ರಾಜ್ಯಕ್ಕೆ ಮಾದರಿಯಾಗಿರುವ ಕಲ್ಲಡ್ಕ ಪುರಾತನ ವಸ್ತು ಹಾಗೂ ಅಪರೂಪದ ನಾಣ್ಯ ಸಂಗ್ರಹಾಲಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವುದಾಗಿ ಸಚಿವ ಯು.ಟಿ.ಖಾದರ್ ಅವರು ಹೇಳಿದರು. ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯ ಬಳಿಯ ಕಲ್ಲಡ್ಕ ಪುರಾತನ ವಸ್ತು ಹಾಗೂ ನಾಣ್ಯ ಸಂಗ್ರಹಾಲಯ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ ಅವರು, ಕೇಂದ್ರದ ಸ್ಥಾಪಕರ ಕಾರ್ಯವೈಖರಿ, ಸಾಧನೆ ಹಾಗೂ ಶ್ರದ್ಧೆಯನ್ನು ಶ್ಲಾಘಿಸಿದರು. ಕೇಂದ್ರದ ಮುಖಸ್ಥ ಕೆ.ಎಸ್. ಯಾಸೀರ್ ಅವರು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪುರಾತನ ಕಾಲದ ವೈಭವ, ಆರ್ಥಿಕ ಸ್ಥಿತಿಗತಿ, ಜೀವನ ಶೈಲಿಯನ್ನು ಮುಂದಿನ ಪೀಳಿಗೆ ಪರಿಚಿಯಿಸುವ ಕಾರ್ಯ ಅಭಿನಂದನಾರ್ಹ ಎಂದರು.
ಯುವ ಜನರನ್ನು ಸಾಹಿತ್ಯ, ಸಾಂಸ್ಕೃತಿಕ, ಜಾನಪದ, ಇತಿಹಾಸ ಹಾಗೂ ಕಲಾ ಕ್ಷೇತ್ರದತ್ತ ಆಕರ್ಷಿತಗೊಳಿಸಲು ಪ್ರಯತ್ನಿಸುತ್ತಿರುವ ಯಾಸೀರ್ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರಲ್ಲಿ ಸಮಾಲೋಚಿಸಿ, ಸಂಬಂಧಿತ ಇಲಾಖೆಯ ಗಮನ ಸೆಳೆಯುವುದಾಗಿ ತಿಳಿಸಿದರು.
ವಸ್ತು ಸಂಗ್ರಹಾಲಯ ಕೇಂದ್ರದ ವಿವಿಧ ಗ್ಯಾಲರಿಯಲ್ಲಿರುವ ದೇಶ- ವಿದೇಶಗಳ ನಾಣ್ಯ, ಕರೆನ್ಸಿ, ಪ್ರಾಚೀನ ವಸ್ತುಗಳ ಬಗ್ಗೆ ಕೇಂದ್ರದ ಮುಖ್ಯಸ್ಥ ಕೆ.ಎಸ್. ಯಾಸೀರ್ ಮಾಹಿತಿ ನೀಡಿದರು. ಮುರಬೈಲ್ ಬ್ರದರ್ಸ್ ನ ಸದಸ್ಯರಾದ ಹ್ಯಾರೀಸ್, ನಝೀರ್, ಸಿದ್ದೀಕ್, ಸುಲೈಮಾನ್, ಇರ್ಫಾನ್, ಜಮಾಲ್, ಮಹಮ್ಮದ್, ಮಸೂದ್, ಶಫಿ, ಇಸ್ಮಾಯಿಲ್ ಸಹಕರಿಸಿದರು. ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಐಡಾ ಸುರೇಶ್, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ರಶೀದ್ ವಿಟ್ಲ, ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಲತೀಫ್ ನೇರಳಕಟ್ಟೆ, ಹಮೀದ್ ಗೋಳ್ತಮಜಲು, ಹಿದಾಯ ಫೌಂಡೇಶನ್ ಅಧ್ಯಕ್ಷ ಹಾಜಿ ಮಹಮ್ಮದ್ ಹನೀಫ್ ಗೋಳ್ತಮಜಲು, ಗೋಳ್ತಮಜಲು ಗ್ರಾ.ಪಂ. ಸದಸ್ಯ ಯೂಸುಫ್, ಪ್ರಮುಖರಾದ ಪ್ರಹ್ಲಾದ ಶೆಟ್ಟಿ ಮಾಣಿ, ಹಮೀದ್ ಕಲ್ಲೇಗ, ಡಿ.ಕೆ.ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.