ಸಾಂಸ್ಕೃತಿಕ

ಸಂಭ್ರಮದ ನುಡಿಸಿರಿಯಲ್ಲಿ ಹಳೆಬೇರು, ಹೊಸಚಿಗುರು

  • ಹರೀಶ ಮಾಂಬಾಡಿ

www.bantwalnews.com

MANASA DIGITALS

ನವೆಂಬರ್ 30 ರಾತ್ರಿಯಿಂದ ಡಿಸೆಂಬರ್ 3 ಇರುಳಿನವರೆಗೆ ಅಂದಾಜು 2 ಲಕ್ಷ ಜನರಿಂದ ವೀಕ್ಷಣೆ, ರಂಗುರಂಗಿನ ನೃತ್ಯ, ಸಂಗೀತ, ನಾಟಕ, ಸಿನೆಮಾ, ಚಿಂತನೆಗೆ ಗ್ರಾಸವೊದಗಿಸುವ ವಿಚಾರಗೋಷ್ಠಿ, ಸನ್ಮಾನ, ಬೃಹತ್ ವೇದಿಕೆಗಳು, ಎತ್ತರದ ವಿದ್ಯುದ್ದೀಪಾಲಂಕಾರ, ಹಾಡು, ಕುಣಿತದ ಲಾಸ್ಯಮಕ್ಕಳಿಗೆ ಸೆಲ್ಫೀ, ಹಿರಿಯರಿಗೂ ಬದಲಾವಣೆಯ ಅರಿವು

ಜಾಹೀರಾತು

ಮೂಡುಬಿದಿರೆ ವಿದ್ಯಾಗಿರಿಯಲ್ಲಿ ಭಾನುವಾರ ಸಂಪನ್ನಗೊಂಡ ಆಳ್ವಾಸ್ ನುಡಿಸಿರಿಯ 2017ನೇ ರಾಷ್ಟ್ರೀಯ ಸಮ್ಮೇಳನ ಮೂರೂ ದಿನಗಳಲ್ಲಿ ಕಂಡುಬಂದ ಚಿತ್ರಣವಿದು.

ಈ ಬಾರಿ ಸಮ್ಮೇಳನದ ಪರಿಕಲ್ಪನೆ ಬಹುತ್ವದ ನೆಲೆಗಳು. ಮೂರು ದಿನಗಳಲ್ಲಿ ವಿಚಾರ ಮಂಡಿಸಿದ ವಿದ್ವಾಂಸರೊಂದಿಗೆ ಸಮ್ಮೇಳನಾಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ಅವರೂ ಬಹುತ್ವವಿಲ್ಲದೆ ಭಾರತವಿಲ್ಲ ಎಂಬುದನ್ನೇ ಒತ್ತಿ ಹೇಳಿದರು.

ಮರೆತುಹೋಗುತ್ತಿರುವ ಮೌಲ್ಯಗಳು, ವಿಜೃಂಭಿಸುತ್ತಿರುವ ಕೋಮು ಆಧರಿತ ಚಿಂತನೆ, ಚಾರಿತ್ರ್ಯಹನನವನ್ನೇ ಕೇಂದ್ರೀಕೃತಗೊಳಿಸುತ್ತಿರುವ ಬಹುಮಾಧ್ಯಮಗಳ ವೈಖರಿ, ಕಲಾಸ್ವಾದನೆಯನ್ನೇ ಮರೆಯುತ್ತಿರುವ ಸಭಿಕರು, ಕಾವ್ಯಾಸಕ್ತಿಯನ್ನು ಕಳೆದುಕೊಂಡ ಭಾಷಾಧ್ಯಯನದ ಯುವಕರು, ನಿರ್ಭಾವುಕರಾಗುತ್ತಿರುವ ಜನತೆ, ಸಂವೇದನಾಶೂನ್ಯರಾಗುತ್ತಿರುವ ಸಮುದಾಯಗಳ ಕುರಿತು ಗಂಭೀರ ಎಚ್ಚರಿಕೆಯನ್ನೂ ಮೂರು ದಿನಗಳಲ್ಲಿ ಮಾತನಾಡಿದ ಭಾಷಣಕಾರರು ನೀಡಿದ್ದು ಇಲ್ಲಿ ಗಮನಾರ್ಹ.

ಮಾತನಾಡಿದವರೆಲ್ಲರೂ ಐವತ್ತು ವರ್ಷ ದಾಟಿದವರು. ಕೇಳುಗರೂ ಮೂವತ್ತು ದಾಟಿದವರು. ಇಪ್ಪತ್ತರಿಂದ ಮೂವತ್ತು ವರ್ಷದವರು ಸ್ಟಾಲ್ ಗಳಲ್ಲಿ ಇಣುಕುತ್ತಿರುವ ಹೊತ್ತಿನಲ್ಲಿ ಸಂದೇಶಗಳನ್ನು ಯುವಜನತೆಗೆ ಮುಟ್ಟಿಸುವ ಜವಾಬ್ದಾರಿಯೂ ಪ್ರೌಢವಯಸ್ಕರಿಗೆ ಇದೆ ಎಂಬುದನ್ನು ಸಮ್ಮೇಳನ ಸೂಕ್ಷ್ಮವಾಗಿ ತಿಳಿಸಿತು.

ಸಮ್ಮೇಳನವೊಂದರಲ್ಲಿ ಏನಿಲ್ಲ ಎಂಬ ಪ್ರಶ್ನೆಯೇ ಬಾರದಂತೆ ಡಾ. ಮೋಹನ ಆಳ್ವ ನುಡಿಸಿರಿಯನ್ನು ಅರ್ಥಪೂರ್ಣವಾಗಿಸಲು ವಿದ್ಯಾರ್ಥಿಸಿರಿ, ಚಿತ್ರಸಿರಿ, ಛಾಯಾಚಿತ್ರಸಿರಿ, ಚುಕ್ಕಿಚಿತ್ರಸಿರಿ, ಗಾಳಿಪಟಸಿರಿ, ಕೃಷಿಸಿರಿ, ತುಳುಐಸಿರಿ, ಉದ್ಯೋಗಸಿರಿ, ರಂಗಸಿರಿ, ಸಿನಿಸಿರಿ, ದೇಸಿ ಕ್ರೀಡೆಗಳ ಪ್ರದರ್ಶನ, ವಿಜ್ಞಾನಸಿರಿ, ಗೂಡುದೀಪಸಿರಿ, ವ್ಯಂಗ್ಯಚಿತ್ರಸಿರಿ, ಚಿತ್ರಕಲಾಮೇಳ, ಯಕ್ಷಸಿರಿ, 350ಕ್ಕೂ ಅಧಿಕ ಪುಸ್ತಕ ಮಳಿಗೆ, 12 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಎಲ್ಲ ವರ್ಗ, ಜಾತಿ, ಸಮುದಾಯದವರಿಗೂ ಆಪ್ತವಾಗುವಂತೆ ಮಾಡಿದರು. ಹೀಗಾಗಿಯೇ ವಿದ್ಯಾಗಿರಿಗೆ ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ ಒಟ್ಟು ಜನಸಂಖ್ಯೆ 2 ಲಕ್ಷ ಎಂಬುದು ಗಮನಾರ್ಹ.

ಚೆಂಡೆ ವಾದನ, ಹಾಡುಗಳ ಸಿಂಚನ, ಕಾವ್ಯಲಹರಿಗಳೊಂದಿಗೆ ಭಾರವಾದ ಮನಸ್ಸಿನಿಂದ ರಾತ್ರಿ ತಮ್ಮೂರಿಗೆ ಮರಳಲು ಪ್ರತಿನಿಧಿಗಳು ಸಜ್ಜಾದರೆ, ರಾತ್ರಿ ಬೆಳಗಾಗಿಸುವ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕೇಳಿಸುತ್ತಿದ್ದವು.

ಸಮ್ಮೇಳನ ಸಾರ್ಥಕವಾಗಬೇಕಿದ್ದರೆ, ಎಲ್ಲರೊಳಗೊಂದಾಗಿ ಬದುಕುವ ಬಹುತ್ವದ ಪರಿಕಲ್ಪನೆಯನ್ನು ಬದುಕಿನಲ್ಲೂ ಅಳವಡಿಸಬೇಕು. ಆಳ್ವಾಸ್ ನುಡಿಸಿರಿಯ ಆಶಯ ಈಡೇರಲಿ.

 

ಜಾಹೀರಾತು
Harish Mambady

ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.