ಶನಿವಾರ ರಾತ್ರಿಯೇ ಆರಂಭವಾದ ಕಡಲ ಮುನಿಸು ಭಾನುವಾರವೂ ಕಡಿಮೆಯಾಗಿಲ್ಲ. ಬೆಳಗ್ಗಿನ ಜಾವವೂ ಭಾರೀ ಗಾಳಿ ಬೀಸುತ್ತಿದೆ ಎಂಬ ಮಾಹಿತಿ ಲಭಿಸಿದೆ.
ಮಂಗಳೂರು ತಾಲೂಕಿನ ಉಳ್ಳಾಲದಿಂದ ಕುಂದಾಪುರ ತಾಲೂಕಿನ ಗಂಗೊಳ್ಳಿಯವರೆಗೆ ಸಮುದ್ರದಲ್ಲಿ ಬೃಹತ್ ಅಲೆಗಳು ಕಿನಾರೆಗೆ ಅಪ್ಪಳಿಸಿವೆ. ಇಸಮುದ್ರ ಉಬ್ಬರದ ಅವಧಿಯಲ್ಲಿಯೇ ಒಖೀ ಚಂಡಮಾರುತದಿಂದಾಗಿ ರಭಸವಾಗಿ ಗಾಳಿಯೂ ಬೀಸುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಸಮುದ್ರದಲ್ಲಿ ಆಗಾಗ್ಗೆ ಸುಳಿಗಾಳಿ ಬೀಸಿ ನೀರು ರಭಸವಾಗಿ ಕಿನಾರೆಗೆ ಅಪ್ಪಳಿಸುತ್ತಿದೆ. ಸಮುದ್ರ ಬದಿಯ ಮರಳನ್ನು ಕೂಡ ಸಮುದ್ರದೊಳಗೆ ಸೆಳೆಯುತ್ತಿದೆ.
ಪಡುಬಿದ್ರಿ, ಕಾಪು, ಉದ್ಯಾವರ, ಮಲ್ಪೆ, ಗಂಗೊಳ್ಳಿಯಲ್ಲಿಯೂ ಸಮುದ್ರ ಉಕ್ಕೇರಿದೆ. ಇಲ್ಲಿಯೂ ಸಮುದ್ರ ಬದಿಯಲ್ಲಿದ್ದ ದೋಣಿಗಳನ್ನು ಮೇಲಕ್ಕೆತ್ತಲಾಗಿದೆ. ಇಲ್ಲಿನ ಜನರೂ ಆತಂಕಿತಗೊಂಡಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ ಉದ್ಯಾವರ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಮೇಲೆ ನಿಗಾ ಇರಿಸಿದ್ದಾರೆ.
ಉಳ್ಳಾಲ ಪೆರಿಬೈಲ್‌ನಲ್ಲಿ ಭವಾನಿ ಅವರ ಮನೆಗೆ ನೀರು ಅಪ್ಪಳಿಸಿ ಹಾನಿಗೊಳಗಾಗಿದೆ. ರಾತ್ರಿ ಮನೆಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸ ಲಾಯಿತು. ನ್ಯೂ ಉಚ್ಚಿಲದಲ್ಲಿ ನೀರು ಬಡಿದು ನಾಗರಾಜ್ ಅವರ ಮನೆಗೆ ಹಾನಿಯಾಗಿದೆ. ಈ ಪರಿಸರದ ಇತರ 8 ಮನೆಗಳು ಅಪಾಯದಲ್ಲಿವೆ.
ಉಳ್ಳಾಲದಲ್ಲಿ ರೆಸಾರ್ಟ್ ಒಂದರ ತಾತ್ಕಾಲಿಕ ತಡೆಗೋಡೆ ಕುಸಿದು ಬಿದ್ದಿದೆ. ಇಲ್ಲಿ ನಡೆಯುತ್ತಿದ್ದ ಸಮಾರಂಭವನ್ನು ಅರ್ಧ ದಲ್ಲಿಯೇ ರದ್ದುಗೊಳಿಸಲಾಗಿದೆ. ಅಲಂಕಾರದ ವಸ್ತುಗಳೆಲ್ಲ ಸಮುದ್ರ ಸೇರಿದೆ.
ಬೈಕಂಪಾಡಿ, ಚಿತ್ರಾಪುರ, ಪಣಂಬೂರು ಪರಿಸರದಲ್ಲಿಯೂ ಕಡಲು ಉಗ್ರವಾಗಿದೆ. ತಣ್ಣೀರುಬಾವಿಯಲ್ಲಿ ಎರಡು ನಾಡದೋಣಿಗಳು ಸಮುದ್ರ ಪಾಲಾಗಿವೆ. ಮೀನಕಳಿಯದಲ್ಲಿ ಸುಮಾರು 25 ಬೋಟ್‌ಗಳನ್ನು ಕಿನಾರೆಯಿಂದ ಮೇಲಕ್ಕೆ ತರಲಾಗಿದೆ.
ಪಣಂಬೂರು ಬೀಚ್ ಪ್ರದೇಶದಲ್ಲಿಯೂ ಸಮುದ್ರ ಉಕ್ಕೇರಿದ್ದು, ಬೀಚ್ ಬದಿಯಲ್ಲಿನ ಸರ್ಕಲ್ ವರೆಗೆ ನೀರು ಬಂದಿದೆ. ಅಂಗಡಿಗಳಿಗೂ ನೀರು ನುಗ್ಗಿದೆ. ಚಿತ್ರಾಪುರದಲ್ಲಿ ಪಿಶರೀಸ್ ರಸ್ತೆವರೆಗೆ ನೀರು ಬಂದಿದೆ. ಸಸಿಹಿತ್ಲು ಬೀಚ್‌ನಲ್ಲಿ ಕೂಡ ನೀರು ರಸ್ತೆ ಸಮೀಪಕ್ಕೆ ಬಡಿಯುತ್ತಿದೆ. ಇಲ್ಲಿದ್ದ ಹಲವಾರು ದೋಣಿಗಳನ್ನು ಕ್ರೇನ್ ಬಳಸಿ ಮೇಲಕ್ಕೆತ್ತಲಾಯಿತು.
ಈ ಮಧ್ಯೆ ವಿದೇಶ ಪ್ರವಾಸ ಮೊಟಕುಗೊಳಿಸಿ ಸಚಿವ ಯು.ಟಿ.ಖಾದರ್ ಮರಳಿದ್ದಾರೆ. ಮುಂಜಾಗರೂಕತಾ ಕ್ರಮ ಕೈಗೊಳ್ಳಲು ಅವರು ಆಡಳಿತಕ್ಕೆ ಸೂಚನೆ ನೀಡಿದ್ದಾರೆ.