ಉತ್ತಮ ನಟನೆಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯನ್ನು ಪಡೆದಿದ್ದಾರೆ. ದೀವಾರ್, ಜನೂನ್, ಕಲಿಯುಗ್ ಚಿತ್ರಗಲು ಫಿಲಂಫೇರ್ ಪ್ರಶಸ್ತಿಗೆ ಭಾಜನವಾಗಿವೆ.