www.bantwalnews.com REPORT
ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಡಿ.16 ರಂದು ನಡೆಯಲಿರುವ ಡಾ. ಏರ್ಯ ಸಾಹಿತ್ಯ ಸಂಭ್ರಮ-2017 ಪ್ರಯುಕ್ತ ಸೋಮವಾರ ಸಂಜೆ ಬಿ.ಸಿ.ರೋಡ್, ಪದ್ಮ ಕಾಂಪ್ಲೆಕ್ಸ್ 1 ನೇ ಮಹಡಿಯಲ್ಲಿ ಕಾರ್ಯಾಲಯವನ್ನು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ.ತುಕಾರಾಮ ಪೂಜಾರಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಬಿ.ಸಿ.ರೋಡ್ ಸಹಿತ ಬಂಟ್ವಾಳ ಪರಿಸರದ ಜನರ ಮನೋಭಾವನೆ ಸಾಹಿತ್ಯ, ಸಾಂಸ್ಕೃತಿಕ ನೆಲೆಯಲ್ಲಿ ಬದಲಾಗಬೇಕಾಗಿದೆ. ನಮ್ಮ ತಾಲೂಕು ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಅದನ್ನು ನೆನಪಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಡಿ.10ರಂದು ನಡೆಯುವ ತುಳು ಸಾಹಿತ್ಯ ಸಮ್ಮೇಳನ ಹಾಗೂ ಡಿ.16ರಂದು ನಡೆಯುವ ಡಾ.ಏರ್ಯ ಸಾಹಿತ್ಯ ಸಂಭ್ರಮ ಮುನ್ನುಡಿಯಾಗಲಿ. ಸಾಹಿತ್ಯದ ವಾತಾವರಣ ತಾಲೂಕಿನಾದ್ಯಂತ ಪಸರಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಮಾತನಾಡಿದ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೈವಿಧ್ಯಗಳನ್ನು ಏರ್ಪಡಿಸುವ ಮೂಲಕ ಜನಸಾಮಾನ್ಯರನ್ನೂ ಸಾಹಿತ್ಯ ಚಟುವಟಿಕೆಯತ್ತ ಆಕರ್ಷಿಸಲು ಸಾಧ್ಯ ಎಂದರು.
ಸಂಘಟಕ ಲೋಕನಾಥ ಶೆಟ್ಟಿ, ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೃಷ್ಣಕುಮಾರ ಪೂಂಜ, ಕಾರ್ಯಕ್ರಮದ ಆಯೋಜಕರಾದ ವಿಶ್ವನಾಥ ಬಂಟ್ವಾಳ, ಬಿ.ತಮ್ಮಯ್ಯ, ಎಚ್. ಸುಂದರ ರಾವ್, ಬಿ.ತಮ್ಮಯ್ಯ, ರಝಾಕ್ ಉಪಸ್ಥಿತರಿದ್ದರು. ಪತ್ರಕರ್ತ ಫಾರೂಕ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯರಾದ ಮಹಾಬಲೇಶ್ವರ ಹೆಬ್ಬಾರ ಕಾರ್ಯಕ್ರಮದ ಆಶಯಗಳನ್ನು ವಿವರಿಸಿದರು. ಕಲಾವಿದ ಮಂಜು ವಿಟ್ಲ ವಂದಿಸಿದರು.