ಸಿನಿಮಾ

ಹಾಸ್ಯದ ರಸಕ್ಕೆ ಪ್ರೇಮಾಯಣದ ಪಾಕ

  • ರಾಕೇಶ್ ಪೂಂಜ

www.bantwalnews.com

ಜಾಹೀರಾತು

ಸಿನಿಮಾವೊಂದಕ್ಕೆ ಕ್ಯಾಟರಿಂಗ್ ಕ್ಷೇತ್ರದ ಕತೆಯಿದ್ದರೆ ಹಾಸ್ಯಕ್ಕೆ ಕೊರತೆ ಇರಲು ಸಾಧ್ಯವಿಲ್ಲ. ಅವುಗಳನ್ನು ಪೋಷಿಸುವ ಪಾತ್ರಗಳಲ್ಲಿ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಸುಂದರ್ ರೈ ಮಂದಾರ, ಸತೀಶ್ ಬಂದಲೆ ಅವರಂಥವರಿದ್ದರೆ ಹಾಸ್ಯದ ಹೊನಲು ಹರಿಯುವುದರಲ್ಲಿ ಅನುಮಾನವೇ ಇಲ್ಲ. ಅಂಬರ್ ಕ್ಯಾಟರರ್‍ಸ್‌ನಲ್ಲಿ ಹಾಸ್ಯಕ್ಕೆ ಕೊರತೆ ಇಲ್ಲ. ತುಂಬಿ ತುಳುಕುವ ಹಾಸ್ಯರಸದ ನಡುವೆ ಒಂದು ಸಸ್ಪೆನ್ಸ್‌ಭರಿತ ಪ್ರೇಮಕತೆಯೂ ಇರುವುದರಿಂದ ವೀಕ್ಷಕರು ಸಿನಿಮಾ ನೋಡಿದ ಮೇಲೆ ಕೊಟ್ಟ ಕಾಸಿಗೆ ಮೋಸವಿಲ್ಲ ಎನ್ನುತ್ತಿರುವುದೇ ಸಿನಿಮಾ ಭರ್ಜರಿ ಯಶಸ್ಸಿನತ್ತ ಸಾಗಲು ಕಾರಣವಾಗಿದೆ.

ಸಾಮಾನ್ಯವಾಗಿ ತುಳು ಸಿನಿಮಾಗಳಲ್ಲಿ ಕಾಣಿಸುವಂತೆ ಇಲ್ಲೂ ಕತೆ ಸರಳವಾಗಿದೆ. ಅಂಬರ್ ಕ್ಯಾಟರರ್‍ಸ್‌ನ ಹಾಸ್ಯ ಝಲಕ್‌ಗಳು ಸಾಗುತ್ತಿರುವಾಗಲೇ ಅಲ್ಲೊಬ್ಬ ಗಾಯಾಳು ಯುವಕ(ಸೌರಭ್ ಭಂಡಾರಿ) ವಾಹನವೊಂದರ ತೆಂಗಿನಕಾಯಿ ರಾಶಿಯಲ್ಲಿ ಕಾಣಿಸಿಗುತ್ತಾನೆ. ಕತೆಗೆ ತಿರುವು ಸಿಗುವುದೇ ಇಲ್ಲಿಂದ. ಆ ಯುವಕ ಯಾರು? ಎಲ್ಲಿಂದ ಬಂದ? ಅವನ ಹಿನ್ನೆಲೆ ಏನು ಎಂದು ತಲೆ ಕೆಡಿಸಿಕೊಳ್ಳುತ್ತಿರುವಾಗಲೇ ಕ್ಯಾಟರಿಂಗ್‌ನ ಸದಸ್ಯರಿಗೆ ಅಚ್ಚರಿಯ ಮೇಲೆ ಅಚ್ಚರಿಗಳು ಕಾಣಸಿಗುತ್ತದೆ. ಒಂದು ಪ್ರೇಮಕತೆಯೂ ಅಲ್ಲಿಂದ ಕವಲೊಡೆಯುತ್ತದೆ. ಅನಿರೀಕ್ಷಿತವಾಗಿ ನಾಯಕಿಯನ್ನು(ಸಿಂಧು ಲೋಕನಾಥ್) ಭೇಟಿಯಾಗುವ ನಾಯಕ, ನಾಟಕೀಯ ಸನ್ನಿವೇಶದಲ್ಲಿ ಆಗುವ ಪರಿಚಯ ಪ್ರೇಮಕ್ಕೆ ತಿರುಗುವಾಗಲೇ ವಿಲನ್‌ಗಳ ಪ್ರವೇಶ. ಅಲ್ಲಿಂದ ಮುಂದೆ ಏನಾಗುತ್ತದೆ ಎನ್ನುವುದನ್ನು ಸಿನಿಮಾ ನೋಡಿಯೇ ಆನಂದಿಸಬೇಕು.

ನಾಗೇಶ್ವರ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ಮಗ ಸೌರಭ್ ಎಸ್. ಭಂಡಾರಿಯನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿರುವುದರಿಂದ ನಿರ್ಮಾಪಕ ತಂದೆ ಕಡಂದಲೆ ಸುರೇಶ್ ಭಂಡಾರಿ ಸಿನಿಮಾಗೆ ದೊಡ್ಡ ಬಂಡವಾಳವನ್ನೇ ತೊಡಗಿಸಿದ್ದು, ಸಿನಿಮಾ ಅದ್ಧೂರಿಯಾಗಿ ಮೂಡಿಬಂದಿದೆ. ಕನ್ನಡ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದರೂ ತಮ್ಮ ಮೊದಲ ಪ್ರಯತ್ನದಲ್ಲೇ ನಿರ್ದೇಶಕ ಜೈ ಪ್ರಸಾದ್ ತುಳು ನೇಟಿವಿಟಿಯನ್ನು ಅನನ್ಯವಾಗಿ ತೆರೆದಿಟ್ಟಿದ್ದಾರೆ.

ತುಳು ಸಿನಿಮಾ ರಂಗಕ್ಕೆ ಸೌರಭ್ ಭಂಡಾರಿ ಅವರ ಮೂಲಕ ಇನ್ನೊಬ್ಬ ಡೈನಾಮಿಕ್ ನಾಯಕನಟನ ಪ್ರವೇಶವಾಗಿದೆ. ಮೂಲತಃ ಕರಾಟೆ ಚಾಂಪಿಯನ್ ಆಗಿರುವ ಸೌರಭ್ ಅವರು ನಟನೆ, ಡ್ಯಾನ್ಸ್, ಫೈಟಿಂಗ್ ದೃಶ್ಯಗಳಲ್ಲಿ ಮಿಂಚಿದ್ದು, ಅವರ ಪರಿಶ್ರಮ ಎದ್ದು ಕಾಣಿಸುತ್ತಿದೆ. ನಾಯಕ ನಟಿ ಸಿಂಧೂ ಲೋಕನಾಥ್ ನಟನೆ ಪರವಾಗಿಲ್ಲ. ವಿಲನ್ ಪಾತ್ರದಲ್ಲಿ ಯುವ ನಟ ಶ್ರೇಯಲ್ ಶೆಟ್ಟಿ ಭರವಸೆ ಮೂಡಿಸುತ್ತಾರೆ. ತುಳುನಾಡಿನ ಅಗ್ರ ನಟರಾದ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಸುಂದರ್ ರೈ ಮಂದಾರ, ಸತೀಶ್ ಬಂದಲೆ ಎಂದಿನಂತೆ ಹಾಸ್ಯದ ಹೊನಲನ್ನೇ ಹರಿಸುತ್ತಾರೆ. ಕನ್ನಡದಿಂದ ಆಮದಾಗಿರುವ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ, ಬ್ಯಾಂಕ್ ಜನಾರ್ದನ್ ಮತ್ತಿತರರು ಕೊಟ್ಟ ಪಾತ್ರಗಳಿಗೆ ಅದ್ಭುತವಾಗಿ ಜೀವ ತುಂಬಿದ್ದಾರೆ.

ಸಿನಿಮಾದ ಛಾಯಾಗ್ರಹಣವೇ ಜೀವಾಳ. ಉಳ್ಳಾಲ ಸೇತುವೆ ಪರಿಸರವನ್ನು ತೋರಿಸಿರುವ ಪರಿ ಅನನ್ಯ. ತುಳುನಾಡಿನ ಸ್ಥಳಗಳು ಇಷ್ಟೊಂದು ರಮಣೀಯವಾಗಿದೆ ಎನ್ನುವುದನ್ನು ತಮ್ಮ ಕೈಚಳಕದಲ್ಲಿ ತೋರಿಸಿರುವ ತಮಿಳು, ತೆಲುಗು, ಕನ್ನಡದ ಖ್ಯಾತ ಕ್ಯಾಮೆರಾಮನ್ ಸಂತೋಷ್ ರೈ ಪಾತಾಜೆಯವರಿಗೆ ಥ್ಯಾಂಕ್ಸ್ ಹೇಳಲೇಬೇಕು. ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತ ಪ್ಲಸ್ ಪಾಯಿಂಟ್. ನಾಲ್ಕು ಹಾಡುಗಳ ನಡುವೆ ಎರಡು ಮತ್ತೆ ಮತ್ತೆ ಗುನುಗುವಂತಿವೆ. ಎಡಿಟಿಂಗ್ ಸಿನಿಮಾದ ವೇಗಕ್ಕೆ ಪೂರಕವಾಗಿದೆ.

ತುಳುವಿನಲ್ಲಿ ಉತ್ತಮ ಸಿನಿಮಾಗಳು ಬಂದಾಗ ತುಳುನಾಡಿನ ಪ್ರೇಕ್ಷಕರು ಕೈಬಿಟ್ಟಿದ್ದಿಲ್ಲ ಎನ್ನುವ ಸಿನಿ ರಂಗದವರ ಮಾತಿನಂತೆ ಸಿನಿಮಾವೀಗ ಭರ್ಜರಿ ಪ್ರದರ್ಶನದೊಂದಿಗೆ ಯಶಸ್ಸಿನೆಡೆಗೆ ಸಾಗುತ್ತಿದೆ. ಅಂಬರ್ ಕ್ಯಾಟರರ್‍ಸ್ ತುಳು ಸಿನಿಮಾ ಒಂದು ವಾರ ತುಂಬಿದ ಗೃಹದಿಂದ ಪ್ರದರ್ಶನಗೊಳ್ಳುತ್ತಿರುವುದರಿಂದ ನಿರ್ಮಾಪಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ನೀವು ನೋಡಿರದಿದ್ದರೆ ಕುಟುಂಬ ಸಮೇತ ಒಂದು ಸಲ ನೋಡಿ ನಕ್ಕು ಹಗುರಾಗಬಹುದು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.