www.bantwalnews.com ವಿಡಿಯೋ ಮತ್ತು ಚಿತ್ರಗಳೊಂದಿಗೆ ಸಂಪೂರ್ಣ ವರದಿ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನಲ್ಲಿ ನವೆಂಬರ್ 27ರಿಂದ ನಡೆದ ಶ್ರೀ ದತ್ತ ಜಯಂತಿ ಮಹೋತ್ಸವ ಮತ್ತು ಶ್ರೀ ದತ್ತಮಹಾಯಾಗ ಸಪ್ತಾಹ ಭಾನುವಾರ ಸಂಪನ್ನಗೊಂಡಿತು.
3ರಂದು ಬೆಳಗ್ಗೆ ನಡೆದ ಧರ್ಮಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬೆಂಗಳೂರಿನ ಪರ್ಮನೆಂಟ್ ಲೋಕ್ ಅದಾಲತ್ ಸದಸ್ಯ ಬಾಲಕೃಷ್ಣ ಶೆಟ್ಟಿ, ನವಿಮುಂಬೈ ಫಾರ್ಮಾಸಿಟಿಕಲ್ ಡಿಸ್ಟ್ರಿಬ್ಯುಟರ್ ಎನ್.ಡಿ.ಶೆಣೈ, ಬಂಟರ ಸಂಘ ಬೆಂಗಳೂರು ಅಧ್ಯಕ್ಷ ಚಂದ್ರಹಾಸ ರೈ ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ, ಬೋಳಾರ ನಾರಾಯ:ಣ ಶೆಟ್ಟಿ ಪ್ರತಿಷ್ಠಾನದ ಬೋಳಾರ ಕರುಣಾಕರ ಶೆಟ್ಟಿ, ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿದ ಒಡಿಯೂರು ಶ್ರೀಗಳು, ಭಾವ ಶುದ್ಧಿ ಇರುವಲ್ಲಿ ಜೀವ, ದೇವನು ಒಂದಾಗಿರುತ್ತಾನೆ. ಅರಿತು ಬೆರೆತು ಬಾಳಿದಾಗ ಬಾಳು ಸಾಕ್ಷಾತ್ಕಾರವಾಗುತ್ತದೆ ಭಾಷೆ ಉಳಿದಾಗ ಸಂಸ್ಕೃತಿ ಉಳಿಯುತ್ತದೆ. ಭಗವಂತನ ಅನುಸಂಧಾನಕ್ಕೆ ಹೃದಯ ಭಾಷೆ ಅವಶ್ಯಕ. ತುಳು ಭಾಷೆ ೮ ನೇ ಪರಿಚೇದಕ್ಕೆ ಸೇರುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ನಡೆಯಬೇಕು. ಸೇವೆಯಲ್ಲಿ ಅಂತಸ್ತು ಇರಬಾರದು. ಸೇವೆಯನ್ನು ಅರ್ಪಣ ಭಾವದಿಂದ ಮಾಡಬೇಕು ಎಂದರು.
ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಒಡಿಯೂರು ಕ್ಷೇತ್ರದ ಮೂಲಕ ಆಧ್ಯಾತ್ಮಿಕ, ಧಾರ್ಮಿಕ ಸೇವೆಗಳೊಂದಿಗೆ ಸಮಾಜಿಕ ಪರಿವರ್ತನೆ ಆಗಿದೆ. ಒಡಿಯೂರು ಹಾಗೂ ಮಾಣಿಲ ಕ್ಷೇತ್ರಗಳ ಉದ್ದೇಶ ಒಂದೇ ಆಗಿದೆ. ಗ್ರಾಮ ವಿಕಾಸ ಕೇಂದ್ರದಿಂದ ಗ್ರಾಮದ ವಿಕಸನ ಎಂದರು.
ಈ ಸಂದರ್ಭದಲ್ಲಿ ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನದಿಂದ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಅವರಿಗೆ ಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾಸ್ಕರ್ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಹರೇಕಳ ಲಕ್ಷ್ಮೀ ನಾರಾಯಣ ರೈ ಪ್ರಶಸ್ತಿ ಪತ್ರ ಓದಿದರು.
ಸಂಸ್ಥಾನದ ಉತ್ಸವಗಳ ದಿನದರ್ಶಿಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ರಾಜಶ್ರೀ ತಾರಾನಾಥ ರೈ ಪೆರ್ಲ ಇವರ ಚವಳೊ ಕೃತಿ ಬಿಡುಗಡೆಗೊಳಿಸಲಾಯಿತು.
ವೇದಪಾರಾಯಣ, ಶ್ರೀಗುರುಚರಿತ್ರೆ ಪಾರಾಯಣ ಸಮಾಪ್ತಿ, ಶ್ರೀದತ್ತ ಮಹಾಯಾಗದ ಪೂರ್ಣಾಹುತಿ, ಕಲ್ಪೋಕ್ತ ಪೂಜೆ, ಮಹಾಪೂಜೆ, ಮಧುಕರಿ, ಮಂತ್ರಾಕ್ಷತೆ, ರಂಗಪೂಜೆ, ಉಯ್ಯಾಲೆ ಸೇವೆ,, ವಿಶೇಷ ಬೆಳ್ಳಿ ರಥೋತ್ಸವ ಹಾಗೂ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಅವರಿಂದ ಯಕ್ಷಗಾನ ಬಯಲಾಟ ನಡೆಯಿತು.
ಮೂರು ಮಂದಿ ಅಂಗವಿಕಲರಿಗೆ, ನಾಲ್ಕು ಮಂದಿ ಅನಾರೋಗ್ಯ ಪೀಡಿತರಿಗೆ, ಕಣ್ಣಿನ ಚಿಕಿತ್ಸೆಗೆ, ಎರಡು ಕುಟಂಬಕ್ಕೆ ಮನೆ ನಿರ್ಮಾಣಕ್ಕೆ, ಒಂದು ಕುಟುಂಬ ಮನೆ ದುರಸ್ತಿಗೆ ಧನ ಸಹಾಯ ನೀಡಲಾಯಿತು.
ಮರಣ ಸಾಂತ್ವನ ನಿಧಿ ವಿತರಿಸಲಾಯಿತು. ಪುಣಚ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಗೇರುಕಟ್ಟೆ ದಲಿತ ಸಂಘರ್ಷಕ ಸಂಘಟನಾ ಸಮಿತಿಗೆ, ನೆಲ್ಯಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯ ನಿರ್ಮಾಣಕ್ಕೆ ಹಾಗೂ ಸಾಲೆತ್ತೂರು ನವಚೇತನ ಯುವಕ ಮಂಡಲದ ಭಜನಾ ಮಂದಿರ ಕಾಮಗಾರಿಗೆ ಸಹಾಯಧನ ವಿತರಿಸಲಾಯಿತು.
ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ತಾಲೂಕು ವಿಸ್ತರಣಾಧಿಕಾರಿ ಸದಾಶಿವ ಅಳಿಕೆ, ಮುಖ್ಯೋಪಾಧ್ಯಾಯ ಜಯಪ್ರಕಾಶ್ ನಿರೂಪಿಸಿದರು. ಮಾಂತೇಶ್ ಭಂಡಾರಿ ವಂದಿಸಿದರು. ರೇಣುಕ ಎಸ್ ರೈ ಪ್ರಾರ್ಥಿಸಿದರು.