ಕವರ್ ಸ್ಟೋರಿ

ಇವರ NOTE ನೋಟವೇ ಭಿನ್ನ

  • ಕಲ್ಲಡ್ಕ ಯುವ ಉದ್ಯಮಿ ಯಾಸೀರ್ ವಸ್ತುಸಂಗ್ರಹ
  • www.bantwalnews.com COVER STORY

 

ನಿಮ್ಮ ಕೈಯಲ್ಲಿ ಹತ್ತು ರೂಪಾಯಿ ನೋಟಿದ್ದರೆ ಏನು ಮಾಡುತ್ತೀರಿ?

ಅದನ್ನು ಹೇಗೆ ಖರ್ಚು ಮಾಡುವುದು ಎಂದು ಯೋಚಿಸುವುದು ಸಾಮಾನ್ಯರ ಗ್ರಹಿಕೆ. ಆದರೆ ಕಲ್ಲಡ್ಕದ ಉದ್ಯಮಿ ಯಾಸೀರ್ ಅವರ ಕೈಗೆ ಆ ನೋಟು ಸಿಕ್ಕರೆ ಅದರ ನಂಬರ್ ನಿಂದ ಹಿಡಿದು ಚಿತ್ರದವರೆಗೆ ಆಳವಾದ ಅಧ್ಯಯನ ಸಾಗುತ್ತದೆ. ಬಳಿಕ ಅಂಥದ್ದೇ ಸೀರಿಯಲ್ ನಂಬ್ರದ ಹುಡುಕಾಟಕ್ಕೆ ಅವರು ಹೊರಡುತ್ತಾರೆ. ಅಂಥದ್ದೊಂದು ಹವ್ಯಾಸವನ್ನು ಬಿಡುವಿಲ್ಲದ ಕೆಲಸಗಳ ನಡುವೆಯೂ ಯಾಸೀರ್ ಆರಂಭಿಸಿ ಹದಿನೈದು ವರ್ಷಗಳಾದವು. ರಾಜ್ಯದ ಕೆಲವೇ ಕೆಲವು ನೋಟು, ನಾಣ್ಯ ಸಹಿತ ಕರೆನ್ಸಿ ಸಂಗ್ರಾಹಕರಲ್ಲಿ ಯಾಸೀರ್ ಒಬ್ಬರು.

ಮನೆಯವರ ಪ್ರೋತ್ಸಾಹದ ಜೊತೆಗೆ ಸ್ನೇಹಿತರ ಸಹಕಾರವನ್ನು ನೆನಪಿಸುವ ಯಾಸೀರ್, ಮುಂಬೈ ಸಹಿತ ಹಲವೆಡೆ ಪ್ರದರ್ಶನಗಳನ್ನು ನೀಡಿದ್ದಾರೆ. ಇವುಗಳನ್ನು ಜತನದಿಂದ ಕಾಪಿಡುವುದರ ಜೊತೆಗೆ ಸಂಗ್ರಹಾಲಯವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ, ಆಸಕ್ತರಿಗೆ ಪ್ರಾಚೀನ ಬದುಕನ್ನು ಪರಿಚಯಿಸುವ ಇರಾದೆ ಯಾಸೀರ್ ಅವರಿಗಿದೆ.

ಇದು ಅವರ ಖಾಸಗಿ ಹವ್ಯಾಸ. ಇಷ್ಟೇ ಅಲ್ಲ, ದೀವಟಿಗೆಯಿಂದ ಹಿಡಿದು, ಪಾತ್ರೆ ಪಗಡಗಳು ಅಷ್ಟೇ ಏಕೆ ಸಾಫ್ಟ್ ಡ್ರಿಂಕ್ಸ್ ಬಾಟಲಿಗಳಿಂದ ಹಿಡಿದು ಸ್ಟ್ಯಾಂಪುಗಳು ಹೀಗೆ ಅವರ ಸಂಗ್ರಹ ವೈವಿಧ್ಯ ಅಪಾರ…

ಲೋಕಲ್ ಸಾಫ್ಟ್ ಡ್ರಿಂಕ್ ಬಾಟಲಿಗಳು ಎನಿಂದ ಝಡ್ ವರೆಗೆ, ಹಳೆದ ದಿನಬಳಕೆಯ ವಸ್ತುಗಳಿಂದ ಹೊಸ ವಸ್ತುಗಳವರೆಗೆ ಯಾಸೀರ್ ಆಸಕ್ತಿ ಬೆಳೆಯುತ್ತಾ ಹೋಗುತ್ತದೆ.

ಎಲ್ಲರೂ ನೋಟು, ನಾಣ್ಯಗಳನ್ನು ವ್ಯವಹಾರಕ್ಕಾಗಿ ಗಮನಿಸಿದರೆ, ಯಾಸೀರ್ ಅವುಗಳಲ್ಲಿ ಬೇರೆಯದ್ದನ್ನೇ ಕಾಣುತ್ತಾರೆ. ಅವುಗಳ ಸೀರಿಯಲ್ ನಂಬ್ರದಿಂದ ಸಹಿವರೆಗೆ ಎಲ್ಲವೂ ಸಂಗ್ರಾಹ್ಯದ ವಿಚಾರಗಳಾಗಿರುತ್ತವೆ.

ಯುವ ಉದ್ಯಮಿ ಯಾಸೀರ್ ಕಳೆದ 15 ವರ್ಷಗಳಿಂದ ಕಲ್ಲಡ್ಕದ ತಮ್ಮ ಮನೆಯಲ್ಲಿ ವಸ್ತುಸಂಗ್ರಹ ಮಾಡಿಕೊಂಡು ಬಂದಿದ್ದಾರೆ. ಸ್ನೇಹಿತರ ಸಹಕಾರದಿಂದ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ.

ಮೌರ್ಯ, ಅಲುಪ, ಗಂಗ, ಕದಂಬ, ಪಲ್ಲವ, ಚೋಳ, ಕೆಳದಿ, ಟಿಪ್ಪು, ಮೈಸೂರಿನ ಒಡೆಯರು, ಮೊಘಲ್ ಹೀಗೆ ರಾಜಮಹಾರಾಜರ ಕಾಲದಿಂದ ಇತ್ತೀಚಿಗಿನವೆಗಿನ ನಾಣ್ಯ, ನೋಟು, ಪರಿಕರಗಳು, ಸ್ಟ್ಯಾಂಪ್, ವೃತ್ತಪತ್ರಿಕೆಗಳ ಸಂಗ್ರಹ. ಅರ್ಧ ಆಣೆಯಿಂದ 10 ರೂವರೆಗಿನ ನಾಣ್ಯ, 1ರಿಂದ 2 ಸಾವಿರದವರೆಗಿನ ನೋಟುಗಳು, ಕರ್ನಾಟಕದ ಮುಖ್ಯಮಂತ್ರಿ, ದೇಶದ ಪ್ರಧಾನಿಗಳು, ಅಮೇರಿಕ, ಭಾರತದ ಅಧ್ಯಕ್ಷರ ಸಹಿತ ಗಣ್ಯರ ಜನನ ದಿನಾಂಕ, ತಿಂಗಳು, ವರ್ಷ ಇವುಗಳನ್ನು ತಿಳಿಸುವ 10 ರೂ ಮುಖಬೆಲೆಯ ನೋಟುಗಳು, ದೇಶ, ವಿದೇಶಗಳ ಪ್ಲಾಸ್ಟಿಕ್ ನೋಟುಗಳು, ನಾಣ್ಯಗಳು ಇಲ್ಲಿವೆ.

ಕಣ್ಣಿಗೆ ಹಾಕುವ ಮಸಿ ತುಂಬಿಸುವ ಕರಂಡೆ, ಬ್ರಿಟಿಷರು ಜೇತು ತುಂಬಿಸುತ್ತಿದ್ದ ಮಣ್ಣಿನ ಹಂಡೆ, ಎನಿಂದ ಝಡ್ ವರೆಗಿನ ಅಕ್ಷರಗಳ ಆರಂಭಗೊಳ್ಳುವ ಬಾಟಲಿಗಳು.. ಹೀಗೆ ಯಾಸೀರ್ ಸಂಗ್ರಹದಲ್ಲಿ ಒಂದೆರಡಲ್ಲ, ಸಾವಿರಕ್ಕೂ ಅಧಿಕ ವಸ್ತುಗಳಿವೆ.

2016ರ ಓಮನ್ ದೇಶದ ತ್ರಿಡಿ ನೋಟು, 879 ನಾಣ್ಯಗಳಿಂದ ಕರ್ನಾಟಕ, 1020 ನಾಣ್ಯಗಳಿಂದ ಭಾರತದ ಚಿತ್ರ, ದೇವಸ್ಥಾನಗಳ ಪ್ರಸಾದ ಚೀಲಗಳು ಹೀಗೆ ಯಾಸೀರ್ ವಸ್ತು ಸಂಗ್ರಾಹಕರ ಪೈಕಿ ಭಿನ್ನವಾಗಿ ನಿಲ್ಲುತ್ತಾರೆ.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts