ಸಂಗೀತ ಜಗತ್ತಿನಲ್ಲಿ ಪ್ರತಿಭಾವಂತ ಸಂಗೀತರಾರರಾದ ಜೋಯಲ್ ರೆಬೆಲ್ಲೋ ಮತ್ತು ಡ್ಯಾರೆಲ್ ಮಸ್ಕರೇನ್ಹಸ್ ಅವರು ಮೋಗ್ ಆಸೋಮ್ ಸರಣಿಯ ಎರಡನೇ ಭಾಗದೊಂದಿಗೆ ಮರಳಿದ್ದಾರೆ. ಈ ಬಾರಿ ಅರ್ಮಾನ್ ಮಲಿಕ್, ಬಪ್ಪಿ ಲಹರಿ ಸಹಿತ ಪ್ರಮುಖ ಬಾಲಿವುಡ್ ಹಾಡುಗಾರರ ಧ್ವನಿಯೊಂದಿಗೆ.
11 ಹಾಡುಗಳ ಈ ಆಲ್ಬಂ ಈಗಾಗಲೇ ಕೊಂಕಣಿ ಹಾಡುಪ್ರಿಯರ ಜಗತ್ತಿನಲ್ಲಿ ನಿರೀಕ್ಷೆ ಹುಟ್ಟಿಸಿದೆ. ಕೊಂಕಣಿಯ ಪ್ರಥಮ ರಾಪ್ ಹಾಡು ಮತ್ತು ರೆಮೋ ಫೆರ್ನಾಂಡೀಸ್ ಅವರು ಹಾಡಿದ ಹಾಡೊಂದರ ರೀಮೆಕ್ ಇದರಲ್ಲಿದೆ. ಉಷಾ ಉತ್ತುಪ್ ಮತ್ತು ಉದಿತ್ ನಾರಾಯಣ್ ಅವರ ಧ್ವನಿಯೂ ಇದರಲ್ಲಿ ಮೂಡುವ ನಿರೀಕ್ಷೆಯಲ್ಲಿ ಈ ಸಂಗೀತ ಜೋಡಿ ಇದೆ.
ಜೋಯಲ್ ರೆಬೆಲ್ಲೋ 92.7 ಬಿಗ್ ಎಫ್ ಎಂನ ಪ್ರೊಮೊ ಪ್ರೊಡ್ಯುಸರ್ ಮತ್ತು ಪ್ರೋಗ್ರಾಮರ್ ಆಗಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಲಕ್ಕಿ ಆಲಿ ಜೊತೆ ಕೆಲಸ ಮಾಡಿದ ಅನುಭವ ಅವರಿಗಿದೆ. ಸುಮಾರು 200ಕ್ಕೂ ಅಧಿಕ ಸ್ಟೇಜ್ ಶೋಗಳನ್ನು ನೀಡಿರುವ ಹಿನ್ನೆಲೆಯುಳ್ಳ ಜೋಯಲ್ ಜೊತೆ ಮತ್ತೋರ್ವ ಪ್ರತಿಭಾವಂತ ಡ್ಯಾರೆಲ್ ಮಸ್ಕರೇನ್ಹಸ್ ಇದ್ದಾರೆ. ಯು.ಎಸ್.ಎ.ಯ ರೆನೋದಲ್ಲಿ ವಿಡಿಯೋ ಗೇಮಿಂಗ್ ಟೆಕ್ನಾಲಜೀಸ್ ನಲ್ಲಿ ಮ್ಯೂಸಿಕ್ ಕಂಪೋಸರ್, ಸೌಂಡ್ ಡಿಸೈನರ್ ಆಗಿರುವ ಡ್ಯಾರೆಲ್, ಸಿನಿಮಾ ಮತ್ತು ಸೀರಿಯಲ್ ಗಳಾದ ಮೈನಿಯೋನ್ಸ್, ಬ್ಯಾಟ್ ಮ್ಯಾನ್ ವರ್ಸಸ್ ಸುಪರ್ ಮ್ಯಾನ್, ಬರ್ನ್ ನೋಟಿಸ್, ಸ್ಟೇಟ್ ಅಫೇರ್ಸ್ ಗಳ ಸಹಾಯಕರಾಗಿ ದುಡಿದ ಅನುಭವ ಹೊಂದಿದವರು ಮಾಂಡ್ ಸೋಭಾಣ್ ಅವರ ಕೊಂಕಣಿ ವಿಶ್ವ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಬೆಸ್ಟ್ ಮ್ಯೂಸಿಕ್ ಅರೇಂಜರ್ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ. ಅವರ 48 ಗಂಟೆಗಳ ಸಿನಿಮಾ ಪ್ರಾಜೆಕ್ಟ್ ಆಗಿರುವ ಸೌಂಡ್ ಟ್ರ್ಯಾಕ್ – ದಿ ನೆಕ್ಸ್ಟ್ ಸ್ಟೆಪ್ ಗೆ ವೀಕ್ಷಕರ ಆಯ್ಕೆಯ ಪ್ರಶಸ್ತಿ ಲಭಿಸಿದೆ.
ಈ ಜೋಡಿ ಎಂಥೆಂಥ ಸಾಧನೆ ಮಾಡಿದೆ ಗೊತ್ತಾ?
ಜೋಯಲ್ ಮತ್ತು ಡ್ಯಾರೆಲ್ ಅವರ ಜೋಡಿ ಪ್ರಧಾನಿ ಮೋದಿ ಅವರ ಪ್ರಚಾರಗೀತೆ ನಮೋ ನಿರ್ಮಿಸಿದೆ. ಪ್ರಮುಖ ಬ್ಯಾಂಕುಗಳ ಜಾಹೀರಾತುಗಳಿಗೆ ಧ್ವನಿ ನೀಡಿ ಸಂಗೀತ ಒದಗಿಸಿದೆ. ಹಲವು ಖಾಸಗಿ ಕಂಪನಿಗಳ ಬ್ರಾಂಡಿಂಗ್ ಗೂ ಈ ಜೋಡಿ ನೆರವಾಗಿದೆ.
ಗುರುಕಿರಣ್, ಉಷಾ ಉತ್ತುಪ್ ಮತ್ತು ರೆಮೋ ಫೆರ್ನಾಂಡೀಸ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಈ ಜೋಡಿಗಿದೆ. ಹೀಗಾಗಿಯೇ ಆ ಉತ್ಸಾಹದೊಂದಿಗೆ ಆರಂಭಿಸಿದ್ದು ಮೋಗ್ ಆಸೋಮ್ 2.
ಕೊಂಕಣಿ ಸಂಗೀತ ಕ್ಷೇತ್ರದ ಪ್ರಸಿದ್ಧರ ಸಹಕಾರದೊಂದಿಗೆ ಉತ್ತಮ ತಾಂತ್ರಿಕತೆಯುಳ್ಳ ಆಲ್ಬಂ ಇದಾಗಲಿದೆ. ಅಲೆಕ್ಸ್ ಮಾಡ್ತಾ, ಹೆನ್ರಿ ಡಿಸೋಜ, ಪತ್ರಾವೋ ಬ್ರದರ್ಸ್, ಮೆಲ್ವಿನ್ ಪೆರಿಸ್ ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಮೋಗ್ ಅಸೋಮ್ 2 ಈ ಚಾರಿತ್ರಿಕ ಹಾಡುಗಾರರನ್ನು ಒಂದೇ ವೇದಿಕೆಯಲ್ಲಿ ಸೇರಿಸಲಿದೆ.
ಅರ್ಮಾನ್ ಮಲಿಕ್, ಬಪ್ಪಿ ಲಹರಿ ಅಲ್ಲದೆ ಮತ್ತಷ್ಟು ಪ್ರಮುಖ ಹಾಡುಗಾರರು ಈ ಆಲ್ಬಂನಲ್ಲಿ ಇರಲಿದ್ದಾರೆ. ವಿಲ್ಸನ್ ಕಟೀಲ್ ಅವರ ಸಾಹಿತ್ಯ ಸಹಿತ ಹಲವು ಅಚ್ಚರಿಯ ಕೊಡುಗೆ ಈ ಡಿಸೆಂಬರ್ ಅಂತ್ಯದ ವೇಳೆಗೆ ಮೋಗ್ ಅಸೋಮ್ 2ರಲ್ಲಿ ದೊರಕಲಿದೆ.
ಅಂದ ಹಾಗೆ ಮೋಗ್ ಅಸೋಮ್ ಅಂದರೆ, ಪ್ರೀತಿಯಿಂದ ಎಂದರ್ಥ.