ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿನ ಗ್ರಾಮ ಸಭೆ ಕೋರಂ ಸಮಸ್ಯೆ ಹಾಗೂ ಗ್ರಾಮಸ್ಥರ ಆಕ್ಷೇಪದ ಹಿನ್ನೆಲೆಯಲ್ಲಿ ರದ್ದುಗೊಂಡ ಘಟನೆ ನಡೆದಿದೆ.
ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿನ ಎರಡನೇ ಹಂತದ ಗ್ರಾಮ ಸಭೆಯನ್ನು ಕುಂಡಡ್ಕದಲ್ಲಿರುವ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಆದರೆ ಬೆರಳೆಣಿಯಷ್ಟು ಮಾತ್ರ ಗ್ರಾಮಸ್ಥರು ಸಭೆಯಲ್ಲಿ ಕಾಣಿಸಿದೆ. ಗ್ರಾಮ ಸಭೆ ಪ್ರಾರಂಭಗೊಳ್ಳುತ್ತಿದ್ದಂತೆ ಗ್ರಾಮಸ್ಥರು ಕೋರಂ ಇಲ್ಲದೇ ಗ್ರಾಮ ಸಭೆ ನಡೆಸಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭ ಮಾತನಾಡಿದ ಗ್ರಾಮಸ್ಥರಾದ ಎಲ್ಯಣ್ಣ ಪೂಜಾರಿ ಅವರು ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯೆ ಚುನಾವಣೆ ನಡೆದ ಬಳಿಕ ಈ ಭಾಗಕ್ಕೆ ಕಾಲಿಟ್ಟಿಲ್ಲ. ರಸ್ತೆ ಅಭಿವೃದ್ಧಿಗೂ ಅವರು ಅನುದಾನ ಕೂಡ ಬಿಡುಗಡೆ ಮಾಡಿಲ್ಲ. ಗ್ರಾಮ ಸಭೆಗೂ ಅವರು ಇದುವರೆಗೂ ಹಾಜರಾಗಿಲ್ಲ ಎಂದು ಹೇಳಿದರು. ಈ ಗ್ರಾಮದಲ್ಲಿ ಇದುವರೆಗೂ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಗ್ರಾಮ ಸಭೆಯನ್ನು ಬಹಿಷ್ಕಾರಿಸಿದ್ದಾರೆ ಎಂದು ತಿಳಿಸಿದರು.
ನೋಡಾಲಾಧಿಕಾರಿಯಾಗಿ ಭಾಗವಹಿಸಿದ್ದ ದಯಾವತಿ ಅವರು ಮಾತನಾಡಿ ಆರು ತಿಂಗಳಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಹಾಗೂ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸುವ ಗ್ರಾಮ ಸಭೆ ನಡೆಸಲು ಅವಕಾಶ ಕೊಡಿ ಎಂದು ವಿನಂತಿಸಿದ್ದರೂ ಗ್ರಾಮಸ್ಥರು ಮಾತ್ರ ತಮ್ಮ ಪಟ್ಟು ಬಿಡಲಿಲ್ಲ. ಬಳಿಕ ಸಭೆಯಲ್ಲಿ ಕೋರಂ ಕಡಿಮೆ ಇರುವುದರಿಂದ ಗ್ರಾಮಸಭೆಯನ್ನು ಮುಂದೂಡಲಾಗಿದೆ ಎಂದು ಅಧಿಕಾರಿಗಳು ತೀರ್ಮಾನಿಸಿದರು. ಬಳಿಕ ಸೇರಿದ್ದ ಗ್ರಾಮಸ್ಥರ ಸಹಿ ಪಡೆದು ಗ್ರಾಮ ಸಭೆಯನ್ನು ರದ್ದುಪಡಿಸಲಾಯಿತು.
ಈ ಸಂದರ್ಭ ತಾಲ್ಲೂಕು ಪಂಚಾಯಿತಿ ಸದಸ್ಯೆ ವನಜಾಕ್ಷಿ , ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲತಾ, ಉಪಾಧ್ಯಕ್ಷ ದಯಾನಂದ ಶೆಟ್ಟಿ ಅಬೀರಿ, ಅಭಿವೃದ್ಧಿ ಅಧಿಕಾರಿ ಅಬ್ದುಲ್ ಕರೀಂ, ಗ್ರಾಮ ಕರಣಿಕ ಕರಿಬಸಪ್ಪ, ಮೆಸ್ಕಾಂ ಇಲಾಖೆಯ ವಸಂತ, ಎಂಜಿನಿಯರ್ ಅಜಿತ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.