ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಇಲ್ಲಿನ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯಲ್ಲಿ ’ಸಂವಿಧಾನ ದಿನ’ವನ್ನು ಆಚರಿಸಲಾಯಿತು.
ಬಂಟ್ವಾಳದ ಸಿವಿಲ್ ಮುಖ್ಯ ನ್ಯಾಯಾಧೀಶೆ ಪ್ರತಿಭಾ ಡಿ ಎಸ್ ಮಾತನಾಡಿ ಎಲ್ಲಾ ಕಾನೂನುಗಳ ಮೂಲ ಸಂವಿಧಾನ. ಸಂವಿಧಾನದ ಬಗೆಗೆ ಪ್ರತಿಯೊಬ್ಬರೂ ಮಾಹಿತಿ ಪಡೆಯಬೇಕು ಎಂದು ಹೇಳಿದರು. ಬಂಟ್ವಾಳ ಬಾರ್ ಅಸೋಸಿಯೇಶನ್ನ ಅಧ್ಯಕ್ಷ ಶ್ರೀ ವೆಂಕಟರಮಣ ಶೆಣೈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಗಣೇಶ್ ಪೈ ಮಾತನಾಡಿ ಎಲ್ಲಾ ಕಾನೂನುಗಳು ಸಂವಿಧಾನದ ಚೌಕಟ್ಟಿನಲ್ಲಿ ನಿರೂಪಿತವಾಗಿದೆ. ವಿದ್ಯಾರ್ಥಿಗಳು ಇದರ ಅರಿವು ಹೊಂದಿರಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಶಾಲಾ ಪ್ರಾಂಶುಪಾಲೆ ರಮಾಶಂಕರ್ ಸಂವಿಧಾನದ ಕುರಿತು ಜ್ಞಾನ ಹಾಗೂ ಗೌರವವನ್ನು ಎಲ್ಲರೂ ಹೊಂದಬೇಕು ಎಂದರು.
ವಿದ್ಯಾರ್ಥಿಗಳು ನ್ಯಾಯಾಧೀಶರೊಂದಿಗೆ ಪ್ರಶ್ನೋತ್ತರದ ಸಂವಾದ ನಡೆಸಿದರು. ನ್ಯಾಯವಾದಿಗಳಾದ ರಾಜಾರಾಮ್ ನಾಯಕ್, ಶ್ರೀಧರ್ ಪೈ, ಆಶಾ ಪ್ರಸಾದ್ ರೈ, ದೀಪಕ್ ಕುಮಾರ್ ಜೈನ್, ಸಂಯೋಜಕ ದಾಸೇಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕಿ ಜೂಲಿ ಟಿ ಜೆ ಸ್ವಾಗತಿಸಿ ನಿರ್ವಹಿಸಿದರು. ನಮಿತಾಂಜಲಿ ವಂದಿಸಿದರು.