ಸುತ್ತಲೂ ಗಿರಿ ಶೃಂಗಗಳ ಸಾಲು, ಪುಣ್ಯ ನದಿ ಗಂಗೆಯ ನಿನಾದ…ರಮಣೀಯ ಮನೋಹರ ದೇವಭೂಮಿ ಹಿಮಾಲಯ ಪರ್ವತದ ತಪ್ಪಲ್ಲಲ್ಲಿರುವ ಉತ್ತರ ಖಾಂಡ ರಾಜ್ಯದ ಹರಿದ್ವಾರ.
ಇಂತಹ ಪಾವನ ನಾಡಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಯವರ ಸಾಧನಾ ಕುಟೀರ ಶನಿವಾರ ಲೋಕಾರ್ಪಣೆಗೊಂಡಿತು.
ಉತ್ತರ ಭಾಗದ ಸ್ವಾಮೀಜಿಗಳು ದಕ್ಷಿಣ ಭಾರತದಕ್ಕೆ ಆಗಮಿಸಿ ಗುರು ಪರಂಪರೆಯನ್ನು ಸ್ಥಾಪಿಸಿದ ಹಲವು ಉದಾಹರಣೆಗಳಿವೆ. ಆದರೆ ದಕ್ಷಿಣ ಭಾರತದ ಸ್ವಾಮೀಜಿಯೊಬ್ಬರು ಹರಿದ್ವಾರದಲ್ಲಿ ಮಠ ಸ್ಥಾಪಿಸಿ ಗುರು ಪರಂಪರೆಯನ್ನು ಉತ್ತರ ಭಾಗಕ್ಕೆ ವಿಸ್ತರಿಸಿದ ಮೊದಲ ಸನ್ಯಾಸಿ ಕನ್ಯಾಡಿ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ . ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಶಾಖಾ ಮಠಗಳನ್ನು ಸ್ಥಾಪಿಸಿದ ಶ್ರೀಗಳು ಮೂಲ ಕ್ಷೇತ್ರದಿಂದ ಸುಮಾರು 2800 ಕಿ. ಮೀ. ದೂರದಲ್ಲಿರುವ ಹರಿದ್ವಾರದಲ್ಲಿ ಶಾಖಾ ಮಠವನ್ನು ತೆರೆಯುವ ಮೂಲಕ ಉತ್ತರದಲ್ಲೂ ಗುರು ಪರಂಪರೆಯನ್ನು ಆರಂಭಿಸಿದ್ದಾರೆ. ದಕ್ಷಿಣವನ್ನು ಉತ್ತರದೊಂದಿಗೆ ಬೆಸೆಯುವ ಕಾರ್ಯ ಮಾಡಿದ್ದಾರೆ.
ಹರಿದ್ವಾರದ ಭುಪತ್ ವಾಲದಲ್ಲಿ
ನಿರ್ಮಾಣಗೊಂಡಿರುವ ಸಾಧನ ಕುಟೀರ ಅಂದಾಜು 2 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಭಕ್ತರೊಬ್ಬರು ಕುಟೀರವನ್ನು ನಿರ್ಮಿಸಿ ಶ್ರೀಗಳಿಗೆ ಗುರುಕಾಣಿಕೆಯಾಗಿ ಸಮರ್ಪಿಸಿದ್ದಾರೆ. ಸ್ವಾಮೀಜಿಗಳು ವರ್ಷದ ಮೂರ್ನಾಲ್ಕು ತಿಂಗಳು ಇಲ್ಲಿ ವಾಸ್ತವ್ಯವಿದ್ದು ಗುರು ಪರಂಪರೆಯನ್ನು ಮುನ್ನಡೆಸಲಿದ್ದಾರೆ. ಉಳಿದ ಅವಧಿಯಲ್ಲಿ ಇಲ್ಲಿನ ಶಿಷ್ಯ ವರ್ಗ ಸಾಧನ ಕುಟೀರದ ಕಾರ್ಯ ಚಟುವಟಿಕೆಗಳನ್ನು ನೋಡಿಕೊಳ್ಳಲಿದೆ. ದಕ್ಷಿಣ ಭಾಗದ ಶ್ರೀಗಳ ಭಕ್ತರು ಹಾಗೂ ಪ್ರವಾಸಿಗರು ಹರಿದ್ವಾರ ಮತ್ತಿತರ ಉತ್ತರ ಭಾರತದ ತೀರ್ಥ ಕ್ಷೇತ್ರಗಳ ಪರ್ಯಟನೆ ಕೈಗೊಂಡಾಗ ಉಳಿದುಕೊಳ್ಳಲು ಸಾಧನ ಕುಟೀರ ಪ್ರಯೋಜನಕಾರಿಯಾಗಿದೆ. ಮೂರು ಅಂತಸ್ತಿನ ಈ ಕಟ್ಟಡದಲ್ಲಿ ಧ್ಯಾನ ಮಂದಿರ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಮಠಗಳ ಕಾರ್ಯ
ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಆರಂಭದಿಂದಲೂ ಉತ್ತರ ಬಾಗದಲ್ಲಿನ ಸಾಧು ಸಂತರೊಂದಿಗೆ ಸಂಪರ್ಕ ಹೊಂದಿದ್ದರು. ಹಿಮಾಲಯ ಭಾಗದಲ್ಲಿ ತಪಸ್ಸು ಮಾಡಿ ಆಧ್ಯಾತ್ಮ ಜ್ಞಾನ ಸಂಪಾದಿಸಿ ಕೊಂಡವರು.ದಕ್ಷಿಣ ಭಾಗದಲ್ಲಿ ಈಗಾಗಗಲೇ 8 ಶಾಖಾ ಮಠಗಳನ್ನು ಸ್ಥಾಪಿಸಿ ಅಪಾರ ಶಿಷ್ಯವರ್ಗವನ್ನು ಹೊಂದಿದ್ದರೆ. ಇವರ ಮೂಲ ಹಾಗೂ ಶಾಖಾ ಮಠಗಳು ಕೇವಲ ಧಾರ್ಮಿಕ ಹಾಗೂ ಆಧ್ಯಾತ್ಮಿಕತೆಯ ಪರಿಕಲ್ಪನೆಯ ಜೊತೆಗೆ ಸನಾತನ ಹಿಂದೂ ಸಂಸ್ಕತಿ ಮೌಲ್ಯವನ್ನು ತಿಳಿಸುವ ಸಂಸ್ಕಾರಯುತ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ.
ಮಂಗಳೂರಿನಿಂದ 2774 ಕಿ.ಮೀ.ದೂರದಲ್ಲಿದೆ ಉತ್ತರ ಕಾಂಡ್ ರಾಜ್ಯದ ಹರಿದ್ವಾರ. ರಾಷ್ಟ್ರ ರಾಜಧಾನಿ ದೆಹಲಿಯಿಂದ ಡೆಹ್ರಾಡೂನ್( 213 ಕಿ.ಮೀ.) ಹೋಗಿ ಅಲ್ಲಿಂದ ಸುಮಾರು 40 ಕಿ.ಮೀ. ದೂರ ಕ್ರಮಿಸಿದರೆ ಹರಿದ್ವಾರದ ಶ್ಯಾಂ ಲೋಕ್ ಕಾಲೋನಿಯಲ್ಲಿರುವ ಸಾಧನ ಕುಟೀರ ತಲುಪ ಬಹುದು.