www.bantwalnews.com REPORT
ಅಭಿವಂದನಾ ಕಾರ್ಯಕ್ರಮ ಸ್ವೀಕರಿಸಿ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಹೇಳಿಕೆ
ದೇಶದಲ್ಲಿ 85 ಲಕ್ಷ ಟನ್ ಯೂರಿಯಾದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಯೂರಿಯಾ ಕಾರ್ಖಾನೆ ಮಾಡುವ ಕುರಿತು ಚಿಂತನೆ ನಡೆಸಿದೆ ಎಂದು ಅದರ ಅಧ್ಯಕ್ಷ ರಾಜೇಂದ್ರ ಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿ.ಬೆಂಗಳೂರು ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ರಾಷ್ಟ್ರೀಯ ಡೈರಿ ಎಕ್ಸಲೆನ್ಸಿ ಪ್ರಶಸ್ತಿ ಪುರಸ್ಕೃತ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಅವರಿಗೆ ಅಭಿವಂದನಾ ಕಾರ್ಯಕ್ರಮ ಶನಿವಾರ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಅಭಿವಂದನೆ ಸ್ವೀಕರಿಸಿ ಮಾತನಾಡಿದ ಡಾ.ಎಂ.ಎನ್.ಆರ್, ಬೆಂಗಳೂರಿನ ತ್ಯಾಜ್ಯ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರಕಾರದ ಸಹಕಾರದೊಂದಿಗೆ ಫೆಡರೇಶನ್ ಕೈಜೋಡಿಸಲಿದೆ ಎಂದರು.
ಬೆಂಬಲ ಬೆಲೆ ನೀಡಿ:
ಉತ್ತರ ಕರ್ನಾಟಕದ ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆಯನ್ನುಜ ನಿಗದಿಮಾಡಲಾಗುತ್ತದೆ. ತೊಗರಿಬೇಳೆ, ಜೋಳದಂಥ ಬೆಳೆ ಖರೀದಿಗೆ ಕೇಂದ್ರ, ರಾಜ್ಯ ಬೆಂಬಲ ಬೆಲೆ ನಿಗದಿ ಮಾಡುತ್ತದೆ. ಆದರೆ ದಕ್ಷಿಣ ಕನ್ನಡದ ಬೆಳೆಗಳಿಗೆ ಯಾಕೆ ಬೆಂಬಲ ಬೆಲೆ ದೊರಕುವುದಿಲ್ಲ ಎಂದು ಪ್ರಶ್ನಿಸಿದ ಅವರು ಕೃಷಿಕ ಭದ್ರತೆಯಲ್ಲಿ ಜೀವಿಸಬೇಕು ಎಂದಾದರೆ ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿ ಮಾಡುವ ಕಾರ್ಯವಾಗಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಅವರು ಒತ್ತಾಯಿಸಿದರು.
ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಮಾತನಾಡಿ, ಸನ್ಮಾನ ಸ್ವೀಕಾರವೆಂದರೆ ಜವಾಬ್ದಾರಿಗಳು ಮತ್ತಷ್ಟು ಹೆಗಲಿಗೇರಿದೆ ಎಂದರ್ಥ. ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಚ್ಯುತಿ ತರದಂತೆ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.
ಛಲಗಾರ:
ಬಂಟ್ವಾಳ ತಾಲೂಕಿನ ಸಹಕಾರ ಸಂಘಗಳು, ನವೋದಯ ಸ್ವಸಹಾಯ ಸಂಘಗಳು ಹಾಗೂ ಸಮಸ್ತ ಸಹಕಾರಿಗಳ ಬಂಧುಗಳ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಣ್ಯ ಸಚಿವ ಬಿ.ರಮಾನಾಥ ರೈ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರ ಕ್ಷೇತ್ರವನ್ನು ಎತ್ತರಕ್ಕೆ ಕೊಂಡೊಯ್ದ ಛಲಗಾರನಾದರೆ, ರವಿರಾಜ ಹೆಗ್ಡೆ ಹೈನುಗಾರರಿಗೆ ಶಕ್ತಿ ನೀಡಿದವರು ಎಂದು ಶ್ಲಾಘಿಸಿದರು.
ಪ್ರಯೋಗಶೀಲ ರೈತರ ಕೊಡುಗೆ:
ಅಭಿವಂದನಾ ಭಾಷಣ ಮಾಡಿದ ದಕ್ಷಿಣ ಕನ್ನಡ ಕ್ಷೇತ್ರ ಸಂಸದ ನಳಿನ್ ಕುಮಾರ್ ಕಟೀಲ್, ರಾಜೇಂದ್ರ ಕುಮಾರ್ ಅವರು ಭವಿಷ್ಯ ಕಾಲದ ಕತ್ತಲನ್ನು ಗುರುತಿಸಿ ಅದಕ್ಕೆ ಬೆಳಕು ನೀಡುವ ಛಾತಿಯುಳ್ಳ ನಾಯಕರು. ಆತ್ಮಹತ್ಯೆ ಮಾಡಿಕೊಳ್ಳದೆ ಪ್ರಯೋಗಶೀಲನಾಗಿ ಇಂದು ರೈತ ಮುನ್ನಡೆಯಬೇಕಾದರೆ ಅದಕ್ಕೆ ಡಿಸಿಸಿ ಬ್ಯಾಂಕ್ ನೇತೃತ್ವದ ಸಹಕಾರ ಚಳವಳಿ ಮತ್ತು ರಾಜೇಂದ್ರ ಕುಮಾರ್ ಅವರ ಬೆಂಗಾವಲು ಇದೆ. ಇಂದು ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೇ ಹಾಲು ಕೊಡುವಷ್ಟು ಬೆಳೆದಿದೆ ಎಂದಾದರೆ ಅದರ ಹಿಂದೆ ರವಿರಾಜ ಹೆಗ್ಡೆ ಪರಿಶ್ರಮ ಇದೆ ಎಂದರು.
ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಅಭಿವಂದನಾ ಕಾರ್ಯಕ್ರಮದ ಕುರಿತು ವಿವರ ನೀಡಿದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಹಿರಿಯ ಸಹಕಾರಿ ಕೊಂಕೋಡಿ ಪದ್ಮನಾಭ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್, ಸಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಹಾಪ್ಕಾಮ್ಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ, ಪಿಎಲ್ಡಿ ಬ್ಯಾಂಕ್ ಬಂಟ್ವಾಳ ಅಧ್ಯಕ್ಷ ಸುದರ್ಶನ ಜೈನ್, ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಬಂಟ್ವಾಳ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಸದಾಶಿವ ಉಳ್ಳಾಲ್, ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಮಂಜುನಾಥ ಸಿಂಗ್, ಸ.ಸಂ.ಅಭಿವೃದ್ಧಿ ಅಧಿಕಾರಿ ತ್ರಿವೇಣಿ, ಅಭಿನಂದನಾ ಸಮಿತಿ ಪದಾಧಿಕಾರಿಗಳಾದ ಬಿ.ಪದ್ಮಶೇಖರ ಜೈನ್, ಜಿ.ಆನಂದ, ಆನಂದ ಪಿ, ಗಣೇಶ ಕಾರಂತ, ಸುಧಾಕರ ಶೆಟ್ಟಿ, ಈಶ್ವರ ನಾಯ್ಕ, ಕೇಶವ ಕಿಣಿ ಎಚ್, ಯೋಗೀಶ್ ಎಚ್. ಉಪಸ್ಥಿತರಿದ್ದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ವಂದಿಸಿದರು. ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.