ಓಖಿ ಚಂಡಮಾರುತದ ಪ್ರಭಾವ ರಾಜ್ಯದ ಕರಾವಳಿ ತೀರದಲ್ಲಿಯೂ ಕಂಡುಬಂದಿರುವ ಹಿನ್ನೆಲೆಯಲ್ಲಿ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ಆಹಾರ ಸಚಿವ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಗೆ ವಿವರ ನೀಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಈಗಾಗಲೇ ಡಿ.2ರಂದು ಸಂಜೆ 6 ಗಂಟೆಗೆ ಕರಾವಳಿಯಲ್ಲಿ ಕಡಲ ತೀವ್ರ ಅಲೆಗಳ ಮುನ್ಸೂಚನೆ ಬಂದಿದ್ದು, ಜಿಲ್ಲಾಡಳಿತ ಕೂಡಲೇ ಸನ್ನದ್ಧವಾಗಿತ್ತು. ಉಳ್ಳಾಲ ಆಸುಪಾಸಿನಲ್ಲಿ ತೀವ್ರ ಸಮುದ್ರ ಅಭ್ಬರಕ್ಕೆ 2 ಮನೆಗಳು ಸಂಪೂರ್ಣವಾಗಿ ಕುಸಿದುಬಿದ್ದಿದೆ. 6 ಮನೆಗಳು ಭಾಗಶ: ಹಾನಿಗೊಂಡಿವೆ. ಮುಂಜಾಗ್ರತಾ ಕ್ರಮವಾಗಿ 35 ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. ಮೀನುಗಾರಿಕಾ ದೋಣಿಗಳನ್ನು ಸಮುದ್ರಕ್ಕೆ ತೆರಳದಂತೆ ನಿರ್ಬಂಧಿಸಲಾಗಿದೆ. ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಉಳ್ಳಾಲ ನಗರಸಭೆ ಕಚೇರಿಯಲ್ಲಿಯೂ 24 ಗಂಟೆಗಳ ಕಂಟ್ರೋಲ್ ರೂಂ ತೆರೆದಿಡಲಾಗಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಸಭೆಗೆ ತಿಳಿಸಿದರು. ಪ್ರವಾಸಿಗರಿಗೆ ಸದ್ಯಕ್ಕೆ ಕರಾವಳಿ ತೀರಕ್ಕೆ ಆಗಮಿಸದಂತೆ ಅವರು ಮನವಿ ಮಾಡಿದರು. ಸದ್ಯ ಚಂಡಮಾರುತದ ಪ್ರಭಾವ ಉತ್ತರದತ್ತ ಚಲಿಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಆಹಾರ ಸಚಿವ ಯು.ಟಿ. ಖಾದರ್ ಮಾತನಾಡಿ, ಎಲ್ಲಾ ಇಲಾಖೆಗಳು ತ್ವರಿತವಾಗಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ನಾಗರೀಕರು ಪಾಲಿಸಬೇಕು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಹೊರಗಡೆಯ ಜನರು ಅನಗತ್ಯವಾಗಿ ಘಟನಾ ಸ್ಥಳದಲ್ಲಿ ಸೇರದಂತೆ ಅವರು ಮನವಿ ಮಾಡಿದರು.
ಮುಂಜಾಗ್ರತಾ ಕ್ರಮವಾಗಿ ಕೋಸ್ಟ್ ಗಾರ್ಡ್ ವತಿಯಿಂದ 4 ಹೆಲಿಕಾಪ್ಟರ್ ಗಳು ಗೋವಾದಿಂದ ಮಂಗಳೂರಿಗೆ ಆಗಮಿಸಲಿದೆ ಎಂದು ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಡಲಕೊರತೆಯಿಂದ ಮನೆ ಹಾನಿಗೀಡಾದವರಿಗೆ ಪರಿಹಾರ ಚೆಕ್ಕನ್ನು ಸಚಿವರು ವಿತರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಸಹಾಯಕ ಆಯುಕ್ತ ರೇಣುಕಾಪ್ರಸಾದ್, ಕೋಸ್ಟ್ ಗಾರ್ಡ್ ಅಧಿಕಾರಿಗಳು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.