ಕಲ್ಲಡ್ಕ

ನಗರಸಭೆಯಾಗಲು ಹಳ್ಳಿಗಳ ಸೇರ್ಪಡೆ: ಅಮ್ಟೂರು ಗ್ರಾಮಸ್ಥರ ವಿರೋಧ

www.bantwalnews.com ವರದಿ

ಜಾಹೀರಾತು

ನಗರಸಭೆಯಾಗಲು ಹೊರಟಿರುವ ಬಂಟ್ವಾಳ ಪುರಸಭೆಗೆ ತಾಗಿಕೊಂಡಿರುವ ಗ್ರಾಮ ಪಂಚಾಯತ್ ಗಳ ಆಂಶಿಕ ಭಾಗವನ್ನು ಪುರಸಭೆಗೆ ಸೇರ್ಪಡೆಗೊಳಿಸುವ ವಿಚಾರಕ್ಕೆ ಈಗಾಗಲೇ ಹಲವು ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಇದೀಗ ಗೋಳ್ತಮಜಲು ಗ್ರಾಮ ಪಂಚಾಯತ್ ಕೂಡ ವಿರೋಧ ವ್ಯಕ್ತಪಡಿಸಿದೆ. ಪಂಚಾಯತ್ ನ ಭಾಗವನ್ನು ಪುರಸಭೆಗೆ ಸೇರ್ಪಡೆಗೊಳಿಸುವುದಕ್ಕೆ ಆಕ್ಷೇಪವನ್ನೂ ಸಲ್ಲಿಸಿದೆ. ಆದರೂ ಮತ್ತೆ ಅಮ್ಟೂರು ಮತ್ತಿತರ ಪ್ರದೇಶಗಳನ್ನು ಪುರಸಭೆಗೆ ಸೇರ್ಪಡೆಗೊಳಿಸುವ ಕುರಿತು ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಲಾಗಿದೆ.

ಈ ಕುರಿತು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ನೇತೃತ್ವದಲ್ಲಿ ಗ್ರಾಪಂ ಸದಸ್ಯರಾದ ಗುರುವಪ್ಪ ಗೌಡ ಮತ್ತು ಮೋನಪ್ಪ ದೇವಸ್ಯ ಒಳಗೊಂಡ ತಂಡ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಅವರಿಗೆ ಮನವಿ ಸಲ್ಲಿಸಿತು.

ಯಾಕೆ ವಿರೋಧ:

ಈಗಿರುವ ಪುರಸಭಾ ವ್ಯಾಪ್ತಿಯನ್ನೇ ಸರಿಯಾಗಿ ನಿರ್ವಹಿಸಲು ಕಷ್ಟಸಾಧ್ಯವಾಗುತ್ತಿರುವ ಪೌರಾಡಳಿತಕ್ಕೆ ತಾಗಿಕೊಂಡಿರುವ ಗ್ರಾಮಗಳನ್ನು ಸೇರ್ಪಡೆಗೊಳಿಸಿ, ನಗರಸಭೆಯನ್ನಾಗಿಸುವ ಅವಶ್ಯಕತೆ ಏನಿದೆ ಎಂದು ದಿನೇಶ್ ಅಮ್ಟೂರು ಪ್ರಶ್ನಿಸಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ವಾಸಿಸುವವರ ಆದಾಯ ನಗರವಾಸಿಗಳಿಗೆ ಹೋಲಿಸಿದರೆ ಕಡಿಮೆ. ಅಮ್ಟೂರು ಪರಿಸರದಲ್ಲಿರುವವರಲ್ಲಿ ಬಹುತೇಕ ಮಂದಿ ಬಡವರಾಗಿದ್ದು, ದೈನಂದಿನ ಆದಾಯವನ್ನು ಕಷ್ಟಪಟ್ಟು ದುಡಿಯುತ್ತಿದ್ದಾರೆ. ಹೀಗಿದ್ದಾಗ ಬಂಟ್ವಾಳದ ಪ್ರಸ್ತಾವಿತ ನಗರಸಭೆಗೆ ಅಮ್ಟೂರು ಪರಿಸರವನ್ನು ಸೇರಿಸಿದರೆ, ನಗರಾಡಳಿತಕ್ಕೆ ಸಂಬಂಧಿಸಿ ತೆರಿಗೆಗಳ ಭಾರವನ್ನು ಹೊರಬೇಕಾಗುತ್ತದೆ. ಈಗಾಗಲೇ ಸಂಕಷ್ಟದಲ್ಲಿರುವ ನಾಗರಿಕರಿಗೆ ಇದೊಂದು ದೊಡ್ಡ ಹೊರೆಯಾಗಲಿದ್ದು, ಗ್ರಾಮ ಪಂಚಾಯತ್ ಆಡಳಿತಕ್ಕೂ ಅನುದಾನವನ್ನು ತರಿಸಲು ಹಾಗೂ ಅಭಿವೃದ್ಧಿಪಡಿಸಲು ಸಾಧ್ಯವಿದೆ. ಅದಕ್ಕೆ ನಗರಸಭೆಯೊಳಗೇ ಇರಬೇಕು ಎಂದೇನಿಲ್ಲ ಎಂಬುದು ಸ್ಥಳೀಯರ ಆಕ್ಷೇಪ.

ಈಗ ಬಂಟ್ವಾಳ ಹೇಗಿದೆ?

ಕಸ ವಿಲೇವಾರಿ ಸಹಿತ ಹಲವು ಸವಾಲುಗಳನ್ನು ನಿರ್ವಹಿಸುವುದೇ ಈಗಿನ ಪುರಸಭೆಗೆ ದೊಡ್ಡ ಸವಾಲಾಗಿದೆ. ಮನಸ್ಸು ಮಾಡಿದರೆ ಪುರಸಭೆಗೆ ಕೆಲಸ ನಿರ್ವಹಿಸಲು ಸಾಕಷ್ಟು ಸಿಬ್ಬಂದಿಯನ್ನು ಒದಗಿಸಬಹುದು. ಅದೇ ಸಾಧ್ಯವಾಗುತ್ತಿಲ್ಲ ಎಂದಾದ ಮೇಲೆ ಹೊರಭಾಗಗಳನ್ನು ಸೇರಿಸಿ, ಅತ್ತ ಪೇಟೆಯೂ ಉದ್ಧಾರವಾಗದೆ, ಇತ್ತ ಹಳ್ಳಿಗಳೂ ಅಭಿವೃದ್ಧಿ ಕಾಣದೆ ತ್ರಿಶಂಕು ಸ್ಥಿತಿಗೆ ತಲುಪುವ ಸಾಧ್ಯತೆ ಇದೆ ಎಂಬ ದೂರು ಸಾರ್ವಜನಿಕರದ್ದು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.