ಸಾಂಸ್ಕೃತಿಕ

ಬಹುತ್ವದ ನೆಲೆ ಪರಿಕಲ್ಪನೆ, ವಿದ್ಯಾಗಿರಿಯಲ್ಲಿ ವೈವಿಧ್ಯ ಸಿರಿ

  • ಹರೀಶ ಮಾಂಬಾಡಿ

www.bantwalnews.com

ಜಾಹೀರಾತು

ಬಹುತ್ವದ ನೆಲೆಗಳ ಪರಿಕಲ್ಪನೆಯಲ್ಲಿ ಡಿಸೆಂಬರ್ 1ರಂದು ತೆರೆದುಕೊಂಡ ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯವೂ ಹೀಗೇ ಇತ್ತು.

ಬಹುತ್ವದ ನೆಲೆಯಲ್ಲಿ ಸಂಸ್ಕೃತಿ ರೂಪುಗೊಂಡಿದ್ದು, ಒಂದು ವೇಳೆ ಬಹುತ್ವ ನಾಶಗೊಂಡರೆ, ಇಡೀ ಭಾರತೀಯ ಪರಂಪರೆ ನಾಶಗೊಳ್ಳುತ್ತದೆ ಹೀಗಂದವರು ನಾಗತಿಹಳ್ಳಿ.

ರತ್ನಾಕರವರ್ಣಿ ವೇದಿಕೆಯ ಎಂ.ಗೋಪಾಲಕೃಷ್ಣ ಅಡಿಗ ಸಭಾಂಗಣದಲ್ಲಿ ಮುಖ್ಯ ಸಮಾರಂಭದ ವಿಚಾರಗೋಷ್ಠಿಗಳು ಆರಂಭಗೊಂಡದ್ದೇ ಕರ್ನಾಟಕ ನಾಳೆಗಳ ನಿರ್ಮಾಣದ 2016ರ ನೆನಪಿನ ಸಂಚಿಕೆ ಅನಾವರಣದಿಂದ. ನಾಡೋಜ ಏಣಗಿ ಬಾಳಪ್ಪ ವೇದಿಕೆ, ಗೇರುಕಟ್ಟೆ ಗಂಗಯ್ಯ ಶೆಟ್ಟಿ ವೇದಿಕೆ, ಕುವೆಂಪು ಸಭಾಂಗಣ, ಕು.ಶಿ.ಹರಿದಾಸ ಭಟ್ಟ ವೇದಿಕೆ, ನಾಡೋಜ ಕಯ್ಯಾರ ಕಿಂಞಣ್ಣ ರೈ ವೇದಿಕೆ, ಡಾ.ಶಿವರಾಮ ಕಾರಂತ ಸಭಾಂಗಣ, ಪಳಕಳ ಸೀತಾರಾಮ ಭಟ್ಟ ವೇದಿಕೆ, ಡಾ.ವಿ.ಎಸ್.ಆಚಾರ್ಯ ಸಭಾಭವನ, ಹರೀಶ್ ಆರ್. ಭಟ್ ವೇದಿಕೆ, ಕೆ.ವಿ.ಸುಬ್ಬಣ್ಣ ಬಯಲುಜ ರಂಗಮಂದಿರ, ಪ್ರೊ.ಎಸ್.ರಾಮದಾಸ ತೋಳ್ಪಾಡಿ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೇ ಕಂಡುಬಂದವು. ಜೊತೆಗೆ ದೀಪಗಳು ಬೆಳಕಿನ ಚಿತ್ತಾರ ಹಬ್ಬಿದರೆ ಮೋಡ ಮುಸುಕಿದರೂ ನಾಳೆಯ ಕಾರ್ಯಕ್ರಮಗಳ ನಿರೀಕ್ಷೆಯಲ್ಲಿ ಇರುಳು ಬೆಳಗಾಗುವುದನ್ನೇ ಕಾಯುತ್ತಿತ್ತು.

ಇವಷ್ಟೇ ಅಲ್ಲ, ಜಾನುವಾರು ಪ್ರದರ್ಶನದಲ್ಲಿ ಇಸ್ಕಾನ್‌ನಿಂದ ದೇಶ ಪರ್ಯಟನೆ ನಡೆಸುತ್ತಿರುವ ಸುಮಾರು 900 ಕೆಜಿ ತೂಕದ ಅಪೂರ್ವ ಎತ್ತು ಕೂಡ ನೋಡುಗರ ಗಮನ ಸೆಳೆಯಿತು.

ಕೇರಳದ ಅಲೆಪಿಯ ಫಿರೋಜ್‌ ಅಹಮ್ಮದ್‌ ಅವರ ನೇತೃತ್ವದಲ್ಲಿ ಸಮುದ್ರದ ಅಪರೂಪದ ಚಿಪ್ಪುಗಳ ಪ್ರದರ್ಶನ ಈ ಬಾರಿಯ ವಿಶೇಷ ಆಕರ್ಷಣೆಯಾಗಿತ್ತು.  ದೇಶದ 170 ಕಡೆಗಳಲ್ಲಿ ಈ ಪ್ರದರ್ಶನ ನಡೆದಿದ್ದು, ಮಂಗಳೂರಿನಲ್ಲಿ ಇದು ಅವರ 2ನೇ ಪ್ರದರ್ಶನವಾಗಿದೆ. ಇಂಡೋ ಪೆಸಿಫಿಕ್‌ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಚಿಪ್ಪುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. 500ಕ್ಕೂ ಅಧಿಕ ತಳಿಯ ಚಿಪ್ಪುಗಳು ಇಲ್ಲಿವೆ. ಇರುವೆಯಷ್ಟು ಗಾತ್ರದ ಚಿಪ್ಪಿನಿಂದ ಹಿಡಿದು ‘ಆಸ್ಟ್ರೇಲಿಯನ್‌ ಟ್ರಯಪ್‌’ ಎಂಬ ಬೃಹತ್‌ ಗಾತ್ರದ ಚಿಪ್ಪು ಕಂಡುಬಂತು.

ಕೃಷಿಸಿರಿ, ಸಿನಿಸಿರಿ, ವಿದ್ಯಾರ್ಥಿಸಿರಿ, ಛಾಯಾಚಿತ್ರಸಿರಿ, ಚುಕ್ಕಿಚಿತ್ರಸಿರಿ, ಗಾಳಿಪಟಸಿರಿ, ತುಳು ಐಸಿರಿ, ಉದ್ಯೋಗಸಿರಿ, ರಂಗಸಿರಿ, ಯಕ್ಷಸಿರಿ, ದೇಸಿ ಕ್ರೀಡೆಗಳ ಪ್ರದರ್ಶನ, ವಿಜ್ಞಾನಸಿರಿ ಹೀಗೆ ಹತ್ತಾರು ಪ್ರದರ್ಶನಗಳು ಇಡೀ ನುಡಿಸಿರಿಗೆ ಮತ್ತಷ್ಟುಹೊಳಪು ನೀಡಿದವು.

ತವರಿಗೆ ತೆರಳುವ ಸಂಭ್ರಮದಂತೆ ನುಡಿಹಬ್ಬಕ್ಕೆ ಊರಿಗೆ ಬರುವ ಸಾಫ್ಟ್ ವೇರ್ ಇಂಜಿನಿಯರುಗಳು, ಸಾಹಿತ್ಯ ಪ್ರೇಮಿಗಳ ದಂಡೇ ಎಂದಿನಂತೆ ಸೇರಿತ್ತು.

ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ ಪ್ರತಿನಿಧಿಗಳಿಗೆ ಅಚ್ಚುಕಟ್ಟಾದ ವ್ಯವಸ್ಥೆ, ಪಾರ್ಕಿಂಗ್, ಧೂಳಿನಿಂದ ತೊಂದರೆಯಾಗದಂತೆ ನೀರು ಸಿಂಪಡಣೆ, ಸಭಾಂಗಣದ ಸುತ್ತಮುತ್ತಲು ಜಾನಪದ ಹಾಡುಗಾರರ ಪ್ರದರ್ಶನ ಈ ವರ್ಷವೂ ಕಂಡುಬಂತು.

ತಂತ್ರಜ್ಞಾನದ ಸ್ಪರ್ಶ ಆಳ್ವಾಸ್ ನುಡಿಸಿರಿಗೂ ತಟ್ಟಿತು. ಸೆಲ್ಫೀ ತೆಗೆದುಕೊಳ್ಳುವುದು ಈಗ ಕೇವಲ ಯುವಜನರ ಸ್ವತ್ತಾಗಿ ಉಳಿದಿಲ್ಲ. ಮುದುಕರೂ ಕಂಡಕಂಡ ಚಿತ್ರಗಳು, ಪ್ರದರ್ಶನಗಳೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದರು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.