ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ವಾಸು ಪೂಜಾರಿ ಪುರಸಭೆಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.
ಹಿಂದಿನ ಸಾಮಾನ್ಯ ಸಭೆಗೂ ಮುನ್ನ ಬೆಳಗ್ಗಿನ ಹೊತ್ತಿನಲ್ಲಿ ವಾಸು ಪೂಜಾರಿಯವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅದಾಗಿ ಕೂಡಲೇ ಸಾಮಾನ್ಯ ಸಭೆ ನಡೆದಿತ್ತು. ಅಧ್ಯಕ್ಷ, ಉಪಾಧ್ಯಕ್ಷರ ಸಾಲಿನಲ್ಲಿ ವಾಸು ಪೂಜಾರಿ ಆಸನಗ್ರಹಣ ಮಾಡಿದ್ದರು.
ಅದಾಗಿ ಮತ್ತೊಂದು ಸಾಮಾನ್ಯ ಸಭೆಯೂ ನಡೆಯಿತು. ಅಲ್ಲೂ ಸ್ಥಾಯಿ ಸಮಿತಿ ಅಧ್ಯಕ್ಷರು ಉಪಾಧ್ಯಕ್ಷರ ಪಕ್ಕ ಕುಳಿತುಕೊಂಡಿದ್ದರೇ ವಿನ: ಅಧಿಕಾರ ಸ್ವೀಕಾರ ಸಮಾರಂಭ ನಡೆಸಿರಲಿಲ್ಲ. ಇದೀಗ ಸೋಮವಾರ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಉಪಸ್ಥಿತಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.
ಈ ಸಂದರ್ಭ ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಬುಡಾ ಅಧ್ಯಕ್ಷ ಸದಾಶಿವ ಬಂಗೇರಾ, ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಮೆಸ್ಕಾಂ ಬಂಟ್ವಾಳ ಶಾಖೆಯ ಸಲಹಾ ಸಮಿತಿಯ ಸದಸ್ಯರಲ್ಲೋರ್ವರಾದ ವೆಂಕಪ್ಪ ಪೂಜಾರಿ, ಪುರಸಭಾ ಕಾಂಗ್ರೆಸ್ ಸದಸ್ಯರು ಹಾಗೂ ಪಕ್ಷದ ಮುಖಂಡರಾದ ಜನಾರ್ದನ ಚಂಡ್ತಿಮಾರ್, ಪ್ರಶಾಂತ್ ಕುಲಾಲ್, ಮಲ್ಲಿಕಾ ಶೆಟ್ಟಿ ಮೊದಲಾದವರು ಹಾಜರಿದ್ದು, ಶುಭಹಾರೈಸಿದರು.
ಹಿರಿಯ ಸದಸ್ಯ ವಾಸು ಪೂಜಾರಿ ಅವರಿಗೆ ಅಧಿಕಾರ ಸ್ವೀಕರಿಸಿದೊಡನೆ ಸವಾಲಿನ ಕೆಲಸಗಳು ಮುಂದೆ ನಿಂತಿವೆ. ಪರಿಸರ ಸಚಿವರ ಕನಸಿನ ನಿರ್ಮಲ ಬಂಟ್ವಾಳ ಸಾಕಾರಗೊಳಿಸಬೇಕಾದರೆ ಬಂಟ್ವಾಳದ ಯಾವ ಮೂಲೆಯಲ್ಲೂ ಕಸ ಇರಬಾರದು. ಆದರೆ ಕಂಡಕಂಡಲ್ಲಿ ಕಸ ಎಸೆಯುವುದು ಹಾಗೂ ಕಸ ವಿಲೇವಾರಿ ನಿರ್ವಹಣೆ, ಇದನ್ನು ನಿರ್ವಹಿಸಲು ಪರಿಸರ ಎಂಜಿನಿಯರ್ ಸಹಿತ ಸಿಬ್ಬಂದಿ ಕೊರತೆ ಹೀಗೆ ಸಮಸ್ಯೆಗಳು ಪುರಸಭೆಯ ಒಳಗೂ ಹೊರಗೂ ಇವೆ. ಮೀಟಿಂಗ್ ಗಳಲ್ಲಿ ಮುಲಾಜಿಲ್ಲದೆ ತಮ್ಮ ವಿಷಯ ಮಂಡಿಸುವ ವಾಸು ಪೂಜಾರಿ ಅವರಿಗೆ ಅಧಿಕಾರ ಗ್ರಹಣದ ಬಳಿಕ ದೊರಕಿರುವ ಕೆಲವೇ ತಿಂಗಳುಗಳಲ್ಲಿ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವುದೇ ದೊಡ್ಡ ಸವಾಲು. ಎಲ್ಲರ ಸಹಕಾರದಿಂದ ಕರ್ತವ್ಯ ನಿರ್ವಹಿಸುವ ವಾಸು ಪೂಜಾರಿ ಅವರ ಬಳಿ ಹಲವು ಕನಸುಗಳಿವೆ.
ಈ ಹಿನ್ನೆಲೆಯಲ್ಲಿಯೇ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಾಸು ಪೂಜಾರಿ ಅವರು ಸಮಿತಿಯ ಮೊದಲ ಸಭೆಯನ್ನು ನಡೆಸಿದರು.
ಪುರಸಭಾ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರಲ್ಲದೆ, ಒಣ ಮತ್ತು ಹಸಿ ಕಸ ಪ್ರತ್ಯೇಕವಾಗಿ ಸಂಗ್ರಹಿಸಿಡಲು ಪುರವಾಸಿಗಳಿಗೆ ನೀಡಲು ಬಾಕಿಯರುವ ಬಕೆಟ್‌ಗಳನ್ನು ತಕ್ಷಣ ವಿತರಿಸಲು ಮುಂದಾಗುವಂತೆ ಸೂಚಿಸಿದರು.
ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ಪುರಸಭೆಗೆ ಬರುವಂತಹ ಜನ ಸಾಮಾನ್ಯರಿಗೆ ಅಲೆದಾಡಿಸುವುದಾಗಲಿ, ತೊಂದರೆ ನೀಡದೇ ಭ್ರಷ್ಟಾಚಾರ ರಹಿತವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಾಗೆಯೇ ಪುರಸಭೆಯ ವ್ಯಾಪ್ತಿಯಲ್ಲಿ ಚರಂಡಿ, ರಸ್ತೆ ಹಾಗೂ ದಾರಿದೀಪ ಇಲ್ಲದೆಡೆ ದಾರಿದೀಪ ಅಳವಡಿಸುವ ಕುರಿತು ಪರಿಶೀಲನೆ ನಡೆಸುವಂತೆ ಇಂಜಿನೀಯರ್ ಡೊಮೆನಿಕ್ ಡಿಮೆಲ್ಲೊ ಅವರಿಗೆ ನಿರ್ದೇಶಿಸಿದರು. ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.