www.bantwalnews.com REPORT
ಸರಕಾರಿ ಪಪೂ ಕಾಲೇಜು: ಪ್ರತಿಭಾ ದಿನೋತ್ಸವ, ಬೀಳ್ಕೊಡುಗೆ ಸಮಾರಂಭದಲ್ಲಿ ರಮಾನಾಥ ರೈ
ಬಿ.ಸಿ.ರೋಡು ಮುಖ್ಯವೃತ್ತದಿಂದ ಗೂಡಿನಬಳಿ ಕಾಲೇಜು ವರೆಗೆ ರಸ್ತೆಯ ಎರಡೂ ಕಡೆಗಳಿಗೆ ಇಂಟರ್‌ಲಾಕ್ ವಾಕ್‌ವೇ ನಿರ್ಮಿಸುವ ಕಾರ್ಯ ಶೀಘ್ರ ಪೂರ್ಣಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ನಡೆದಾಡಲು ಉಲ್ಲಾಸದಾಯಕವಾಗಲಿದೆ ಎಂದು ಸಚಿವ ರಮಾನಾಥ ರೈ ಹೇಳಿದರು.
ಗೂಡಿನಬಳಿ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಸರಸ್ವತಿ ಬಿ. ಅವರ ಬೀಳ್ಕೊಡುಗೆ ಹಾಗೂ ಕಾಲೇಜಿನ ವಾರ್ಷಿಕ ಪ್ರತಿಭಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೂಡಿನಬಳಿ ಪ್ರದೇಶದಲ್ಲಿ ಕಾಲೇಜು ಸ್ಥಾಪಿಸಲು ಸುಸಜ್ಜಿತ ಹಾಗೂ ವ್ಯವಸ್ಥಿತ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಪ್ರಾಂಶುಪಾಲೆ ಸರಸ್ವತಿ ಮೇಡಂ ಅವರ ಶ್ರಮ ಉಲ್ಲೇಖನೀಯ. ಮೌಲ್ಯಾಧಾರಿತ ಹಾಗೂ ಶೀಲವಂತ ಶಿಕ್ಷಣ ಈ ಸಂಸ್ಥೆಯಿಂದ ಮುಂದೆಯೂ ವಿದ್ಯಾರ್ಥಿಗಳಿಗೆ ದೊರೆಯಲಿ ಎಂದು ಹಾರೈಸಿದರು.
ಸಚಿವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲೆ ಸರಸ್ವತಿ ಅವರು ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ರಾಜಕೀಯ ಹಾಗೂ ಜಾತಿ, ಧರ್ಮ ಆಧಾರಿತ ವಿಷಯಗಳಿಗೆ ಬಲಿ ಬೀಳದೆ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಪಣತೊಡುವಂತೆ ಕರೆ ನೀಡಿದರು.
ಗ್ರಂಥಾಲಯ, ಲ್ಯಾಬ್ ಕೊಡುಗೆ:
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಮಾಲಿನ್ಯ ನಿಯಂತ್ರಣಾಧಿಕಾರಿ ರಾಜಶೇಖರ ಪುರಾಣಿಕ್ ಅವರಿಗೆ ಕಾಲೇಜಿನ ಕೊರತೆಯಾಗಿರುವ ಗ್ರಂಥಾಲಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಲ್ಯಾಬ್ ವ್ಯವಸ್ಥೆಯನ್ನು ಒದಗಿಸುವಂತೆ ಕಾಲೇಜು ಪ್ರಾಂಶುಪಾಲರು ನೀಡಿದ ಮನವಿಗೆ ಸ್ಪಂದಿಸಿದ ಅವರು ಎರಡೂ ವ್ಯವಸ್ಥೆಯನ್ನು ಶೀಘ್ರದಲ್ಲೇ ಒದಗಿಸಿಕೊಡುವುದಾಗಿ ಭರವಸೆ ನೀಡಿದರು
ಬಂಟ್ವಾಳ ಎಸ್‌ವಿಎಸ್ ಕಾಲೇಜು ಉಪಪ್ರಾಂಶುಪಾಲ ಪ್ರೊ. ತುಕಾರಾಂ ಪೂಜಾರಿ ಉಪನ್ಯಾಸಗೈದರು. ಮುಖ್ಯ ಅತಿಥಿಗಳಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯ ಮುಹಮ್ಮದ್ ಇಕ್ಬಾಲ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಮಾಲಿನ್ಯ ನಿಯಂತ್ರಣಾಧಿಕಾರಿ ರಾಜಶೇಖರ ಪುರಾಣಿಕ್, ಹಿರಿಯ ವೈಜ್ಞಾನಿಕ ಅಧಿಕಾರಿ ಜಯಪ್ರಕಾಶ್ ನಾಯಕ್, ಎಂ.ಆರ್.ಪಿ.ಎಲ್. ಪ್ರಧಾನ ವ್ಯವಸ್ಥಾಪಕ ಯು.ವಿ. ಐತಾಳ್ ಭಾಗವಹಿಸಿದ್ದರು.
ಕಾಲೇಜು ಅಭಿವೃದ್ದಿ ಮಂಡಳಿ ಸದಸ್ಯರುಗಳಾದ ಉಮೇಶ್ ಬೋಳಂತೂರು, ಶ್ರೀಧರ ಅಮೀನ್, ಸತೀಶ್ ಕುಲಾಲ್, ಆನಂದ ಸಾಲ್ಯಾನ್, ಪಿ. ಮುಹಮ್ಮದ್, ಲತೀಫ್ ಖಾನ್, ಲೋಕೇಶ್ ಪೂಜಾರಿ, ಇಂದಿರಾ ಚಂದಪ್ಪ, ಶುಭಾ ಇಂದಿರೇಶ್, ರಮೇಶ್ ಪೂಜಾರಿ, ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಸುಧಾಕರ ಮಡಿವಾಳ, ವೆಂಕಟೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಎಂಆರ್‌ಪಿಎಲ್ ವತಿಯಿಂದ ಕಾಲೇಜಿಗೆ ಒದಗಿಸಲಾದ ಸೀಸಿ ಟೀವಿಯನ್ನು ಸಚಿವರು ಲೋಕಾರ್ಪಣೆಗೊಳಿಸಿದರು. ’ಮೂಡಣ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸಚಿವ ರಮಾನಾಥ ರೈ, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಅಧಿಕಾರಿ ರಾಜಶೇಖರ ಪುರಾಣಿಕ್ ಹಾಗೂ ಎಂಆರ್‌ಪಿಎಲ್ ಅಧಿಕಾರಿ ಯು.ವಿ. ಐತಾಳ್ ಅವರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕ ದಾಮೋದರ ಇ. ಹಾಗೂ ವಿದ್ಯಾರ್ಥಿನಿ ಸುಶ್ಮಿತಾ ಎಸ್.ಎ. ಇವರು ನಿವೃತ್ತ ಪ್ರಾಂಶುಪಾಲೆ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಕಲಿಕೆಯಲ್ಲಿ ಹಾಗೂ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ ಕಾರ್ಯಕ್ರಮಗಳು ನಡೆಯಿತು.
ಕಾಲೇಜು ಪ್ರಭಾರ ಪ್ರಾಂಶುಪಾಲ ಯೂಸುಫ್ ಸ್ವಾಗತಿಸಿ, ಉಪನ್ಯಾಸಕ ವೆಂಕಟೇಶ್ವರ ಭಟ್ ವಂದಿಸಿದರು. ವಿದ್ಯಾರ್ಥಿನಿ ಧನುಷಾ ಮತ್ತು ಬಳಗ ನಾಡಗೀತೆ ಹಾಡಿದರು. ಉಪನ್ಯಾಸಕರಾದ ಯಶೋಧಾ ಕೆ. ವರದಿ ವಾಚಿಸಿ, ಅಬ್ದುಲ್ ರಝಾಕ್ ಕಾರ್ಯಕ್ರಮ ನಿರೂಪಿಸಿದರು.